* ಬಾಹ್ಯಾಕಾಶ ಪ್ರವಾಸಕ್ಕೆ ಸ್ವಾಗತ!* 90 ನಿಮಿಷದಲ್ಲಿ ಅಂತರಿಕ್ಷಕ್ಕೆ ಹೋಗಿ ಮರಳಿದ ರಿಚರ್ಡ್‌ ಬ್ರಾನ್ಸನ್‌* ಭಾರತದ ಶಿರಿಶಾ ಕೂಡ ಭಾಗಿ* 20ಕ್ಕೆ ಬೇಜೋಸ್‌ ಹೊಸ ಸಾಹಸ

ಹೂಸ್ಟನ್‌(ಜು.12): ಭೂಮಿ, ಸಾಗರದ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಹೊಸ ಶಕೆಗೆ ಕಾರಣವಾಗಲಿದೆ ಎಂದು ಆಶಿಸಲಾಗಿರುವ ಅಭೂತಪೂರ್ವ ಘಟನೆಯೊಂದಕ್ಕೆ ಇಡೀ ವಿಶ್ವ ಭಾನುವಾರ ಸಾಕ್ಷಿಯಾಗಿದೆ. ವಿಮಾನದ ಸಹಾಯದಿಂದ ಮೇಲೇರಿದ ವಿಮಾನ ರೂಪದ ರಾಕೆಟ್‌ವೊಂದು ಅಂತರಿಕ್ಷದ ಅಂಚಿನವರೆಗೆ ಸಂಚಾರ ಕೈಗೊಳ್ಳುವ ಮೂಲಕ ಹೊಸ ಇತಿಹಾಸವೊಂದು ರಚಿಸಿದೆ. ಇದು ಬಾಹ್ಯಾಕಾಶಕ್ಕೆ ಕೈಗೊಂಡ ವಿಶ್ವದ ಮೊದಲ ವಾಣಿಜ್ಯ ಉದ್ದೇಶದ ಉಡ್ಡಯನ ಎಂಬ ದಾಖಲೆಗೂ ಪಾತ್ರವಾಗಿದೆ.

"

ಬ್ರಿಟನ್‌ ಮೂಲದ ಸಾಹಸಿ ಉದ್ಯಮಿ ಸರ್‌ ರಿಚರ್ಡ್‌ ಬ್ರಾನ್ಸನ್‌ (71) ಒಡೆತನದ ವರ್ಜಿನ್‌ ಗ್ಯಾಲಾಕ್ಟಿಕ್‌ ಸಂಸ್ಥೆಯ ‘ವಿಎಸ್‌ಎಸ್‌ ಯುನಿಟಿ’ ನೌಕೆಯು ರಿಚರ್ಡ್‌ ಬ್ರಾನ್ಸನ್‌, ಭಾರತೀಯ ಮೂಲದ ಶಿರಿಶಾ ಬಾಂಡ್ಲಾ ಸೇರಿದಂತೆ 6 ಜನರನ್ನು ಸುಮಾರು ಬಾಹ್ಯಾಕಾಶದಲ್ಲಿ ಸುತ್ತಾಡಿಸಿ ಮರಳಿ ಭೂಮಿಗೆ ಯಶಸ್ವಿಯಾಗಿ ಬಂದಿಳಿದಿದೆ. ಇದರೊಂದಿಗೆ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆಯಲಾಗಿದೆ. ಉಡಾವಣೆಯಾದ ಸಮಯದಿಂದ 90 ನಿಮಿಷದೊಳಗೆ ಈ ನೌಕೆ ಭೂಮಿಗೆ ಮರಳಿದೆ.

Scroll to load tweet…

ಜೊತೆಗೆ ಇಂಥದ್ದೊಂದು ರೇಸ್‌ಗೆ ಇಳಿದಿರುವ ಮತ್ತೋರ್ವ ಉದ್ಯಮಿ, ಜಗತ್ತಿನ ನಂ.1 ಶ್ರೀಮಂತ ಜೆಫ್‌ ಬೆಜೋಸ್‌ ಅವರಿಗಿಂತ ಬ್ರಾನ್ಸನ್‌ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ. ಮತ್ತೊಂದೆಡೆ ಶಿರಿಶಾ ಕೂಡಾ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಮೂಲದ ಮೂರನೇ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸ್ವಂತ ವಾಹನದಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲಿಗ, ಬಾಹ್ಯಾಕಾಶಕ್ಕೆ ತೆರಳಿದ 70 ವರ್ಷದ ದಾಟಿದ ಕೇವಲ 2ನೇ ವ್ಯಕ್ತಿ ಎಂಬ ದಾಖಲೆಯೂ ಬ್ರಾನ್ಸನ್‌ಗೆ ಒಲಿದುಬಂದಿದೆ.

