ನ್ಯೂಯಾರ್ಕ್[ಅ.26]: 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದಲೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ದೇಶದ ಎರಡು ಪ್ರಮುಖ ಪತ್ರಿಕೆಗಳ ಚಂದಾವನ್ನೇ ರದ್ದು ಮಾಡಿದ್ದಾರೆ.

ಇತ್ತೀಚೆಗಷ್ಟೇ ಫಾಕ್ಸ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ದೇಶದಲ್ಲಿ ದಿ ನ್ಯೂಯಾರ್ಕ್ ಟೈಮ್ಸ್‌ ಸೇರಿ ಕೆಲವು ಪತ್ರಿಕೆಗಳು ಸುಳ್ಳು ಸುದ್ದಿ ಭಿತ್ತರಿಸುತ್ತಿವೆ. ಅಂಥ ಪತ್ರಿಕೆಗಳ ಪ್ರತಿನಿಧಿಗಳಿಗೆ ಶ್ವೇತ ಭವನ ಪ್ರವೇಶ ನೀಡಲು ನಮಗೆ ಇಷ್ಟವಿಲ್ಲ ಎಂದು ಗುಡುಗಿದ್ದರು.

ಇದರ ಬೆನ್ನಲ್ಲೇ, ಅಮೆರಿಕದ ಪ್ರಮುಖ ಪತ್ರಿಕೆಗಳಾದ ದಿ ವಾಷಿಂಗ್ಟನ್‌ ಪೋಸ್ಟ್‌ ಹಾಗೂ ದಿ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗಳ ಚಂದಾವನ್ನೇ ರದ್ದು ಮಾಡಿದ್ದಾರೆ. ಅಲ್ಲದೆ, ಸರ್ಕಾರದ ಸಂಸ್ಥೆಗಳು ಸಹ ಇದೇ ಕ್ರಮ ಕೈಗೊಳ್ಳಬೇಕು ಎಂಬ ಅನಿರೀಕ್ಷಿತ ಮತ್ತು ಅಚ್ಚರಿಯ ಸೂಚನೆ ನೀಡಿದ್ದಾರೆ ಟ್ರಂಪ್‌.

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಟ್ರಂಪ್‌ ಅವರ ಅಧಿಕೃತ ಕಚೇರಿ ಶ್ವೇತ ಭವನಕ್ಕೆ ಈ ಎರಡೂ ಪತ್ರಿಕೆಗಳು ಪೂರೈಕೆಯಾಗಲ್ಲ. ಅಲ್ಲದೆ, ಸರ್ಕಾರದ ಸಂಸ್ಥೆಗಳಿಗೂ ಈ ಪತ್ರಿಕೆಗಳನ್ನು ಹಾಕಿಸಿಕೊಳ್ಳಬಾರದು ಎಂದು ಸೂಚಿಸಲಾಗಿದೆ.