ಈ ಹೊಟೇಲ್‌ನಲ್ಲಿ ಎಲ್ಲವೂ ಚಿನ್ನಮಯ! ಬಾಡಿಗೆಯೂ ಬಲು ಕಡಿಮೆ
ಜಗತ್ತಿನ ಮೊದಲ ಚಿನ್ನದ ಹೋಟೆಲ್ ! ವಿಯೆಟ್ನಾಂನ ‘ಡೋಲ್ಸ್ ಹನೋಯ್ ಗೋಲ್ಡನ್ ಲೇಕ್’| ಈ ಹೋಟೆಲ್‌ನಲ್ಲಿ ಎಲ್ಲ ವಸ್ತುಗಳಿಗೆ ಚಿನ್ನದ ಹೊದಿಕೆ! ಒಂದು ದಿನಕ್ಕೆ ಕೇವಲ 18,750 ರು. ಬಾಡಿಗೆ
ಹನೋಯ್ (ಜು. 06): ಇಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಬಡಿಸುತ್ತಾರೆ. ಕಾಫಿ ಕೇಳಿದರೆ ಚಿನ್ನದ ಕಪ್‌ನಲ್ಲಿ ಕೊಡುತ್ತಾರೆ. ರೂಮ್‌ನಲ್ಲಿ ಮಂಚ, ಕುರ್ಚಿಗಳು ಚಿನ್ನದ ಹೊದಿಕೆಯಿಂದ ಪಳಪಳ ಹೊಳೆಯುತ್ತವೆ. ಬಾತ್‌ರೂಮ್‌ನಲ್ಲಿ ನಲ್ಲಿ, ಕಮೋಡ್, ಬಾತ್‌ಟಬ್‌ನಿಂದ ಹಿಡಿದು ಎಲ್ಲವೂ ಚಿನ್ನದ್ದೇ. ಹೊರಗೆ ಬಂದರೆ ಚಿನ್ನದ ಹೊದಿಕೆಯ ಬೃಹತ್ ಈಜುಕೊಳ!
"
ಇದು ವಿಯೆಟ್ನಾಂನಲ್ಲಿ ಆರಂಭವಾಗಿರುವ ಜಗತ್ತಿನ ಮೊದಲ ಚಿನ್ನದ ಹೋಟೆಲ್. ಜಗತ್ತಿನೆಲ್ಲೆಡೆ ಕೊರೋನಾ ವೈರಸ್‌ನಿಂದಾಗಿ ಉದ್ದಿಮೆಗಳು ಬಾಗಿಲು ಮುಚ್ಚುತ್ತಿದ್ದರೆ ವಿಯೆಟ್ನಾಂನ ರಾಜಧಾನಿ ಹನೋಯ್‌ನಲ್ಲಿ ಡೋಲ್ಸ್ ಹನೋಯ್ ಗೋಲ್ಡನ್ ಲೇಕ್ ಎಂಬ ಈ ವಿಶಿಷ್ಟಪಂಚತಾರಾ ಹೋಟೆಲ್ ಈಗಷ್ಟೇ ಆರಂಭವಾಗಿದೆ. ಇಲ್ಲಿನ ಎಲ್ಲ ವಸ್ತುಗಳಿಗೂ 24 ಕ್ಯಾರೆಟ್‌ನ ಚಿನ್ನದ ಹೊದಿಕೆಯಿದೆ ಎಂದು ಹೋಟೆಲ್‌ನ ಮಾಲಿಕ ನುಗುಯೆನ್ ಹು ಡಾಂಗ್ ಹೇಳಿಕೊಂಡಿದ್ದಾರೆ.
ಆಭರಣಕ್ಕೆ ಬೇಡಿಕೆ ಇಲ್ಲ, ಚಿನ್ನದ ದರ ಮಾತ್ರ ಕೆಳಗಿಳಿಯುತ್ತಿಲ್ಲ; 3 ವಿಚಿತ್ರ ಕಾರಣ!
25 ಅಂತಸ್ತಿನ ಹೋಟೆಲ್ ಇದಾಗಿದ್ದು, ನಿರ್ಮಿಸಲು ಸುಮಾರು 1500 ಕೋಟಿ ರು. ತಗಲಿದೆ. ಇಲ್ಲಿನ ಐಷಾರಾಮಕ್ಕೆ ಹೋಲಿಸಿದರೆ ಬಾಡಿಗೆಯೇನೂ ಹೆಚ್ಚಿಲ್ಲ. ಒಂದು ದಿನಕ್ಕೆ ಒಂದು ರೂಮ್‌ನ ಬಾಡಿಗೆ ಸುಮಾರು 18,750 ರು. ಮಾತ್ರ. ವಿಯೆಟ್ನಾಂನ ಜನಸಾಮಾನ್ಯರಿಂದ ಹಿಡಿದು ಜಗತ್ತಿನ ಮೂಲೆಮೂಲೆಯಿಂದ ಬರುವ ಶ್ರೀಮಂತ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆಯಂತೆ. ಇಲ್ಲಿಗೆ ಭೇಟಿ ನೀಡಿದವರು ‘ನಾವು ಒಂದು ದಿನಕ್ಕೆ ರಾಜನಾದಂತೆ ಅನ್ನಿಸುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.
ಜಗತ್ತಿನಲ್ಲೇ ಕೊರೋನಾದಿಂದ ಅತಿ ಕಡಿಮೆ ನಷ್ಟಅನುಭವಿಸಿದ ದೇಶಗಳಲ್ಲಿ ವಿಯೆಟ್ನಾಂ ಕೂಡ ಒಂದು. ಹೀಗಾಗಿ ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲೂ ಈ ಹೋಟೆಲ್ ಆರಂಭಗೊಂಡಿದೆ.