ನವ​ದೆ​ಹ​ಲಿ [ಮಾ.18]: ವಿಶ್ವದಾದ್ಯಂತ ತಲ್ಲಣ ಹುಟ್ಟುಹಾಕಿರುವ ಕೊರೋನಾ ವೈರಸ್‌ ತಡೆ ಮತ್ತು ನಿವಾರಣೆ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌​ಒ) ಬಹುವಾಗಿ ಮೆಚ್ಚಿಕೊಂಡಿದೆ. ಅಲ್ಲದೆ ಕೊರೋನಾ ವೈರಸ್‌ ಅನ್ನು ನಿರ್ವ​ಹಿ​ಸು​ವಲ್ಲಿ ಭಾರ​ತ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಹಾಡಿ ಹೊಗ​ಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್‌ ಬೆಕೆ​ಡ​ಮ್‌, ‘ಕೊರೋನಾ ವೈರಸ್‌ ನಿಯಂತ್ರ​ಣಕ್ಕೆ ಭಾರತ ಸರ್ಕಾರದ ಬದ್ಧತೆ ಮತ್ತು ಪ್ರಧಾನಿ ಕಚೇ​ರಿಯ ಕಾರ್ಯ ಅಗಾಧ ಮತ್ತು ಅತ್ಯಂತ ಶ್ಲಾಘ​ನೀಯ. ಹೀಗಾಗಿ ಭಾರ​ತ ಇದೀಗ ಸುಸ್ಥಿತಿ​ಯ​ಲ್ಲಿದೆ. ಈ ಹೋರಾ​ಟಕ್ಕೆ ಎಲ್ಲರನ್ನೂ ಒಂದು​ಗೂ​ಡಿ​ಸಿ​ದ್ದನ್ನು ಕಂಡು ನಾನು ಬಹಳ ಪ್ರಭಾ​ವಿ​ತನಾ​ಗಿ​ದ್ದೇ​ನೆ’ ಎಂದು ಹೇಳಿ​ದ್ದಾ​ರೆ.

 

ಇದೇ ವೇಳೆ ಸೋಂಕಿಗೆ ಕಾರ​ಣ​ವಾ​ಗುವ ಸಾರ್ಸ್‌- ಕೋವ್‌-2 ಎಂಬ ವೈರಾ​ಣು​ವ​ನ್ನು ಬೇರ್ಪ​ಡಿ​ಸುವಲ್ಲಿ ಯಶಸ್ವಿ ಆಗಿ​ರುವ ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡ​ಳಿ​ಯ ಕಾರ್ಯ​ಕ್ಕೆ ಹೆಂಕ್‌ ಬೆಕೆ​ಡ​ಮ್‌ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾರೆ. ‘ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡ​ಳಿ​ ಮತ್ತು ಆರೋಗ್ಯ ಸಂಶೋ​ಧನಾ ಇಲಾ​ಖೆ ಅತ್ಯು​ತ್ತಮ ಸಂಶೋ​ಧ​ನಾ ವ್ಯವ​ಸ್ಥೆ​ಯನ್ನು ಹೊಂದಿದೆ. ಭಾರ​ತದ ವಿಜ್ಞಾ​ನಿ​ಗಳು ವೈರಾ​ಣು​ವ​ನ್ನು ಗುರು​ತಿ​ಸು​ವಲ್ಲಿ ಯಶಸ್ವಿ ಆಗಿ​ದ್ದಾರೆ. ಕೊರೋನಾ ವೈರ​ಸ್‌ಗೆ ಸಂಶೋ​ಧನೆ ಕೈಗೊಂಡಿ​ರುವ ರಾಷ್ಟ್ರ​ಗಳ ಸಾಲಿಗೆ ಭಾರತವೂ ಸೇರ್ಪಡೆ ಆಗಿ​ದೆ ಎಂದು ಹೇಳಿ​ದ್ದಾ​ರೆ.

ಕೊರೋನಾ ಪೀಡಿತ ಚೀನಾದ ವುಹಾ​ನ್‌​ನಿಂದ ವಿದ್ಯಾ​ರ್ಥಿ​ಗ​ಳು ಮರ​ಳಿ​ದಾಗ ಅವ​ರಲ್ಲಿ ಮೂವ​ರಿಂದ ಮಾದ​ರಿ​ಗ​ಳನ್ನು ಸಂಗ್ರ​ಹಿಸಿ ಪುಣೆ​ಯ​ಲ್ಲಿ​ರು​ವ ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡಳಿ ಹಾಗೂ ನ್ಯಾಷನಲ್‌ ಇನ್ಸಿ​ಟ್ಯೂಟ್‌ ಆಫ್‌ ವೈರಾ​ಲಜಿ ಸೋಂಕುಕಾರಕ ರೋಗಾ​ಣು​ವನ್ನು ಪತ್ತೆ ಮಾಡು​ವಲ್ಲಿ ಯಶಸ್ವಿ ಆಗಿದೆ. ಸೋಂಕು ಕಾರಕ ವೈರಾ​ಣು​ವನ್ನು ಬೇರ್ಪ​ಡಿ​ಸಿ​ದ್ದರಿಂದ ಲಾಭ​ವೆಂದರೆ ಭವಿ​ಷ್ಯ​ದಲ್ಲಿ ಭಾರತ ಕೊರೋ​ನಾಗೆ ತನ್ನದೇ ಆದ ಲಸಿ​ಕೆ​ಯನ್ನು ಕಂಡು​ಹಿ​ಡಿ​ಯು​ವು​ದಕ್ಕೆ ಕಾರ​ಣ​ವಾ​ಗ​ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು.