ಒಟ್ಟಾವ(ಮೇ.10): ಕಣ್ಣಿಗೆ ಕಾಣದ ಶತ್ರು, ಅಪಾರ ಸಾವು ನೋವು ಉಂಟು ಮಾಡಿರುವ ಕೊರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವವ ವೈದ್ಯ ಸಿಬ್ಬಂದಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಹೂಮಳೆಗೈದು, ಚಪ್ಪಾಳೆ ತಟ್ಟಿ ಗೌರವಿಸಿದ್ದರೆ, ಅಮೆರಿಕ ಡ್ರೈವ್ ಆಫ್ ಹಾನರ್ ಮಾಡಿದೆ. ಆದರೀಗ ಕೆನಡಾ ತಮ್ಮ ಜೀವ ಪಣಕ್ಕಿಟ್ಟು ಇತರರ ಜೀವ ಉಳಿಸುತ್ತಿರುವ ಕೊರೋನಾ ವಾರಿಯರ್ಸ್ ವೇತನ ಹೆಚ್ಚಿಸಿ ಅವರ ಸೇವೆಗೆ ಧನ್ಯವದ ತಿಳಿಸಲು ಮುಂದಾಗಿದೆ.

ಮೇ. 7 ರಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋವ್ ಸುದ್ದಿಗೋಷ್ಟಿಯೊಂದನ್ನು ನಡೆಸಿ, ಎಲ್ಲಾ ಪ್ರಾಂತ್ಯಗಳ ಅನುಮತಿ ಮೇರೆಗೆ ಸರ್ಕಾರವು ಆರೋಗ್ಯ ಸಿಬ್ಬಂದಿಯ ವೇತನ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬಿಲಿಯನ್ ಡಾಲರ್ ಬಜೆಟ್ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೇ ಕಡಿಮೆ ಸಂಬಳವನ್ನು ತೆಗೆದುಕೊಂಡು, ತಮ್ಮ ಜೀವ ಹಾಗೂ ಆರೋಗ್ಯವನ್ನೇ ಪಣಕ್ಕಿಟ್ಟು ನಿತ್ಯ ಸೇವೆ ಸಲ್ಲಿಸುತ್ತಿರುವ, ಈ ಮೂಲಕ ದೇಶದ ಏಳಿಗೆಗೆ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಹೆಚ್ಚಿನ ವೇತನ ಪಡೆಯಲು ಅರ್ಹರು ಎಂದಿದ್ದಾರೆ.

ಅಂದು ಚಪ್ಪಾಳೆ ಇಂದು ಸೇನೆಯಿಂದ ಹೂಮಳೆ: ಕೊರೋನಾ ವಾರಿಯರ್ಸ್‌ಗೆ ಸಲಾಂ!

ಈ 3 ಬಿಲಿಯನ್ ಡಾಲರ್ ಪ್ಯಾಕೇಜ್ ವೃದ್ಧರ ಆರೈಕೆ ಮಾಡಿ ಅವರ ಮನೆಯಲ್ಲಿ ಕೆಲಸ ಮಾಡುವ, ಕೊರೋನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ, ದಿನನಿತ್ಯ ಅಗತ್ಯ ಸೇವೆ ಪೂರೈಸುವ ಹೀಗೆ ಕೊರೋನಾ ಸಮರದಲ್ಲಿ ಹೋರಾಡುತ್ತಿರುವವರಿಗೆಲ್ಲಾ ವೇತನ ಹೆಚ್ಚಿಸಲಾಗುತ್ತದೆ. ಸದ್ಯ ಜಸ್ಟಿನ್ ಟ್ರುಡೋವ್ ಈ ನಡೆ ಪ್ರಶಂಸೆಗೆ ಭಾಜನವಾಗಿದೆ.

ಕೆನಡಾದಲ್ಲಿ ಈವರೆಗೂ ಒಟ್ಟು 67,702 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 4,693 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. 31,249 ಮಂದಿ ಈಗಾಗಲೇ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 502 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.