* ಇಮ್ರಾನ್‌ ಖಾನ್‌ ಪದಚ್ಯುತಿ ಬೆನ್ನಲ್ಲೇ ಇಂದು ಹೊಸ ಪ್ರಧಾನಿ ಆಯ್ಕೆ* ನವಾಜ್‌ ಷರೀಫ್‌ ಸೋದರ ನಾಮಪತ್ರ, ಇಮ್ರಾನ್‌ ಪಕ್ಷದಿಂದ ಖುರೇಷಿ ಕಣಕ್ಕೆ* ಸ್ವಾತಂತ್ರ್ಯ ಹೋರಾಟ ಇನ್ನು ಮುಂದೆ ಆರಂಭ-ಇಮ್ರಾನ್‌ ಖಾನ್‌* ನಾವು ಸೇಡಿನ ರಾಜಕೀಯ ಮಾಡುವುದಿಲ್ಲ-ಶೆಹಬಾಜ್‌ ಷರೀಫ್‌

ಇಸ್ಲಾಮಾಬಾದ್‌(ಏ.11): ಇಮ್ರಾನ್‌ ಖಾನ್‌ ಪದಚ್ಯುತಿ ಹಿನ್ನೆಲೆಯಲ್ಲಿ ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿಯ ಆಯ್ಕೆ ನಡೆಯಲಿದೆ. ಇಮ್ರಾನ್‌ ಪದಚ್ಯುತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಪಕ್ಷ ಮೈತ್ರಿಕೂಟದ ನೇತಾರ ಹಾಗೂ ಪಿಎಂಎಲ್‌-ಎನ್‌ ನಾಯಕ ಶೆಹಬಾಜ್‌ ಷರೀಫ್‌ ನೂತನ ಪ್ರಧಾನಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

ಈ ನಡುವೆ, ವಿಶ್ವಾಸಮತದಲ್ಲಿ ಸೋತ ಇಮ್ರಾನ್‌ ಖಾನ್‌ ಅವರು ಪದಚ್ಯುತಿ ಬಳಿಕ ಮೊದಲ ಬಾರಿ ಮೌನ ಮುರಿದಿದ್ದಾರೆ. ‘ಪಾಕಿಸ್ತಾನಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿದ್ದರೂ, ವಾಸ್ತವದಲ್ಲಿ ಸ್ವಾತಂತ್ರ್ಯ ಹೋರಾಟ ದೇಶಾದ್ಯಂತ ಇನ್ನು ಮುಂದೆ ಪ್ರಾರಂಭವಾಗಲಿದೆ’ ಎಂದಿದ್ದಾರೆ. ಈ ಮೂಲಕ ಹೊಸ ಸರ್ಕಾರದ ವಿರುದ್ಧ ಸಮರ ಸಾರುವ ಸುಳಿವು ನೀಡಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ‘ನಾನು ಯಾವುದೇ ಸೇಡಿನ ರಾಜಕೀಯ ಮಾಡುವುದಿಲ್ಲ. ಯಾರನ್ನೂ ಉದ್ದೇಶಪೂರ್ವಕವಾಗಿ ಜೈಲಿಗೆ ಹಾಕುವುದಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳುವೆ’ ಎಂದು ಭಾವಿ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ.

ಷರೀಫ್‌-ಖುರೇಷಿ ನಾಮಪತ್ರ:

ಸೋಮವಾರ ಮಧ್ಯಾಹ್ನ 2.30ಕ್ಕೆ ಪಾಕಿಸ್ತಾನ ಸಂಸತ್ತು ಸಮಾವೇಶಗೊಳ್ಳಲಿದೆ. ಈ ವೇಳೆ ನೂತನ ಪ್ರಧಾನಿಯ ಆಯ್ಕೆ ನಡೆಯಲಿದೆ.

