* ಡೆಲ್ಟಾ ವೈರಸ್‌ನಿಂದ ಬ್ರಿಟನ್‌ನಲ್ಲಿ 3ನೇ ಅಲೆ* 80 ದೇಶಗಳಿಗೆ ಹಬ್ಬಿದ ಡೆಲ್ಟಾ* ಇಡೀ ವಿಶ್ವದಲ್ಲೇ ಅತಿ ಹೆಚ್ಚು ಹಬ್ಬಿದ ವೈರಸ್‌ ಪಟ್ಟದ ಭೀತಿ* ಈಗ ಚೀನಾದಲ್ಲೂ ಡೆಲ್ಟಾ ಹಾವಳಿ

ನವದೆಹಲಿ(ಜೂ.21): ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡ ಡೆಲ್ಟಾವೈರಸ್‌ ಇದೀಗ ಕನಿಷ್ಠ 80 ದೇಶಗಳಿಗೆ ಹಬ್ಬಿದ್ದು, ಶೀಘ್ರವೇ ವಿಶ್ವದಲ್ಲೇ ಅತಿ ಹೆಚ್ಚು ಪ್ರದೇಶಗಳಿಗೆ ಹಬ್ಬಿದ ವೈರಸ್‌ ಎಂಬ ಕಳಂಕಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹಲವು ಬಡ ಮತ್ತು ಹಿಂದುಳಿದ ದೇಶಗಳಲ್ಲಿ ವೈರಸ್‌ ತಳಿ ಪತ್ತೆ ತಂತ್ರಜ್ಞಾನವೇ ಇಲ್ಲದ ಕಾರಣ ವೈರಸ್‌ ಇನ್ನಷ್ಟು ದೇಶಗಳನ್ನು ಈಗಾಗಲೇ ಪ್ರವೇಶಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ, ಬ್ರಿಟನ್‌, ಅಮೆರಿಕ, ಚೀನಾ, ಆಫ್ರಿಕಾ, ಸ್ಕಾ್ಯಂಡಿನೇವಿಯಾ, ಕೆಲ ಯುರೋಪ್‌, ಪೆಸಿಫಿಕ್‌ ದೇಶಗಳಲ್ಲಿ ರೂಪಾಂತರಿ ತಳಿ ಪ್ರವೇಶಿಸಿರುವುದು ಖಚಿತಪಟ್ಟಿದೆ. ಬ್ರಿಟನ್‌ನಲ್ಲಿ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಕೇಸಿನಲ್ಲಿ ಶೆ.90ರಷ್ಟು, ಅಮೆರಿಕದಲ್ಲಿ ಶೇ.10ರಷ್ಟುಪ್ರಕರಣಗಳು ಡೆಲ್ಟಾವೈರಸ್‌ನಿಂದಲೇ ಆಗಿವೆ. ಅಮೆರಿಕದ ಬ್ರೌನ್‌ ವಿವಿಯ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಡೀನ್‌ ಆಶಿಶಾ ಝಾ, ಡೆಲ್ಟಾವೈರಸ್‌ ಅನ್ನು, ಇದುವರೆಗೆ ನಾವು ನೋಡಿರುವ ವೈರಸ್‌ಗಳ ಪೈಕಿ ಅತಿ ಹೆಚ್ಚು ಸಾಂಕ್ರಾಮಿಕವಾದುದು ಎಂದು ಬಣ್ಣಿಸಿದ್ದಾರೆ.

ಈಗ ಚೀನಾದಲ್ಲೂ ಡೆಲ್ಟಾ ಹಾವಳಿ

ಜಗತ್ತಿಗೆಲ್ಲಾ ಕೊರೋನಾ ಹಬ್ಬಿಸಿದ ಚೀನಾದಲ್ಲೂ ಇದೀಗೆ ಡೆಲ್ಟಾವೈರಸ್‌ ಹಾವಳಿ ಕಾಣಿಸಿಕೊಂಡಿದೆ. ಈ ರೂಪಾಂತರಿ ವೈರಸ್‌ಗೆ ತುತ್ತಾದವರು ತೀವ್ರ ಸ್ವರೂಪದ ಜ್ವರಕ್ಕೆ ತುತ್ತಾಗುತ್ತಿದ್ದು, ಬಹುಬೇಗಕ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ ದಕ್ಷಿಣ ಚೀನಾ ಭಾಗದ ವೈದ್ಯರು ಎಚ್ಚರಿಸಿದ್ದಾರೆ. ವುಹಾನ್‌ನಲ್ಲಿ ಮೊದಲಿಗೆ ಕಾಣಿಸಿದ ವೈರಸ್‌ಗೆ ಹೋಲಿಸಿದರೆ ಈ ತಳಿ ಹಬ್ಬುವುದು ಬೇಗ ಆದರೆ ಸೋಂಕಿನ ಪ್ರಮಾಣ ಇಳಿಕೆಯಾಗುವ ಗತಿ ಅತ್ಯಂತ ನಿಧಾನ ಗ್ವಾಂಗ್‌ಝೌ ನಗರದ ಸನ್‌ ಯಾಟ್‌-ಸೆನ್‌ ವಿವಿಯ ಡಾ.ಗ್ವಾನ್‌ ಕ್ಸಿಯಾನ್‌ಡಾಂಗ್‌ ಹೇಳಿದ್ದಾರೆ.