* ಕೊರೋನಾ ಹೆಚ್ಚಳ ಬಗ್ಗೆ ಡಬ್ಲ್ಯುಎಚ್‌ಒ ಆತಂಕ* ಫೆಬ್ರವರಿಗೆ ಯೂರೋಪಲ್ಲಿ ಇನ್ನೂ 5 ಲಕ್ಷ ಕೋವಿಡ್‌ ಸಾವು?* ನಿಯಮ ಸಡಿಲ, ಲಸಿಕೆ ಪಡೆದದ್ದು ಇದಕ್ಕೆ ಕಾರಣ* ಪ್ರತಿವಾರ 18 ಲಕ್ಷ ಜನರಿಗೆ ಸೋಂಕು ತಗುಲುತ್ತಿದೆ* ಒಂದು ವರ್ಷದ ಹಿಂದಿನ ಗಂಭೀರ ಸ್ಥಿತಿ ಮತ್ತೆ ಮರುಳಿಸಿದೆ

ಜಿನೇವಾ(ನ.05): ಯುರೋಪ್‌ನಲ್ಲಿ (Europe) ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್‌ ಅಲೆಯ (Covid Wave) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (World Health Organisation), ಸೋಂಕು ಮತ್ತು ಸಾವಿನ ಗತಿಯ ಹೀಗೆಯೇ ಮುಂದುವರೆದರೆ ಮುಂದಿನ ಫೆಬ್ರವರಿ (February) ವೇಳೆಗೆ ಇನ್ನೂ 5 ಲಕ್ಷ ಜನರು ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್‌ ವಲಯದ ಮುಖ್ಯಸ್ಥ ಡಾ. ಹನ್ಸ್‌ ಕ್ಲೂಗೆ ‘ಯುರೋಪ್‌ ಹಾಗೂ ಮಧ್ಯಏಷ್ಯಾ ಪ್ರಾಂತ್ಯದ 53 ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಪುನರುತ್ಥಾನಗೊಳ್ಳಲಿರುವ ಮತ್ತು ಈಗಾಗಲೇ ಹೊಸ ಅಲೆಗೆ ಕಾರಣವಾಗಿರುವ ಸೋಂಕು ನಿಜವಾದ ಅಪಾಯವನ್ನು ನಮ್ಮ ಮುಂದಿಟ್ಟಿದೆ. ಕಳೆದ ಕೆಲ ವಾರಗಳಿಂದ ದಾಖಲಾಗುತ್ತಿರುವ ಹೊಸ ಸೋಂಕು, ಸಾವಿನ ಪ್ರಮಾಣ, ಅದು ಹರಡುತ್ತಿರುವ ವೇಗ ಹಾಗೂ ವ್ಯಾಪ್ತಿ ಇಡೀ ಪ್ರದೇಶವನ್ನು ಸಾಂಕ್ರಾಮಿಕದ ಕೇಂದ್ರಬಿಂದುವನ್ನಾಗಿಸಿದೆ. ಒಂದು ವರ್ಷದ ಹಿಂದೆ ಯಾವ ಪರಿಸ್ಥಿತಿ ಇತ್ತೋ ಅದೇ ಮತ್ತೆ ಮರುಕಳಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ 53 ದೇಶಗಳಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಳೆದ ವಾರ ದ್ವಿಗುಣಗೊಂಡಿದೆ. ಈ ಏರಿಕೆ ಗತಿ ಹೀಗೆಯೇ ಮುಂದುವರೆದರೆ ಫೆಬ್ರವರಿ ವೇಳೆಗೆ ಇನ್ನೂ 5 ಲಕ್ಷ ಜನರು ಸೋಂಕಿಗೆ ಬಲಿಯಾಗಲಿದ್ದಾರೆ. ಈ ದೇಶಗಳಲ್ಲಿ ಪ್ರತಿ ವಾರ 18 ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲುತ್ತಿದೆ. ಇದು ಹಿಂದಿನ ವಾರಕ್ಕಿಂತ ಶೇ.6ರಷ್ಟು ಹೆಚ್ಚು. ಇನ್ನು ವಾರಕ್ಕೆ 24000 ಜನರು ಸಾವನ್ನಪ್ಪುತ್ತಿದ್ದಾರೆ. ಇದು ಹಿಂದಿನ ವಾರಕ್ಕಿಂತ ಶೇ.12ರಷ್ಟುಹೆಚ್ಚು ಎಂದು ಹೇಳಿದ್ದಾರೆ.

