ಕಾಡ್ಗಿಚ್ಚಿನಿಂದ ತಪ್ಪಿಸಿಕೊಂಡು ಓಡುತ್ತಿರುವ ಪುಟ್ಟ ಜಿಂಕೆಯ ವೀಡಿಯೋ ವೈರಲ್
ಕ್ಯಾಲಿಫೋರ್ನಿಯಾದಲ್ಲಿನ ಕಾಡ್ಗಿಚ್ಚಿನಿಂದಾಗಿ ಸಾವಿರಾರು ಜನರ ಸ್ಥಳಾಂತರವಾಗಿದ್ದು, ಈ ಘಟನೆಯು ಇಡೀ ಅಮೆರಿಕಾವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಕಾಡ್ಗಿಚ್ಚಿನಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ಪುಟ್ಟ ಜಿಂಕೆಯೊಂದರ ವೀಡಿಯೊ ವೈರಲ್ ಆಗುತ್ತಿದೆ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿನ ಕಾಡ್ಗಿಚ್ಚಿನಿಂದಾಗಿ ಈಗಾಗಲೇ ಸಾವಿರಾರು ಮಂದಿಯ ಸ್ಥಳಾಂತರವಾಗಿದ್ದು, ಇದು ಇಡೀ ಅಮೆರಿಕಾವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಲಾಸ್ ಏಂಜಲಿಸ್‌ನಲ್ಲಿ ಮಂಗಳವಾರ ಸಂಜೆ ಧಿಡೀರನೆ ಕಾಣಿಸಿಕೊಂಡ ಕಾಡ್ಗಿಚ್ಚು ತನ್ನ ರಣಾರ್ಭಟವನ್ನು ಮುಂದುವರೆಸಿದೆ. ಇದರಲ್ಲಿ ಬಲಿಯಾದವರ ಸಂಖ್ಯೆ ಶುಕ್ರವಾರ 12ಕ್ಕೇರಿದೆ ಹಾಗೂ 1.40 ಲಕ್ಷ ಜನರನ್ನು ಈಗಾಗಲೇ ತೆರವುಗೊಳಿಸಲಾಗಿದೆ ಹಾಗೂ ತುರ್ತುಸ್ಥಿತಿ ಸಾರಲಾಗಿದೆ. ಬೆಂಕಿ ನಿಯಂತ್ರಿಸಲು ನಿವೃತ್ತ ಅಗ್ನಿಶಾಮಕ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗುತ್ತಿದೆ. ಹೀಗಿರುವಾಗ ಅಲ್ಲಿನ ಭೀಕರ ಕಾಡ್ಗಿಚ್ಚಿನಿಂದ ಪಾರಾಗಿ ಜೀವ ಉಳಿಸಿಕೊಳ್ಳಲು ಓಡುತ್ತಿರುವ ಪುಟ್ಟ ಜಿಂಕೆಯೊಂದರ ವೀಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಟ್ವಿಟ್ಟರ್‌ನಲ್ಲಿ Jacob Wheeler ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋವನ್ನು 3 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 10 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಆವರಿಸಿರುವ ಈ ಬೆಂಕಿ ಆ ಪ್ರದೇಶವನ್ನು ಸುಟ್ಟು ಬೂದಿ ಮಾಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಮರಿ ಜಿಂಕೆಯೊಂದು ಅಲ್ಟಡೆನಾ ಬಳಿ ಓಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿ ಸೆರೆ ಆಗಿದೆ.
ಹೃದಯವಿದ್ರಾವಕ @NBCLA ದೃಶ್ಯಾವಳಿಗಳು 10,000 ಎಕರೆಗಳಿಗೂ ಹೆಚ್ಚು ಪ್ರದೇಶವನ್ನು ಕಾಡ್ಗಿಚ್ಚು ಸುಟ್ಟುಹಾಕುತ್ತಿರುವಾಗ, ಅಲ್ಟಡೆನಾ ಮೂಲಕ ಮರಿ ಜಿಂಕೆ ಓಡುತ್ತಿರುವುದನ್ನು ತೋರಿಸುತ್ತದೆ ಎಂದು ವೀಡಿಯೋ ಪೋಸ್ಟ್ ಮಾಡಿ ಜಾಕೋಬ್ ಬರೆದುಕೊಂಡಿದ್ದಾರೆ. ಈ 31 ಸೆಕೆಂಡ್‌ನ ವಿಡಿಯೋದಲ್ಲಿ ರಸ್ತೆ ದಾಟಲು ಜಿಂಕೆ ಮರಿ ವೇಗವಾಗಿ ಓಡುತ್ತಿರುವುದನ್ನು ಕಾಣಬಹುದು. ಹೃದಯ ತೇವಗೊಳಿಸುವಂತೆ ಮಾಡುವ ವೀಡಿಯೋ ನೋಡಿ ಅನೇಕರು ಭಾವುಕರಾಗಿದ್ದಾರೆ. ಜಿಂಕೆಗಳು ಸೇರಿದಂತೆ ಕಾಡ್ಗಿಚ್ಚಿನಿಂದ ತೊಂದರೆಗೊಳಗಾಗಿರುವ ಎಲ್ಲಾ ಜೀವಿಗಳ ಬಗ್ಗೆಯೂ ಸಹಾನುಭೂತಿ ಸಿಗಲಿ. ನಮ್ಮ ಸಾಮೂಹಿಕ ಶಕ್ತಿಯು ಪರಿಸ್ಥಿತಿಗೆ ಶಾಂತತೆ ಮತ್ತು ಶಾಂತಿಯನ್ನು ತರಲಿ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬಡಪಾಯಿ ಮಗು ಯಾವಾಗಲೂ ಅತಿ ಚಿಕ್ಕ ಧ್ವನಿಯನ್ನು ಹೊಂದಿರುವವರು ಹೆಚ್ಚು ಬೆಲೆ ತೇರಬೇಕಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಡ್ಗಿಚ್ಚು ಅಸಂಖ್ಯಾತ ನಿವಾಸಿಗಳನ್ನು ಸ್ಥಳಾಂತರಕ್ಕೆ ಕಾರಣವಾಗಿದ್ದಲ್ಲದೇ ಸ್ಥಳೀಯ ಅನೇಕ ವನ್ಯಜೀವಿಗಳನ್ನು ಸರ್ವನಾಶ ಮಾಡಿದ್ದು, ವಿಶಾಲವಾದ ಪರಿಸರದ ಮೇಲೆ ಕಾಡ್ಗಿಚ್ಚಿನ ಪರಿಣಾಮವನ್ನು ಎತ್ತಿ ತೋರಿಸುತ್ತಿದೆ.