8 ಗಂಟೆ ಮೊಬೈಲ್ ಬಳಸದ ಕಾರಣಕ್ಕೆ 1 ಲಕ್ಷ ರೂಪಾಯಿ ಗೆದ್ದ ಮಹಿಳೆ!
8 ಗಂಟೆಗಳ ಕಾಲ ಸೋಶಿಯಲ್ ಮೀಡಿಯಾ ಮಾತ್ರವಲ್ಲ ಮೊಬೈಲ್ ಕೂಡ ಬಳಸುವಂತಿಲ್ಲ ಎನ್ನುವ ಸ್ಪರ್ಧೆಯಲ್ಲಿ ಮಹಿಳೆಯೊಬ್ಬಳು ಗೆಲುವು ಕಂಡಿದ್ದಾಳೆ. ಇದಕ್ಕಾಗಿ ಆಕೆಗೆ 1 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಎಂಟು ಗಂಟೆಗಳ ಕಾಲ ಮೊಬೈಲ್ ಫೋನ್ ಬಳಸದೆ ಕುಳಿತಿದ್ದಕ್ಕಾಗಿ ನೈಋತ್ಯ ಚೀನಾದ ಓರ್ವ ಯುವತಿಗೆ 10,000 ಯುವಾನ್ (1,400 ಯುಎಸ್ ಡಾಲರ್) ಬಹುಮಾನವಾಗಿ ದೊರೆತಿದೆ. ಅಂದರೆ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ರೂಪಾಯಿಗಳನ್ನು ಆಕೆ ಗೆದ್ದುಕೊಂಡಿದ್ದಾಳೆ. ನವೆಂಬರ್ 29 ರಂದು ಚಾಂಗ್ಕಿಂಗ್ ಮುನ್ಸಿಪಾಲಿಟಿಯಲ್ಲಿರುವ ಶಾಪಿಂಗ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಅಪರೂಪದ ಬಹುಮಾನವನ್ನು ಗೆದ್ದಿದ್ದಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ 100 ಸ್ಪರ್ಧಿಗಳ ಪೈಕಿ ಅಂತಿಮ ಸುತ್ತಿಗೆ 10 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಸ್ಪರ್ಧೆಯ ಸಂಘಟಕರು ಒದಗಿಸಿದ ಹಾಸಿಗೆಯ ಮೇಲೆ ಮೊಬೈಲ್ ಫೋನ್ ಬಳಸದೆ ಎಂಟು ಗಂಟೆಗಳ ಕಾಲ ಕಳೆಯುವುದು ಸ್ಪರ್ಧಿಗಳು ಮಾಡಬೇಕಾದ ಕೆಲಸ. ಸ್ಪರ್ಧೆಗೆ ಮುನ್ನ, ಸ್ಪರ್ಧಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸಂಘಟಕರಿಗೆ ನೀಡಬೇಕು. ಜೊತೆಗೆ ಐಪ್ಯಾಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಂತೆ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅವಕಾಶವಿಲ್ಲ. ತುರ್ತು ಪರಿಸ್ಥಿತಿಗಳಲ್ಲಿ, ಭಾಗವಹಿಸುವವರು ತಮ್ಮ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಲು ಸಂಘಟಕರು ಒದಗಿಸುವ ಕರೆ ಮಾಡುವ ಸೌಲಭ್ಯವಿರುವ ಹಳೆಯ ಮೊಬೈಲ್ ಫೋನ್ ಅನ್ನು ಮಾತ್ರ ಬಳಸಬಹುದಾಗಿತ್ತು.
ಸ್ಪರ್ಧೆಯ ಸಮಯದಲ್ಲಿ ಕುಳಿತ ಮ್ಯಾಟ್‌ನಿಂದ ಅನಗತ್ಯವಾಗಿ ಹೊರಬರಲು ಅವಕಾಶವಿಲ್ಲ. ಶೌಚಾಲಯಕ್ಕೆ ಹೋಗಲು ಐದು ನಿಮಿಷಗಳ ವಿರಾಮವನ್ನು ಮಾತ್ರ ನೀಡಲಾಗಿತ್ತು. ಆಹಾರ ಮತ್ತು ಪಾನೀಯಗಳನ್ನು ಮ್ಯಾಟ್‌ನ ಮೇಲೆ ಕುಳಿತುಕೊಂಡೇ ಸೇವಿಸಬೇಕಿತ್ತು. ಸ್ಪರ್ಧಿಗಳು ಗಾಢ ನಿದ್ರೆ ಮಾಡುವಂತೆಯೂ ಇದ್ದಿರಲಿಲ್ಲ. ಸಣ್ಣ ಪ್ರಮಾಣದ ನಿದ್ರೆಗೆ ಮಾತ್ರವೇ ಅವಕಾಶವಿತ್ತು. ಸ್ಪರ್ಧಿಗಳ ಕೈಗಳಲ್ಲಿ ಕಟ್ಟಿದ್ದ ಸ್ಮಾರ್ಟ್‌ವಾಚ್‌ನಲ್ಲಿ ಅವರು ಮಾಡಿದ ನಿದ್ರೆಯ ಪ್ರಮಾಣ ಅವರಲ್ಲಿನ ಆಲಸ್ಯದ ಅವಧಿಯನ್ನು ಪರಿಗಣಿಸಿ ಸಂಘಟಕರು ವಿಜೇತರನ್ನು ಆಯ್ಕೆ ಮಾಡಿದ್ದಾರೆ.
ಅಮ್ಯೂಸ್‌ಮೆಂಟ್ ಪಾರ್ಕ್‌ನ ಫನ್ ರೈಡ್ ವೇಳೆ ಮಗನ ಸಾವು, ಪೋಷಕರಿಗೆ ಸಿಕ್ತು 2624 ಕೋಟಿ ಪರಿಹಾರ!
ಹೆಚ್ಚಿನವರು ಸ್ವಲ್ಪ ನಿದ್ದೆ ಮಾಡಿ ಮತ್ತು ಪುಸ್ತಕಗಳನ್ನು ಓದಿ ಸ್ಪರ್ಧಿಗಳು ಸಮಯ ಕಳೆದರು ಎಂದು ವರದಿಗಳು ತಿಳಿಸಿವೆ. ರೋಚಕ ಸ್ಪರ್ಧೆಯ ಕೊನೆಯಲ್ಲಿ ಡಾಂಗ್ ಎಂಬ ಯುವತಿಯನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು. 100 ರಲ್ಲಿ 88.99 ಅಂಕಗಳನ್ನು ಗಳಿಸಿ ಆಕೆ ಚಾಂಪಿಯನ್ ಆಗಿದ್ದಾರೆ. ಹೆಚ್ಚಿನ ಸಮಯ ಹಾಸಿಗೆಯ ಮೇಲೆ ಕಳೆದರೂ, ಗಾಢ ನಿದ್ರೆಗೆ ಜಾರಿಲ್ಲ ಮತ್ತು ಕಡಿಮೆ ಆಲಸ್ಯವನ್ನು ತೋರಿಸಿದ ಸ್ಪರ್ಧಿ ಡಾಂಗ್ ಎಂದು ಸಂಘಟಕರು ವಿಜೇತರನ್ನು ಘೋಷಿಸುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಜ್ಯೋತಿ ರೈ ಜೊತೆ ಕೆಲಸ ಮಾಡ್ತೀರಾ, ಇಲ್ಲಿದೆ ನೋಡಿ ಬ್ಯೂಟಿ ಕೊಟ್ಟಿರೋ ಭರ್ಜರಿ ಆಫರ್!