ಪಾಕಿಸ್ತಾನಿ ಸೆನೆಟರ್ ಪಲ್ವಾಶಾ ಖಾನ್, ಅಯೋಧ್ಯೆಯಲ್ಲಿ ಪಾಕಿಸ್ತಾನಿ ಸೇನೆ ಮಸೀದಿ ನಿರ್ಮಿಸುವುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ಸಮಯದಲ್ಲಿ ಈ ಹೇಳಿಕೆ ಉದ್ವಿಗ್ನತೆ ಹೆಚ್ಚಿಸಿದೆ. ಸಿಖ್ ಸೈನಿಕರ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿ, ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖಾನ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪಾಕಿಸ್ತಾನಿ ಸೆನೆಟರ್ ಪಲ್ವಾಶಾ ಮೊಹಮ್ಮದ್ ಜಿಯಾ ಖಾನ್ ಅವರ ವಿವಾದಾತ್ಮಕ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಏಪ್ರಿಲ್ 29ರಂದು ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖಾನ್ , “ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನಿ ಸೇನಾ ಸೈನಿಕರು ಇಡಲಿದ್ದಾರೆ. ಮತ್ತು ಮೊದಲ ಅಜಾನ್ (ಧಾರ್ಮಿಕ ಪ್ರಾರ್ಥನೆ) ಅನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ನೀಡಲಿದ್ದಾರೆ” ಎಂದು ಹೇಳಿದರು. ಧ್ವಂಸಗೊಂಡ ಬಾಬರಿ ಮಸೀದಿಯ ವಿಷಯವನ್ನು ಉಲ್ಲೇಖಿಸಿ, ಧಾರ್ಮಿಕ ಮತ್ತು ಸೇನಾ ಭಾಷೆಯ ಬಳಕೆಯಿಂದ ಭಾರತವನ್ನು ಟೀಕಿಸಿದರು. ಭಾರತ–ಪಾಕಿಸ್ತಾನ ನಡುವಿನ ಸಂಬಂಧಗಳು ಈಗಾಗಲೇ ಹದಗೆಟ್ಟಿರುವಾಗಲೇ ಇಂತಹ ಮಾತುಗಳು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ-ಭಾರತ ನಡುವೆ ರಾಜತಾಂತ್ರಿಕ ಯುದ್ಧ ನಡೆಯುತ್ತಿದೆ.ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು, “ಮುಂದಿನ 24 ರಿಂದ 36 ಗಂಟೆಗಳೊಳಗೆ ಭಾರತದಿಂದ ಸೇನೆ ಸಕ್ರಿಯವಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ, “ಭಾರತದ ಸೇನೆಯ ಕ್ರಮ ಈಗ ಎಲ್ಲಿಂದ ಬೇಕಾದರೂ ಪ್ರಾರಂಭವಾಗಬಹುದು. ಇಸ್ಲಾಮಾಬಾದ್ ಈಗ ತುಂಬಾ ಎಚ್ಚರಿಕೆಯ ಸ್ಥಿತಿಯಲ್ಲಿ ಇದೆ” ಎಂದು ಹೇಳಿದ್ದಾರೆ. ಜಿಯಾ ಖಾನ್ ಅವರ ಇಂತಹ ಹೇಳಿಕೆಗಳು ಪಾಕಿಸ್ತಾನದಲ್ಲಿ ಆತಂಕವನ್ನು ಹೆಚ್ಚಿಸುತ್ತಿದ್ದು, ಭಾರತ–ಪಾಕಿಸ್ತಾನ ಸಂಬಂಧಗಳು ಇನ್ನಷ್ಟು ತೀವ್ರವಾಗಿವೆ.
ಯಾರುಪಲ್ವಾಶಾ ಖಾನ್?