ಜನರು ಲಸಿಕೆ ಪಡೆಯದೇ ಇರುವುದು, ಕೋವಿಡ್‌ ಮಾರ್ಗಸೂಚಿಗಳಲ್ಲಿ (Covid Guidelines) ಸಡಿಲಿಕೆ ಮಾಡಿದ್ದೇ ಈ ಬೆಳವಣಿಗಳಿಗೆ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು (Vaccination), ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಡಾ.ಹನ್ಸ್‌ ಸಲಹೆ ನೀಡಿದ್ದಾರೆ.

ಇದುವರೆಗೆ ಯುರೋಪ್‌ ದೇಶಗಳಲ್ಲಿ 6.5 ಕೋಟಿ ಜನರಿಗೆ ಸೋಂಕು ತಗುಲಿದ್ದು, 13.16 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಕೋವಿಶೀಲ್ಡ್‌ ಒಪ್ಪಿ, ಇಲ್ಲದಿದ್ರೆ ಪರಿಣಾಮ: ಯುರೋಪ್‌ಗೆ ಭಾರತ ಎಚ್ಚರಿಕೆ

ಭಾರ​ತದ ಸ್ವದೇಶಿ ಲಸಿ​ಕೆ​ಯಾದ ಕೋವ್ಯಾ​ಕ್ಸಿನ್‌ (Covaxin) ಮತ್ತು ಕೋವಿ​ಶೀಲ್ಡ್‌ ಲಸಿಕೆ ?(Covishield vaccine) ಪಡೆ​ದ​ವ​ರಿಗೆ ದೇಶ ಪ್ರವೇ​ಶಕ್ಕೆ ಅವ​ಕಾಶ ಕಲ್ಪಿ​ಸುವಂತೆ ಭಾರತ ಸರ್ಕಾ​ರವು ಯೂರೋಪ್‌ ಒಕ್ಕೂ​ಟದ ಸದಸ್ಯ ರಾಷ್ಟ್ರ​ಗ​ಳಿಗೆ ಕೋರಿ​ದೆ. ಒಂದು ವೇಳೆ ಈ ಲಸಿಕೆಗಳನ್ನು ಒಪ್ಪದೇ ಹೋದರೆ ಯುರೋಪ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಭಾರತದಲ್ಲಿ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗುವುದು ಎಂದು ಎಚ್ಚರಿಸಿದೆ.

ಭಾರ​ತ​ದ​ಲ್ಲಿ ಕೋವಿ​ಶೀಲ್ಡ್‌ ಲಸಿ​ಕೆ ಪಡೆ​ದ ವಿದ್ಯಾ​ರ್ಥಿ​ಗಳು ಮತ್ತು ವಾಣಿ​ಜ್ಯೋ​ದ್ಯ​ಮಿ​ಗಳು ಯುರೋಪ್‌ ಒಕ್ಕೂಟ ರಾಷ್ಟ್ರ​ಗಳು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಪುಣೆ ಮೂಲದ ಸೀರಂ ಸಂಸ್ಥೆಯ ಸಿಇಒ ಅದಾರ್‌ ಪೂನಾ​ವಾಲ ಅವರು ಕೇಂದ್ರ ಸರ್ಕಾರಕ್ಕೆ ಕೋರಿ​ದ್ದರು. ಈ ಹಿನ್ನೆಲೆಯಲ್ಲಿ ಭಾರತ ಈ ಕ್ರಮ ಕೈಗೊಂಡಿದೆ.

ಈವ​ರೆಗೆ ಫೈಝ​ರ್‌/​ಬ​ಯೋ​ಎ​ನ್‌​ಟೆ​ಕ್‌, ಮಾಡೆರ್ನಾ, ಜಾನ್ಸನ್‌ ಅಂಡ್‌ ಜಾನ್ಸನ್‌ ಸೇರಿದಂತೆ ನಾಲ್ಕು ಲಸಿ​ಕೆ ಪಡೆ​ದ​ವರಿಗೆ ಮಾತ್ರ ಯೂರೋಪ್‌ ರಾಷ್ಟ್ರ​ಗಳ ಪ್ರವೇ​ಶಕ್ಕೆ ಅವ​ಕಾ​ಶ​ವಿದೆ.