ವಾಷಿಂಗ್ಟನ್‌(ಜ.08): ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಅಮಾನತುಗೊಳಿಸುವ ಅಧಿಕಾರವಿದ್ದುದು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರಿಗೆ ಮಾತ್ರ. 

ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ನಿಷ್ಠರಾಗಿದ್ದ ಇವರ ಮೇಲೆ ಬುಧವಾರ ಟ್ರಂಪ್‌ ವ್ಯಾಪಕ ಒತ್ತಡ ಹೇರಿ ‘ಬೈಡೆನ್‌ ಆಯ್ಕೆ ಅಸಿಂಧು’ ಎಂದು ಘೋಷಿಸುವಂತೆ ದುಂಬಾಲು ಬಿದ್ದಿದ್ದರು. ಆದರೆ ಅದಕ್ಕೆ ಒಪ್ಪದ ಮೈಕ್‌ ಪೆನ್ಸ್‌ ಪತ್ರಿಕಾಗೋಷ್ಠಿ ನಡೆಸಿ ಬೈಡೆನ್‌ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು. 

ಸಂಸದರನ್ನು ಹುಡುಕಿ ಹೊಡೆಯಲು ಹೋದ ಟ್ರಂಪ್ ಸೇನೆ..!

‘ಹಿಂಸಾಚಾರ ಗೆಲ್ಲುವುದಿಲ್ಲ, ಪ್ರಜಾಪ್ರಭುತ್ವ ಗೆಲ್ಲುತ್ತದೆ’ ಎಂದೂ ಸೂಚ್ಯವಾಗಿ ಹೇಳುವ ಮೂಲಕ ಅವರು ಟ್ರಂಪ್‌ರ ಹುಚ್ಚಾಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಮೆರಿಕದ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಅಮೆರಿಕದ ದಾಂಧಲೆಗೆ ಜಾಗತಿಕ ನಾಯಕರ ಆಘಾತ

ಜಗತ್ತಿನ ಹಿರಿಯಣ್ಣನೆಂದು ಹೆಸರು ಪಡೆದ ಅಮೆರಿಕದಲ್ಲಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ನಡೆಸಿದ ದಾಂಧೆಗೆ ಜಾಗತಿಕ ನಾಯಕರು ಆಘಾತ ವ್ಯಕ್ತಪಡಿಸಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರನ್‌, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುತೆರಸ್‌, ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌, ಯುರೋಪಿಯನ್‌ ಒಕ್ಕೂಟದ ವಿದೇಶಾಂಗ ವಿಭಾಗ, ಅಮೆರಿಕದಲ್ಲಿರುವ ಚೀನಾದ ದೂತಾವಾಸ, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೇರಿದಂತೆ ಬಹುತೇಕ ಎಲ್ಲಾ ದೇಶಗಳ ನಾಯಕರು ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿಯಮದಂತೆ ಅಧಿಕಾರ ಹಸ್ತಾಂತರಿಸಲು ಟ್ರಂಪ್‌ಗೆ ಸಲಹೆ ನೀಡಿದ್ದಾರೆ.