ಪಲ್ವಾಶಾ ಮೊಹಮ್ಮದ್ ಜಿಯಾ ಖಾನ್ ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸದಸ್ಯೆ ಮತ್ತು ಪಾಕಿಸ್ತಾನದ ಸೆನೆಟರ್. ಅವರು ಸೆನೆಟ್‌ನಲ್ಲಿ ಸಿಂಧ್ ಪ್ರಾಂತ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು 2008 ರಿಂದ 2013 ರವರೆಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಲ್ವಾಶಾ ಖಾನ್ ಅವರು ರಾಜಕಾರಣಿ ಮತ್ತು ಉದ್ಯಮಿ ಶ್ರೀಮತಿ ಫೋಜಿಯಾ ಬೆಹ್ರಾಮ್ ಅವರ ಸೋದರ ಸೊಸೆಯೂ ಆಗಿದ್ದಾರೆ, ಅವರು 1998-90 ರ ಅವಧಿಯಲ್ಲಿ ಪಂಜಾಬ್ ವಿಧಾನಸಭೆಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಸದಸ್ಯರಾಗಿದ್ದರು.
ಪಾಕಿಸ್ತಾನದ ಸೆನೆಟರ್ ಪಲ್ವಾಶಾ ಖಾನ್ ಅವರು ಸಿಖ್ ಸೈನಿಕರ ಬಗ್ಗೆ ನೀಡಿದ ಹೇಳಿಕೆಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಖಾನ್ ಅವರು ತಮ್ಮ ಭಾಷಣದಲ್ಲಿ, “ಸಿಖ್ ಸೈನಿಕರು ಪಾಕಿಸ್ತಾನದ ಮೇಲೆ ದಾಳಿ ಮಾಡೋದಿಲ್ಲ, ಏಕೆಂದರೆ ಪಾಕಿಸ್ತಾನ ಸಿಖ್‌ರ ಧರ್ಮಗುರು ಗುರು ನಾನಕ್ ಅವರ ಭೂಮಿ” ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ ಭಾರತದ ಕಾನೂನಿನ ಪ್ರಕಾರ ಭಯೋತ್ಪಾದಕನಾಗಿ ಗುರುತಿಸಲಾದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನು ಅವರನ್ನು ಕೂಡ ಮೆಚ್ಚಿ ಮಾತನಾಡಿದ್ದಾರೆ. ಜೊತೆಗೆ ಪಾಕಿಸ್ತಾನ ದುರ್ಬಲವಲ್ಲ ಎಂದೂ, "ನಾವು ಬಳೆಗಳನ್ನು ಧರಿಸುತ್ತಿಲ್ಲ, ಬಂದೂಕುಗಳಿವೆ, ಶಸ್ತ್ರಾಸ್ತ್ರಗಳಿವೆ. ಶತ್ರುಗಳು ಏನಾದರೂ ಮಾಡಿದರೆ, ನಾವು ತಕ್ಕ ಉತ್ತರ ನೀಡುತ್ತೇವೆ" ಎಂದೂ ಹೇಳಿದರು.
ಈ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ 'ಎಕ್ಸ್' (ಹಳೆಯ ಟ್ವಿಟ್ಟರ್) ಬಳಕೆದಾರರು ತೀವ್ರವಾಗಿ ಟೀಕಿಸಿದ್ದಾರೆ. ಒಬ್ಬ ಬಳಕೆದಾರ ಬರೆದಿದ್ದು:
“ಪಾಕಿಸ್ತಾನಿ ಸೆನೆಟರ್ ಪಲ್ವಾಶಾ ಖಾನ್ ಅವರು ‘ಸಿಖ್ ಸೈನಿಕರು ಪಾಕಿಸ್ತಾನದ ವಿರುದ್ಧ ಹೋರಾಡುವುದಿಲ್ಲ’ ಎನ್ನುತ್ತಿದ್ದಾರೆ. ಯಾರೋ ಅವಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಅನಿಸುತ್ತದೆ. ಅವಳು 1965, 1971 ಮತ್ತು 1999ರ ಯುದ್ಧಗಳ ಇತಿಹಾಸ ಓದಲೇಬೇಕು. ಅವಳನ್ನು ಈಗಲೇ ಸಿಯಾಲ್ಕೋಟ್ ಉಳಿಸಲು ಕಳುಹಿಸಬೇಕು” ಎಂದು ವ್ಯಂಗ್ಯವಾಡಿದ್ದಾರೆ.