ಪ್ರಧಾನಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ಸಮಯಾವಕಾಶ ಇತ್ತು. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಶೆಹಬಾಜ್‌ ಷರೀಫ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ರ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದಿಂದ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಖುರೇಷಿ ಕೇವಲ ಔಪಚಾರಿಕತೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಶೆಹಬಾಜ್‌ ಆಯ್ಕೆ ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ, ಕೂಟದ ಪ್ರಮುಖ ಪಕ್ಷವಾದ ಪಿಪಿಪಿ ನಾಯಕ ಬಿಲಾವಲ್‌ ಭುಟ್ಟೋ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದೆ.

342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಬಹುಮತಕ್ಕೆ 172 ಮತ ಬೇಕು. ಪಿಎಂಎಲ್‌-ಎನ್‌ ಹಾಗೂ ಪಿಪಿಪಿ ನೇತೃತ್ವದ ಕೂಟಕ್ಕೆ ಈಗಾಗಲೇ 174 ಸದಸ್ಯರ ಬೆಂಬಲವಿದೆ.

ಭಾರಿ ಹೈಡ್ರಾಮಾ:

ಇಮ್ರಾನ್‌ ಖಾನ್‌ ಜತೆಗಿದ್ದ ಮಿತ್ರಪಕ್ಷಗಳು ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಆದರೆ ಆ ನಿರ್ಣಯವನ್ನು ಸ್ಪೀಕರ್‌ ತಿರಸ್ಕರಿಸಿದ್ದರು. ಇದರ ಬೆನ್ನಲ್ಲೇ ಸಂಸತ್ತನ್ನು ಇಮ್ರಾನ್‌ ಖಾನ್‌ ವಿರ್ಸಜಿಸಿದ್ದರು. ಈ ತರಾತುರಿಯ ನಿರ್ಣಯಗಳು ಸುಪ್ರೀಂಕೋರ್ಚ್‌ ಮೆಟ್ಟಿಲೇರಿದ್ದವು. ಅವಿಶ್ವಾಸ ನಿರ್ಣಯ ವಜಾಗೊಳಿಸಿದ್ದನ್ನು ಅಸಂವಿಧಾನಿಕ ಎಂದು ಬಣ್ಣಿಸಿದ್ದ ಸುಪ್ರೀಂಕೋರ್ಚ್‌, ಸಂಸತ್‌ ವಿಸರ್ಜನೆ ಆದೇಶವನ್ನು ರದ್ದುಗೊಳಿಸಿತ್ತು. ಶನಿವಾರ ಕಲಾಪ ನಡೆಸಿ, ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಸೂಚಿಸಿತ್ತು.

ಅದರಂತೆ ಶನಿವಾರ ಕಲಾಪ ನಡೆಯಿತಾದರೂ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯುವುದು ತಡರಾತ್ರಿಯಾಯಿತು. ಅದಕ್ಕೂ ಮುನ್ನ, ಇಮ್ರಾನ್‌ ಖಾನ್‌ ಪಕ್ಷದವರೇ ಆಗಿರುವ ಸ್ಪೀಕರ್‌, ಉಪಸ್ಪೀಕರ್‌ ಅವರು ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ಪಿಎಂಎಲ್‌- ಎನ್‌ ಪಕ್ಷದ ಅಯಾಜ್‌ ಸಾದಿಖ್‌ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಅವರು ಕಲಾಪ ನಡೆಸಿದರು. 342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಪಾಸಾಗಲು 172 ಮತಗಳು ಬೇಕಾಗಿದ್ದವು. ಆದರೆ 174 ಮತಗಳು ಚಲಾವಣೆಯಾದವು. ಇಮ್ರಾನ್‌ ಖಾನ್‌ ಪಕ್ಷದ ಸದಸ್ಯರು ಕಲಾಪ ಬಹಿಷ್ಕರಿಸಿದರು. ಇಮ್ರಾನ್‌ ಖಾನ್‌ ಕೂಡ ಕಲಾಪದಿಂದ ದೂರ ಉಳಿದರು.