ಆಕೆ ತನ್ನ ಕೋಣೆಗೆ ಹಿಂತಿರುಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಹಾಸಿಗೆಯ ಮೇಲೆ ಮಲಗಿದಳು ಅಷ್ಟೇ. ಹಾಸಿಗೆಯ ಕೆಳಗಿನಿಂದ

ಹೆಣ್ಣು ಮಕ್ಕಳಿಗಾಗಲೀ, ಗಂಡು ಮಕ್ಕಳಿಗಾಗಲೀ ಸೋಲೋ ಟ್ರಾವೆಲ್ ಈಗೀಗ ಕಾಮನ್ ಆಗಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಪ್ರಯಾಣಿಸುವಾಗ ಸುರಕ್ಷಿತವೆಂದು ಹೇಳಲಾಗುವ ದೇಶಗಳನ್ನು ಹುಡುಕುತ್ತಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ "ಅತ್ಯಂತ ಸುರಕ್ಷಿತ ದೇಶ" ಎಂದು ಟೈಪ್ ಮಾಡಿದರೆ ಜಪಾನ್‌ ಹೆಸರು ಈ ಪಟ್ಟಿಯಲ್ಲಿ ಬರುತ್ತದೆ. ಆದರೆ ಥೈಲ್ಯಾಂಡ್‌ನಿಂದ ಜಪಾನ್‌ಗೆ ಏಕಾಂಗಿಯಾಗಿ ಪ್ರವಾಸಕ್ಕೆ ಹೋದ ಹುಡುಗಿಯ ಅನುಭವ ನಿಜಕ್ಕೂ ಆಘಾತಕಾರಿಯಾಗಿದೆ.

ಹೌದು, ಥೈಲ್ಯಾಂಡ್‌ನ ನಟಾಲಿಸಿ ತಕ್ಸಿಸಿ ಎಂಬ ಯುವತಿ ಜಪಾನ್‌ಗೆ ಕನಸಿನ ಪ್ರವಾಸವನ್ನು ಯೋಜಿಸಿದ್ದರು. ಅವರು ಏಕಾಂಗಿಯಾಗಿ ದೇಶವನ್ನು ಅನ್ವೇಷಿಸಲು ಹೋಟೆಲ್ ಕೋಣೆಯನ್ನು ಕಾಯ್ದಿರಿಸಿದರು. ಬುಕ್ ಮಾಡಿದ ಹೋಟೆಲ್‌ನಲ್ಲಿ ಕೀ-ಕಾರ್ಡ್ ವ್ಯವಸ್ಥೆ ಇತ್ತು. ಆದ್ದರಿಂದ ಅದು ಇನ್ನೂ ಸುರಕ್ಷಿತ ಎಂದು ಆಕೆ ಭಾವಿಸಿದಳು. ದಿನವಿಡೀ ಹೊರಗೆ ಕಳೆದ ನಂತರ, ಆಕೆ ತನ್ನ ಕೋಣೆಗೆ ಹಿಂತಿರುಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಹಾಸಿಗೆಯ ಮೇಲೆ ಮಲಗಿದಳು ಅಷ್ಟೇ. ಹಾಸಿಗೆಯ ಕೆಳಗಿನಿಂದ ವಿಚಿತ್ರ ವಾಸನೆ ಬರುತ್ತಿರುವಂತೆ ಅವಳಿಗೆ ಅನಿಸಿತು.

ನಡುಗುತ್ತಾ ಜೋರಾಗಿ ಕಿರುಚಿದ ನಟಾಲಿಸಿ
ಆಕೆಗೆ ಕಂಫರ್ಬಲ್ ಫೀಲ್ ಬರಲಿಲ್ಲ. ಹಾಗಾಗಿ ನಟಾಲಿಸಿ ಧೈರ್ಯ ತಂದುಕೊಂಡು ಹಾಸಿಗೆಯ ಕೆಳಗೆ ನೋಡಿದಳು. ಅಲ್ಲಿ ಒಬ್ಬ ವ್ಯಕ್ತಿ ಅಡಗಿಕೊಂಡಿದ್ದ. ಅವನ ಕಣ್ಣುಗಳು ಸ್ಪಷ್ಟವಾಗಿ ಅವಳನ್ನು ನೋಡುತ್ತಿದ್ದವು. ಅದನ್ನು ನೋಡಿ ನಟಾಲಿಸಿ ಭಯದಿಂದ ನಡುಗುತ್ತಾ ಜೋರಾಗಿ ಕಿರುಚಿದಳು. ಆ ವ್ಯಕ್ತಿ ತಕ್ಷಣ ಹಾಸಿಗೆಯ ಕೆಳಗಿನಿಂದ ಎದ್ದು ಕೋಣೆಯಿಂದ ಹೊರಗೆ ಓಡಿಹೋದನು. ನಟಾಲಿಸಿ ತಕ್ಷಣ ಹೋಟೆಲ್ ರಿಸೆಪ್ಷನ್‌ಗೆ ಓಡಿ ಸಿಬ್ಬಂದಿಗೆ ವಿಷಯ ತಿಳಿಸಿದಳು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ, ಹೋಟೆಲ್‌ನಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡು ಅವಳು ಮತ್ತೊಮ್ಮೆ ಶಾಕ್ ಆದಳು.