ವಿಳಂಬ:

ಭಾರತೀಯ ಕಾಲಮಾನ ಭಾನುವಾರ ಸಂಜೆ 6.30ಕ್ಕೆ ‘ವಿಎಸ್‌ಎಸ್‌ ಯುನಿಟಿ’ ಮತ್ತು ಅದನ್ನು ಆಗಸಕ್ಕೆ ಕೊಂಡೊಯ್ಯುವ ‘ವಿಎಂಎಸ್‌ ಈವ್‌’ ಹಾರಾಟ ಆರಂಭಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಹಾರಾಟವನ್ನು 2 ಗಂಟೆ ಮುಂದೂಡಲಾಯಿತು. ಹೀಗಾಗಿ ರಾತ್ರಿ 8.15ರ ವೇಳೆಗೆ ನ್ಯೂ ಮೆಕ್ಸಿಕೋದಿಂದ 6 ಯಾತ್ರಿಗಳನ್ನು ಹೊತ್ತ ವಿಎಸ್‌ಎಸ್‌ ಯುನಿಟಿ ನೌಕೆಯನ್ನು ವಿಎಸ್‌ಎಸ್‌ ಈವ್‌ ವಿಮಾನ ಆಗಸಕ್ಕೆ ಕೊಂಡೊಯ್ಯಿತು. ಸಂಚಾರ ಆರಂಭಿಸಿ ಕೆಲ ನಿಮಿಷಗಳಲ್ಲಿ 50 ಸಾವಿರ ಅಡಿ ಎತ್ತರಕ್ಕೆ ತಲುಪಿದ ಬಳಿಕ ಈವ್‌ ನೌಕೆಯಿಂದ ಯುನಿಟಿ ಪ್ರತ್ಯೇಕಗೊಂಡಿತು. ಬಳಿಕ ರಾಕೆಟ್‌ ಸಹಾಯದಿಂದ ಯುನಿಟಿ ನೌಕೆ ಶಬ್ದಕ್ಕಿಂತ 3 ಪಟ್ಟು ವೇಗವಾಗಿ ಸಂಚರಿಸುತ್ತಾ ಬಾಹ್ಯಾಕಾಶದ ಅಂಚನ್ನು ತಲುಪಿತು. ಈ ಹಂತದಲ್ಲಿ ರಾಕೆಟ್‌ ಅನ್ನು ಸ್ಥಗಿತಗೊಳಿಸಲಾಯ್ತು.

ನಿರ್ವಾತದ ಅನುಭವ:

ನೌಕೆಯು ಭೂಮಿಯಿಂದ 3 ಲಕ್ಷ ಅಡಿಗಳ ಎತ್ತರ ತಲುಪಿದ ಬಳಿಕ ಬ್ರಾನ್ಸನ್‌, ಶಿರಿಶಾ ಸೇರಿ ಎಲ್ಲ 6 ಮಂದಿ ಯಾತ್ರಿಕರು 4 ನಿಮಿಷಗಳ ಕಾಲ ನಿರ್ವಾತದ ಅನುಭವ ಪಡೆದು ಆನಂದ ಪುಳಕಿತರಾದರು. ಬಳಿಕ ವಿಎಸ್‌ಎಸ್‌ ಯುನಿಟ್‌ ನೌಕೆಯ ಮೂಲಕವೇ ಎಲ್ಲಾ ಆರು ಜನರು ಭೂಮಿಗೆ ಹಿಂದಿರುಗಿದರು. ಒಟ್ಟು 90 ನಿಮಿಷಗಳಲ್ಲಿ ಈ ಯಾನ ಮುಕ್ತಾಯಗೊಂಡಿತು. ವಿಮಾನ ಭೂಸ್ಪರ್ಶ ಮಾಡುತ್ತಲೇ ಬ್ರಾನ್ಸನ್‌ ಸೇರಿದಂತೆ ವಿಮಾನದಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

3ನೇ ಭಾರತೀಯ ಮಹಿಳೆ:

ಭಾನುವಾರದ ಯಾನದೊಂದಿಗೆ ಬಾಹ್ಯಾಕಾಶ ಪ್ರವಾಸ ಕೈಗೊಂಡ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹಿರಿಮೆಗೆ ಶಿರಿಶಾ ಬಾಂಡ್ಲಾ ಪಾತ್ರರಾಗಿದ್ದಾರೆ. ಈ ಮೊದಲು 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ, ನಂತರ ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶ ಯಾನ ಕೈಗೊಂಡಿದ್ದರು.

