ರಷ್ಯಾ ಅಧ್ಯಕ್ಷ ಪುಟಿನ್ ವಿದೇಶ ಪ್ರವಾಸದ ವೇಳೆ ಅವರ ಭದ್ರತಾ ಸಿಬ್ಬಂದಿ ಮಲ-ಮೂತ್ರ ಸಂಗ್ರಹಿಸಿ ರಷ್ಯಾಗೆ ಕೊಂಡೊಯ್ಯುತ್ತಾರೆ ಎಂಬ ಸುದ್ದಿ ಮತ್ತೆ ಹರಿದಾಡುತ್ತಿದೆ. ಗುಪ್ತಚರ ಸಂಸ್ಥೆಗಳು ಪುಟಿನ್‌ರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ನವದೆಹಲಿ (ಆ.18): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತಾಗಿ ಸಾಕಷ್ಟು ಊಹಾಪೋಹದ ಸುದ್ದಿಗಳು ಬರುತ್ತಲೇ ಇರುತ್ತವೆ. ಅದರಲ್ಲಿ ಪ್ರಮುಖವಾಗಿರೋದು ಅವರ ಭದ್ರತೆಯ ಬಗ್ಗೆ. ವ್ಲಾಡಿಮಿರ್ ಪುಟಿನ್ ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಅವರ ಭದ್ರತಾ ಸಿಬ್ಬಂದಿಯೇ ಪುಟಿನ್ ಅವರ ಮಲ ಮೂತ್ರವನ್ನು ಸಂಗ್ರಹಣೆ ಮಾಡುತ್ತಾರೆ. ಅದನ್ನು ವಾಪಾಸ್ ರಷ್ಯಾಗೆ ತೆಗೆದುಕೊಂಡು ಹೋಗುತ್ತಾರೆ ಅನ್ನೋದು ಪ್ರೋಟೋಕಾಲ್ ಎಂದು ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿ ಅಲಾಸ್ಕ ಭೇಟಿಯ ವೇಳೆಯಲ್ಲೂ ಇದು ಸುದ್ದಿಯಾಗಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಗ್ಗೆ ದೃಢೀಕರಿಸದ ವಿಲಕ್ಷಣ ವಿಚಾರಗಳು ಹೊಸತೇನಲ್ಲ. ಈ ಬಾರಿ ಅಲಾಸ್ಕ ಭೇಟಿಯ ವೇಳೆಯಲ್ಲೂ ರಷ್ಯಾದ ಭದ್ರತಾ ಸಿಬ್ಬಂದಿಗಳು ಪುಟಿನ್ ಅವರ ಮಲ ಹಾಗೂ ಮೂತ್ರವನ್ನು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ ನಡೆದ ಸಭೆ ರಷ್ಯಾ-ಉಕ್ರೇನ್ ಯುದ್ಧದ ಮೇಲೆ ತಕ್ಷಣದ ಕದನ ವಿರಾಮವನ್ನು ನೀಡಲಿಲ್ಲ.
ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಅಲಾಸ್ಕಾದ ಮಿಲಿಟರಿ ನೆಲೆಗೆ ಆಗಮಿಸಿದ್ದರು.
ಪುಟಿನ್ ಮಲವನ್ನು ಸಂಗ್ರಹಿಸುತ್ತಾರೆಯೇ?
ಪುಟಿನ್ ವಿದೇಶ ಪ್ರವಾಸ ಮಾಡುವಾಗ ಅವರ ಬಾಡಿಗಾರ್ಡ್‌ಗಳು ಅವರ "ಮಲ" ಮತ್ತು ಮೂತ್ರವನ್ನು ಸಂಗ್ರಹಿಸಿ ರಷ್ಯಾಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬ ವರದಿಗಳು ಅಲಾಸ್ಕಾ ಭೇಟಿಯ ಸಮಯದಲ್ಲಿ ಮತ್ತೆ ಸುದ್ದಿಯಾಗಿದೆ.
ಮೂಲತಃ 2022 ರಲ್ಲಿ ಪ್ರಕಟವಾದ ಇಬ್ಬರು ಅನುಭವಿ ತನಿಖಾ ಪತ್ರಕರ್ತರಾದ ರೆಗಿಸ್ ಗೆಂಟೆ ಮತ್ತು ಮಿಖಾಯಿಲ್ ರೂಬಿನ್ ಅವರು ಫ್ರೆಂಚ್ ಪ್ರಕಟಣೆಯಾದ ಪ್ಯಾರಿಸ್ ಮ್ಯಾಚ್‌ನಲ್ಲಿ ನೀಡಿದ ವರದಿಯು, ರಷ್ಯಾದ ಅಧ್ಯಕ್ಷರ ಫೆಡರಲ್ ಪ್ರೊಟಕ್ಷನ್ ಸರ್ವೀಸ್, ಪುಟಿನ್ ಅವರ ಮಲ ಹಾಗೂ ಮೂತ್ರವನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ ಎಂದಿದ್ದರು.
ಪುಟಿನ್ ಅವರ ಮಲ ಮತ್ತು ಮೂತ್ರವು ಪ್ರಮುಖ ಮಾಹಿತಿಯನ್ನು ಹೊಂದಿದ್ದು, ರಷ್ಯಾದ ಅಧ್ಯಕ್ಷರ ಮಲ ಮೂತ್ರದ ಮೂಲಕ ಡೇಟಾವನ್ನು ವಿದೇಶಿ ಗುಪ್ತಚರ ಅಥವಾ ಗೂಢಚಾರ ಸಂಸ್ಥೆಗಳು ವಿಶ್ಲೇಷಿಸಬಹುದು, ಇದು ಅವರ ದೈಹಿಕ ಸ್ಥಿತಿಯ ಬಗ್ಗೆ ಒಳನೋಟವನ್ನು ನೀಡುತ್ತದೆ ಮತ್ತು ಬಹುಶಃ ಇನ್ನೂ ಹೆಚ್ಚಿನದನ್ನು ನೀಡುತ್ತದೆ ಎಂದು ವರದಿ ಹೇಳುತ್ತದೆ.
ಪುಟಿನ್ ವಿದೇಶ ಪ್ರವಾಸದಲ್ಲಿದ್ದ ವೇಳೆ, ಒಬ್ಬ ಸಿಬ್ಬಂದಿಗೆ ಅವರ ಮಲ ಹಾಗೂ ಮೂತ್ರವನ್ನು ಸಂಗ್ರಹ ಮಾಡುವುದೇ ಕೆಲಸ. ಅದನ್ನು ಅವರು ವಾಪಾಸ್ ಮಾಸ್ಕೋಗೆ ತೆಗೆದುಕೊಂಡು ಹೋಗುತ್ತಾರೆ. ಅವರ ಮಲ ಮೂತ್ರದಲ್ಲಿ ಪುಟಿನ್‌ರ ಆರೋಗ್ಯದ ಬಗ್ಗೆ ಮಾಹಿತಿಗಳು ಸಿಗುವ ಕಾರಣ ಈ ಕೆಲಸ ಮಾಡುತ್ತಿದೆ. 2019ರ ಅಕ್ಟೋಬರ್‌ನಲ್ಲಿ ನಮಗೆ ಇದರ ಬಗ್ಗೆ ಮೊದಲ ಬಾರಿಗೆ ತಿಳಿದಿತ್ತು. ಆಗ ಅವರು ಸೌದಿ ಅರೇಬಿಯಾ ಭೇಟಿಯಲ್ಲಿದ್ದರು ಎಂದು ಪ್ಯಾರಿಸ್ ಮ್ಯಾಚ್ ವರದಿಯಲ್ಲಿ ತಿಳಿಸಲಾಗಿದೆ.
2022ರಲ್ಲಿ ಮಧ್ಯಪ್ರಾಚ್ಯದಿಂದ ಬಂದ ವರದಿಯ ಪ್ರಕಾರ, ಪುಟಿನ್ ಜೊತೆ ಸದಾಕಾಲ ಇರುವ ವ್ಯಕ್ತಿ ತಮ್ಮೊಂದಿಗೆ ಒಂದು ಪೌಚ್‌ಅನ್ನು ಇರಿಸಿಕೊಂಡಿರುತ್ತಾರೆ. ಅವರ ಮಲ, ಮೂತ್ರಕ್ಕೆ ಹೋದಾಗ ಅದನ್ನು ಸಂಗ್ರಹಿಸಿ ಸೂಟ್‌ಕೇಸ್‌ನಲ್ಲಿ ಇರಿಸಲಾಗುತ್ತದೆ. ರಷ್ಯಾದ ವಿದೇಶಾಂಗ ಇಲಾಖೆ ಇದನ್ನು ಆದಷ್ಟು ಗೌಪ್ಯವಾಗಿ ಇರಿಸಿದೆ ಎಂದು ತಿಳಿಸಿತ್ತು. 2017ರ ಮೇ 29 ರಂದು ಫ್ರಾನ್ಸ್ ಭೇಟಿಯ ಸಮಯದಿಂದ ರಷ್ಯಾದ ಅಧ್ಯಕ್ಷರ ವಿಚಾರದಲ್ಲಿ ಇದು ಕಡ್ಡಾಯವಾಗಿದೆ. ರೆಗಿಸ್ ಗೆಂಟೆ ರಷ್ಯಾದ ಬಗ್ಗೆ ಎರಡು ಪುಸ್ತಕಗಳನ್ನು ಬರೆದ ಲೇಖಕರಾಗಿದ್ದರೆ, ಮಿಖಾಯಿಲ್ ರೂಬಿನ್ ಹತ್ತು ವರ್ಷಗಳಿಗೂ ಹೆಚ್ಚು ಕಾಲ ರಷ್ಯಾದ ರಾಜಕೀಯವನ್ನು ವರದಿ ಮಾಡಿದ್ದಾರೆ.
ಮಾಜಿ ಬಿಬಿಸಿ ಪತ್ರಕರ್ತೆ ಫರಿದಾ ರುಸ್ತಮೋವಾ ಕೂಡ ಅಂತಹ ವಿಚಾರಗಳು ಇವೆ ಎಂದು ವರದಿ ಮಾಡಿದ್ದಾರೆ, ಪುಟಿನ್ ವಿಯೆನ್ನಾಕ್ಕೆ ಭೇಟಿ ನೀಡಿದಾಗ ಅವರು ಪೋರ್ಟಬಲ್ ಶೌಚಾಲಯವನ್ನು ಒಳಗೊಂಡ ತಮ್ಮದೇ ಆದ ಖಾಸಗಿ ಸ್ನಾನಗೃಹವನ್ನು ಹೊಂದಿದ್ದರು ಎಂಬುದನ್ನು ತೋರಿಸಿದ್ದಾರೆ.1999 ರಲ್ಲಿ ಅಧ್ಯಕ್ಷರು ತಮ್ಮ ನಾಯಕತ್ವವನ್ನು ಆರಂಭಿಸಿದಾಗಿನಿಂದ ಈ ಅಭ್ಯಾಸವನ್ನು ನಡೆಸುತ್ತಿದ್ದಾರೆ ಎಂದು ಮೂಲವೊಂದು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ 72 ವರ್ಷದ ಪುಟಿನ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿದ್ದು, ಕ್ಯಾನ್ಸರ್, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿವೆ. ಆದರೆ, ಇದು ಅಧಿಕೃತವಾಗಿಲ್ಲ.
