ಧಾರ್ಮಿಕ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವ 5ನೇ ಮದುವೆ ಬಗ್ಗೆ ಸಲಹೆ ಕೇಳಿದ್ದು, ಮೌಲಾನಾ ನೀಡಿದ ಉತ್ತರ ವೈರಲ್ ಆಗಿದೆ. ನಾಲ್ಕು ಮದುವೆಯಾಗಿ ಸಂತೋಷವಾಗಿದ್ದರೂ, ಮತ್ತೊಂದು ಮದುವೆಯಾಗುವ ಆಸೆಗೆ ಮೌಲಾನಾ ತಿರುಗೇಟು ನೀಡಿದ್ದಾರೆ.
ಇಸ್ಲಾಮಾಬಾದ್: ಇಂದು ಹಲವು ವಾಹಿನಿಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಧಾರ್ಮಿಕ ಗುರುಗಳನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿರುತ್ತದೆ. ಜನರು ಕರೆ ಮಾಡಿ ನೇರವಾಗಿ ಧಾರ್ಮಿಕ ಗುರುಗಳ ಜೊತೆ ಮಾತನಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಬಹುದು. ಇಂತಹ ಕಾರ್ಯಕ್ರಮಗಳನ್ನು ಮನರಂಜನೆ ವಾಹಿನಿಗಳು ಮಾತ್ರವಲ್ಲದೇ ನ್ಯೂಸ್ ಚಾನೆಲ್‌ಗಳು ಪ್ರಸಾರ ಮಾಡುತ್ತಿವೆ. ಹಬ್ಬ ಮತ್ತು ವಿಶೇಷ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿರುತ್ತವೆ. ಇದೀಗ ಇದೇ ರೀತಿಯ ಕಾರ್ಯಕ್ರಮದ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ಧಾರ್ಮಿಕ ಗುರುಗಳ ಬಳಿ ತನ್ನ 5ನೇ ಮದುವೆ ಕುರಿತು ಸಲಹೆ ಕೇಳಿದ್ದಾನೆ. ಈ ವೇಳೆ ಕಾರ್ಯಕ್ರಮದಲ್ಲಿ ಮೌಲಾನಾ ನೀಡಿದ ಉತ್ತರವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋ ಪಾಕಿಸ್ತಾನದ ವಾಹಿನಿಯದ್ದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಕರೆ ಮಾಡಿದ ವ್ಯಕ್ತಿ ತಾನು ಕರಾಚಿಯ ನಿವಾಸಿ ಎಂದು ಹೇಳಿಕೊಳ್ಳುತ್ತಾನೆ. ನಿರೂಪಕಿ ಹೆಸರು ಕೇಳಿದರೆ ತನ್ನ ಗುರುತಿನ ಬಗ್ಗೆ ಹೇಳಿಕೊಳ್ಳಲು ಆ ವ್ಯಕ್ತಿಇಷ್ಟಪಡಲ್ಲ. ಇದಕ್ಕೆ ಓಕೆ ಎಂದ ನಿರೂಪಕಿ, ಕರೆಯನ್ನು ಕಾರ್ಯಕ್ರಮದಲ್ಲಿರುವ ಮೌಲಾನಾಗೆ ವರ್ಗಾಯಿಸುತ್ತಾರೆ.
ಆ ವ್ಯಕ್ತಿ ಹೇಳಿದ್ದೇನು?
ಮೌಲಾನಾ ಅವರೇ, ನಾನು ಯುವತಿಯೊಬ್ಬಳನ್ನು ತುಂಬಾ ಪ್ರೀತಿಸುತ್ತಿದ್ದು ಮತ್ತು ಆಕೆಯನ್ನು ಮದುವೆ ಆಗಬೇಕೆಂದು ಬಯಸುತ್ತಿದ್ದೇನೆ. ಆದ್ರೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾನೆ. ಇದಕ್ಕೆ ಮೌಲಾನಾ ಯಾಕೆ ಎಂದು ಕೇಳಿದಾಗ, ಈಗಾಗಲೇ ನಾಲ್ಕು ಮದುವೆಯಾಗಿದ್ದು, ನಾಲ್ವರು ಪತ್ನಿಯರು ಸಂತೋಷವಾಗಿದ್ದಾರೆ. ಈಗ ಐದನೇ ಮದುವೆ ಹೇಗೆ ಮಾಡಿಕೊಳ್ಳಬೇಕೆಂದು ಗೊತ್ತಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಇದೆಯಾ ಎಂದು ಕರಾಚಿಯ ವ್ಯಕ್ತಿಯ ಕೇಳುತ್ತಾನೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಮೌಲಾನಾ ಒಂದು ಕ್ಷಣ ಶಾಕ್ ಆಗುತ್ತಾರೆ. ನಿರೂಪಕಿ, ನೀವು ಪ್ರಶ್ನೆಯನ್ನು ಕೇಳಬಾರದಿತ್ತು ಎಂದು ನಗುತ್ತಲೇ ವಿರೋಧ ವ್ಯಕ್ತಪಡಿಸುತ್ತಾರೆ.
ಮೌಲಾನಾ ನೀಡಿದ ಉತ್ತರ ಏನು?
5ನೇ ಮದುವೆಯ ಸಲಹೆ ಕೇಳಿದ ವ್ಯಕ್ತಿಗೆ ಕೈ ಮುಗಿದ ಮೌಲಾನಾ, ಅಲ್ಲಾಹುವಿಗಾಗಿಯಾದ್ರೂ ನೀವು ಈ ಮದುವೆಯ ವಿಚಾರಗಳಿಂದ ಹೊರಗೆ ಬನ್ನಿ. ಇಸ್ಲಾಂ ಧರ್ಮದಲ್ಲಿ ನಾಲ್ಕು ಮದುವೆಗೆ ಅವಕಾಶಗಳಿದ್ದರೂ ಅದಕ್ಕೂ ಹಲವು ನಿಯಮಗಳಿವೆ. ನಾಲ್ಕರ ನಂತರ ನಿಮ್ಮ ಮದುವೆ ಲೆಕ್ಕ ಮುಗಿದಿದೆ ಎಂದರ್ಥ. ಎಷ್ಟು ಮದುವೆ ಆಗಬೇಕು ಅನ್ನೋದು ವೈಯಕ್ತಿಕ ವಿಷಯವಾಗುತ್ತದೆ. ನಾಲ್ವರು ಹೆಂಡ್ತಿಯರು ಸಂತೋಷವಾಗಿದ್ರೂ ನಿಮಗೆ ಮದುವೆ ಆಸೆ ನಿಂತಿಲ್ಲ. ಐದನೇ ಮದುವೆ ಬಳಿಕವೂ ನೀವು ಮತ್ತೊಮ್ಮೆ ವಿವಾಹ ಆಗಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಎಂದು ಮೌಲಾನಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ರೀಲ್ಸ್ ಶೂಟನ್ನು ರಿಯಲ್ ಎಂದು ಭಾವಿಸಿ, ಯುವಕನಿಗೆ ಸರಿಯಾಗಿ ಬಾರಿಸಿದ ವೃದ್ಧ: ವೀಡಿಯೋ ವೈರಲ್
ಇಂದು ಪ್ರೀತಿಯನ್ನು ತುಂಬಾ ಹಗುರವಾಗಿ ನೋಡುತ್ತಿದ್ದೇವೆ. ಪ್ರೀತಿ ಅನ್ನೋದು ಸಾಮಾನ್ಯವಾದ ವಿಷಯವಲ್ಲ. ಯಾವುದೋ ಸಂದರ್ಭದಲ್ಲಿ ಒಬ್ಬರನ್ನ ನೋಡಿದೆ, ಅವರ ಮೇಲೆ ಪ್ರೀತಿ ಆಯ್ತು ಅನ್ನೋದು ಹಗುರವಾದ ಮಾತಲ್ಲ. ಆದರೆ ಪ್ರೀತಿ ಅಷ್ಟು ಸುಲಭವಲ್ಲ. ಈ ಮದುವೆ ಆಲೋಚನೆಗಳಿಂದ ಹೊರಗೆ ಬರುವಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಮೌಲಾನಾ ಹೇಳುತ್ತಾರೆ.
ನಿಮಗೆ ಈಗ ಮತ್ತೆ ಪ್ರೀತಿ ಆಗಿದೆ ಮತ್ತು ಆ ಯುವತಿಯನ್ನು ಮದುವೆಯಾಗಬೇಕು ಅಂದ್ರೆ ಇರೋ ನಾಲ್ವರು ಪತ್ನಿಯರಲ್ಲಿ ಒಬ್ಬರು ನಿಮ್ಮನ್ನು ಬಿಟ್ಟು ಹೋಗಬೇಕು ಅಥವಾ ಒಬ್ಬರು ನಿಧನವಾಗಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನದನ್ನು ಮತ್ತೇನು ಹೇಳಲು ಆಗಲ್ಲ ಎಂದು ಮೌಲಾನಾ ಹೇಳುತ್ತಾರೆ. ಈ ವೇಳೆ ನಿರೂಪಕಿ ನಿರಂತರವಾಗಿ ನಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: 500 ರೂಪಾಯಿ ಆಸೆಯಿಂದಾಗಿ ರಹಸ್ಯ ಬಿಚ್ಚಿಟ್ಟ ಭಿಕ್ಷುಕ; ಹಣಕ್ಕಾಗಿ ಏನೆಲ್ಲಾ ಮಾಡ್ತಾರೆ ಗುರು!