ಯೋಜನೆ ಉದ್ದೇಶ

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಹಾಗೂ ಬ್ರಾನ್ಸನ್‌ ಇಬ್ಬರೂ ದೂರಾಲೋಚನೆ ಹೊಂದಿರುವ ಯಶಸ್ವಿ ಉದ್ಯಮಿಗಳು. ಹೀಗಾಗಿಯೇ ಇಬ್ಬರೂ ಭವಿಷ್ಯದಲ್ಲಿ ಬಾಹ್ಯಾಕಾಶ ಪ್ರವಾಸಕ್ಕೆ ಇರುವ ಅವಕಾಶ ಮನಗೊಂಡು ಅಂಥದ್ದೊಂದು ಯೋಜನೆ ನನಸು ಮಾಡಲು ಯೋಜನೆ ರೂಪಿಸಿದ್ದರು. ಅದರಂತೆ ಬೆಜೋಸ್‌ ಅವರು ತಮ್ಮ ಸ್ವಂತ ಕಂಪನಿಯ ನೌಕೆಯಲ್ಲಿ ಜು.20ರಂದು ಬಾಹ್ಯಾಕಾಶಕ್ಕೆ ಪ್ರಯಾಣ ನಿಗದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಜೋಸ್‌ಗಿಂತ ಒಂದು ಹೆಜ್ಜೆ ಮಂದಿರುವ ನಿಟ್ಟಿನಲ್ಲಿ ಮತ್ತು ಯೋಜನೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ತಾವೇ ಮೊದಲಿಗರಾಗಿ ಹಾರಾಟ ನಡೆಸಿ ಬಂದಿದ್ದಾರೆ. ವಾಸ್ತವವಾಗಿ ಈ ಹಾರಾಟದಲ್ಲಿ ಬ್ರಾನ್ಸನ್‌ ಸಾಗುವ ಯೋಜನೆ ಮೊದಲಿಗೆ ಇರಲಿಲ್ಲ. ಆದರೆ ಬೆಜೋಸ್‌ರನ್ನು ಮಣಿಸಲು ಕಡೆಯ ಹಂತದಲ್ಲಿ ಬಾನ್ಸನ್‌ ತಾವು ಕೂಡ ಹಾರಾಟ ತಂಡದ ಭಾಗವಾದರು.

ಹೇಗಿತ್ತು ಪ್ರವಾಸ?

- ನ್ಯೂ ಮೆಕ್ಸಿಕೋದಿಂದ ರಾತ್ರಿ 8.15ಕ್ಕೆ ಮಾತೃ ನೌಕೆ ಜತೆ ವಿಮಾನ ರೂಪದ ರಾಕೆಟ್‌ ಉಡಾವಣೆ

- 50 ಸಾವಿರ ಅಡಿ ಎತ್ತರ ತಲುಪುತ್ತಿದ್ದಂತೆ ಮಾತೃ ನೌಕೆಯಿಂದ ‘ವಿಎಸ್‌ಎಸ್‌ ಯುನಿಟಿ’ ಪ್ರತ್ಯೇಕ

- ರಾಕೆಟ್‌ ಸಹಾಯದಿಂದ ಅಂತರಿಕ್ಷದ ಅಂಚಿಗೆ ತಲುಪಿದ ನೌಕೆ. 4 ನಿಮಿಷ ಯಾತ್ರಿಕರಿಗೆ ನಿರ್ವಾತ

- ಬಳಿಕ ರಾಕೆಟ್‌ ಚಾಲನೆ ಮಾಡಿ ಭೂಮಿಗೆ ಬಂದಿಳಿದ ಯುನಿಟಿ. 90 ನಿಮಿಷದಲ್ಲಿ ಪ್ರವಾಸ ಅಂತ್ಯ

600 ಜನರಿಂದ ಟಿಕೆಟ್‌ ಬುಕ್‌

ವರ್ಜಿನ್‌ ಗ್ಯಾಲಾಕ್ಟಿಕ್‌ ಸಂಸ್ಥೆಯಲ್ಲಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ಈಗಾಗಲೇ 600ಕ್ಕೂ ಹೆಚ್ಚು ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