ಬೇರೆ ಹೋಟೆಲ್‌ಗೆ ಶಿಫ್ಟ್
ನಂತರ, ಪೊಲೀಸರು ಬಂದು ಕೊಠಡಿಯನ್ನು ಶೋಧಿಸಿದಾಗ ಆ ವ್ಯಕ್ತಿ ಮರೆತಿದ್ದ ಪವರ್ ಬ್ಯಾಂಕ್ ಮತ್ತು ಯುಎಸ್‌ಬಿ ಕೇಬಲ್ ಸಿಕ್ಕಿತು. ಈ ಇಡೀ ಘಟನೆಯಿಂದ ಅನುಭವಿಸಿದ ಭಾವನಾತ್ಮಕ ಯಾತನೆ ಮತ್ತು ಭಯಾನಕ ಅನುಭವವನ್ನು ಗಮನದಲ್ಲಿಟ್ಟುಕೊಂಡು ನಟಾಲಿಸಿ ಹೋಟೆಲ್‌ನವರಿಗೆ ಸಂಪೂರ್ಣ ಕೊಠಡಿ ಶುಲ್ಕವನ್ನು ಮರುಪಾವತಿಸುವಂತೆ ಕೇಳಿಕೊಂಡರು. ಆದರೆ ಹೋಟೆಲ್ ಆಡಳಿತ ಮಂಡಳಿ ಅವಳಿಗೆ ಪೂರ್ಣ ಮೊತ್ತವನ್ನು ನೀಡಲು ನಿರಾಕರಿಸಿತು. ಆದ್ದರಿಂದ ಅವಳು ಆ ರಾತ್ರಿ ಬೇರೆ ಹೋಟೆಲ್‌ಗೆ ಸ್ಥಳಾಂತರಗೊಂಡಳು.

View post on Instagram

ವಿಡಿಯೋ ಶೇರ್ ಮಾಡಿದ ನಟಾಲಿಸಿ
ಪೊಲೀಸರು ಪೊಲೀಸ್ ವರದಿಯ ಪ್ರತಿಯನ್ನು ಮೇಲ್ ಮೂಲಕ ಕಳುಹಿಸುವುದಾಗಿ ಹೇಳಿದ್ದರೂ, ಅದು ಮರುದಿನದವರೆಗೆ ತಲುಪಲಿಲ್ಲ. ನಟಾಲಿಸಿ ತನ್ನ ಭಯಾನಕ ಅನುಭವವನ್ನು ಇನ್‌ಸ್ಟಾಗ್ರಾಮ್‌ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅವರು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ , "ನಾನು ಜಪಾನ್‌ನ ಹೋಟೆಲ್ ಕೋಣೆಯಲ್ಲಿ ನನ್ನ ಹಾಸಿಗೆಯ ಕೆಳಗೆ ಒಬ್ಬ ವ್ಯಕ್ತಿಯನ್ನು ನೋಡಿದೆ. ಇದು ಸುರಕ್ಷಿತ ಏಕಾಂಗಿ ಪ್ರವಾಸವಾಗಬೇಕಿತ್ತು. ಆದರೆ.." ಎಂದು ಅವರು ತಾವು ತಂಗಿದ್ದ ಎಪಿಎ ಹೋಟೆಲ್‌ನಲ್ಲಿ $510 (ಸುಮಾರು ರೂ. 42,000) ಖರ್ಚು ಮಾಡಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ಎಚ್ಚರಿಕೆಯಿಂದಿರಿ
ಸದ್ಯ ನಟಾಲಿಸಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದುವರೆಗೆ ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಟಾಲಿಸಿಯನ್ನು ಬೆಂಬಲಿಸಿದ್ದಾರೆ ಮತ್ತು ಹೋಟೆಲ್ ಅನ್ನು ಬುಕಿಂಗ್ ಸೈಟ್‌ಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಹೋಟೆಲ್‌ಗಳನ್ನು ಆಯ್ಕೆ ಮಾಡುವಾಗ ಬಹಳ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದಾರೆ.