ವಾಷಿಂಗ್ಟನ್(ಜ.08)‌: ಎಲ್ಲಿ ಅವರು, ಎಲ್ಲಿ ಅವರು ಎಂದು ಸಂಸದರನ್ನು ಹುಡುಕಿ ಹುಡುಕಿ ಹೊಡೆಯಲು ಬಂದ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು... ಸಂಸದರೆಲ್ಲ ಓಡಿಹೋದ ಮೇಲೆ ಸದನದ ಮುಖ್ಯಸ್ಥರ ಕುರ್ಚಿಯ ಮೇಲೆ ಕುಳಿತು ಟೇಬಲ್‌ ಮೇಲೆ ಕಾಲುಹಾಕಿ ಕಪಿಚೇಷ್ಟೆ, ಕ್ಯಾಪಿಟಲ್‌ ಕಟ್ಟಡದ ಮೇಲೆ ‘ಟ್ರಂಪ್‌ ಪರ ಧ್ವಜಾರೋಹಣ’, ಮಧ್ಯರಾತ್ರಿಯಿಡೀ ನಡೆದ ಹಿಂಸಾಚಾರ.

ಇದು ಅಮೆರಿಕದ ಸಂಸತ್‌ ಭವನದಲ್ಲಿ ಬುಧವಾರ ರಾತ್ರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ನಡೆಸಿದ ದಾಂಧಲೆಯ ಪಕ್ಷಿನೋಟ. ಮಾಸ್ಕ್‌ ಕೂಡ ಧರಿಸದೆ ಘೋಷಣೆಗಳನ್ನು ಕೂಗುತ್ತಾ ಬುಧವಾರ ರಾತ್ರಿ ‘ಕ್ಯಾಪಿಟಲ್‌’ಗೆ ಮುತ್ತಿಗೆ ಹಾಕಿದ ಟ್ರಂಪ್‌ ಬೆಂಬಲಿಗರು, ಕಟ್ಟಡದ ಒಳಗೆ ನುಗ್ಗಲು ಯತ್ನಿಸಿದರು. ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಪೆಪ್ಪರ್‌ ಸ್ಪ್ರೇ ಸಿಡಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರನ್ನು ತಳ್ಳಿಕೊಂಡು ಕಟ್ಟಡದೊಳಕ್ಕೆ ನುಗ್ಗಿದ ಅವರು ಅಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆದು ಒಡೆದುಹಾಕಿದರು. ಕಿಟಕಿ ಗಾಜು, ಹೂಕುಂಡ, ಬಾಗಿಲುಗಳನ್ನು ಧ್ವಂಸಗೊಳಿಸಿದರು. ನಂತರ ಎಲ್ಲಿ ಅವರು ಎಲ್ಲಿ ಅವರು ಎಂದು ಕೇಳುತ್ತಾ ಸಂಸತ್‌ ಕಲಾಪ ನಡೆಯುತ್ತಿದ್ದ ಜಂಟಿ ಸಮಾವೇಶದ ಸಭಾಂಗಣಕ್ಕೆ ನುಗ್ಗಿದರು. ಅಲ್ಲಿಯವರೆಗೆ ಕುರ್ಚಿ, ಬೆಂಚುಗಳ ಕೆಳಗೆ ಅವಿತು ಕುಳಿತಿದ್ದ ಸಂಸದರು ಹೇಗೋ ಹೊರಗೆ ಓಡಿ ತಪ್ಪಿಸಿಕೊಂಡರು.

ನಂತರ ಸಂಸತ್‌ ಭವನದೊಳಗೆ ದಾಂಧಲೆ ನಡೆಸಿದ ಪ್ರತಿಭಟನಾಕಾರರು ಸೆನೆಟ್‌ನ ಮುಖ್ಯಸ್ಥರ ಕುರ್ಚಿ, ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್‌ ಅವರ ಕುರ್ಚಿ, ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು ಕೆಲ ಕ್ಷಣಗಳ ಹಿಂದಷ್ಟೇ ಕುಳಿತಿದ್ದ ಕುರ್ಚಿಗಳ ಮೇಲೆ ಕುಳಿತು, ಟೇಬಲ್‌ ಮೇಲೆ ಕಾಲುಹಾಕಿ ಪೋಸ್‌ ನೋಡಿ, ಹತ್ತಿ ನಿಂತು ಫೋಟೋ ತೆಗೆಸಿಕೊಂಡರು. ಈ ವೇಳೆ ಕೆಲವರು ಕ್ಯಾಪಿಟಲ್‌ ಕಟ್ಟಡದ ಮೇಲೆ ಹತ್ತಿ ಟ್ರಂಪ್‌ ಅವರ ಧ್ವಜ ಹಾರಿಸಿದರು.

ನಾಲ್ಕು ಸಾವು, 52 ಅರೆಸ್ಟ್, ಪಬ್ಲಿಕ್ ಎಮರ್ಜೆನ್ಸಿ: ಕ್ಯಾಪಿಟಲ್ ಹಿಲ್ ದಾಳಿ ಬಳಿಕ ಮಹತ್ವದ ಕ್ರಮ!

ಬೆಳಗಿನ ಜಾವ 2 ಗಂಟೆಯ ವೇಳೆಗೆ ಪೊಲೀಸರು ಉಪಾಧ್ಯಕ್ಷ ಮೈಕ್‌ ಪೆನ್ಸ್‌, ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಹಾಗೂ ಒಂದಷ್ಟುಸಂಸದರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ಇನ್ನುಳಿದ ಸಂಸದರು ಹಾಗೂ ವರದಿಗಾರರನ್ನು ಕ್ಯಾಪಿಟಲ್‌ ಕಟ್ಟಡದಲ್ಲೇ ಇರುವ ಸುರಕ್ಷಿತ ಚೇಂಬರ್‌ನಲ್ಲಿ ರಕ್ಷಿಸಿ, ಅವರೆಲ್ಲರಿಗೂ ಗ್ಯಾಸ್‌ ಮಾಸ್ಕ್‌ ನೀಡಿ, ದಾಂಧಲೆಕೋರರನ್ನು ಹೊರಹಾಕಲು ಅಶ್ರುವಾಯು ಸಿಡಿಸಿದರು. ಈ ವೇಳೆ ಸಂಸತ್ತಿನಲ್ಲಿ ಎಲೆಕ್ಟೋರಲ್‌ ಕಾಲೇಜ್‌ನ ಮತ ಎಣಿಕೆಗೆಂದು ತೆರೆಯಲಾಗಿದ್ದ ಮತಪೆಟ್ಟಿಗೆಗಳನ್ನು ರಕ್ಷಿಸಿಕೊಳ್ಳಲಾಯಿತು. ನಂತರ ಇನ್ನಷ್ಟುಭದ್ರತಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. ಆಮೇಲೆ ಗುರುವಾರ ಬೆಳಗಿನ ಜಾವ ಮತ್ತೆ ಕಲಾಪ ನಡೆಯಿತು.