ಗಾಜಾಕ್ಕೆ ಇಸ್ರೇಲ್ ನುಗ್ಗುವುದು ಶತಃಸಿದ್ಧ, ಅಮೆರಿಕದಿಂದ ಬಂತು ಶಸ್ತ್ರಸಜ್ಜಿತ ಜೀಪ್!
ಗಾಜಾದ ಗಡಿಯಲ್ಲಿ ಇಸ್ರೇಲ್ ತನ್ನ ಸರ್ವಸಜ್ಜಿತ ಭೂಸೇನೆಯನ್ನು ನಿಲ್ಲಿಸಿ ಒಂದು ವಾರದ ಮೇಲಾಗಿದೆ. ಆದರೆ, ಈವರೆಗೂ ಒಳನುಗ್ಗುವ ಪ್ರಯತ್ನವಾಗಿಲ್ಲ. ಇದರ ಬೆನ್ನಲ್ಲಿಯೇ ಅಮೆರಿಕದಿಂದ ಇಸ್ರೇಲ್‌ಗೆ ಯುದ್ಧ ಸಾಮಗ್ರಿಗಳು ಬಂದಿದ್ದು, ಅವುಗಳನ್ನು ನೋಡಿದರೆ ಇಸ್ರೇಲ್ ಗಾಜಾಗೆ ನುಗ್ಗುವುದು ಶತಃಸಿದ್ಧ ಎನ್ನಲಾಗುತ್ತಿದೆ.

ನವದೆಹಲಿ (ಅ.19): ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಆರಂಭವಾಗಿ 10 ದಿನಗಳ ಮೇಲಾಗಿದೆ. ಹಮಾಸ್ ತನ್ನ ಮೇಲೆ ದಾಳಿ ಮಾಡಿದ ದಿನದಂದೇ ಆಪರೇಷನ್ ಐರನ್ ಸ್ವಾರ್ಡ್ಸ್ ಘೋಷಣೆ ಮಾಡಿದ್ದ ಇಸ್ರೇಲ್, ಹಮಾಸ್ ಎನ್ನುವ ಹೆಸರೇ ಭೂಮಿಯ ಮೇಲೆ ಇರಬಾರದು ಆ ರಿತಿಯ ಕಾರ್ಯಾಚರಣೆ ಮಾಡುವುದಾಗಿ ಹೇಳಿತ್ತು. ಈಗಾಗಲೇ ಗಾಜಾದ ಮೇಲೆ ಟನ್‌ಗಟ್ಟಲೆ ಬಾಂಬ್‌ಗಳನ್ನು ಎಸೆದಿರುವ ಇಸ್ರೇಲ್, ಇಡೀ ಗಾಜಾಪಟ್ಟಿಯನ್ನು ಅಕ್ಷರಶಃ ನರಕದಂತೆ ಮಾಡಿ ಹಾಕಿದೆ. ಇದರ ನಡುವೆ ಗಾಜಾದ ಜನರಿಗೆ, ಗಾಜಾಪಟ್ಟಿಯ ದಕ್ಷಿಣಕ್ಕೆ ಸ್ಥಳಾಂತರವಾಗುವಂತೆ ಸೂಚನೆ ನೀಡಿದಾಗ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಅಲ್ಲಿಯವರೆಗೂ ಇಸ್ರೇಲ್ ಸೇನೆ ಗಾಜಾಪಟ್ಟಿಗೆ ಹೊಕ್ಕಬಹುದು ಎನ್ನುವುದನ್ನು ವಿಶ್ವ ಅಂದಾಜು ಮಾಡಿರಲಿಲ್ಲ. ಇದಕ್ಕಾಗಿ ತನ್ನ ಶಸ್ತ್ರಸಜ್ಜಿತ ಟ್ಯಾಂಕ್‌ಗಳು ಹಾಗೂ ಅಪಾರ ಭೂಸೇನಾಪಡೆಯನ್ನು ಗಾಜಾದ ಗಡಿ ಭಾಗದಲ್ಲಿ ನಿಲ್ಲಿಸಿ ಇಟ್ಟಿದೆ. ಹೀಗೆ ತನ್ನ ಸೇನೆಯನ್ನು ಕ್ರೋಢೀಕರಿಸಿ ಒಂದು ವಾರವಾಗಿದೆ. ಆದರೆ, ಇಸ್ರೇಲ್‌ನಿಂದ ಈವರೆಗೂ ಗಡಿ ದಾಟುವ ಆದೇಶವಾಗಿಲ್ಲ. ಆದರೆ, ಇಸ್ರೇಲ್ ಸೇನೆ ಗಡಿಯಲ್ಲಿ ಬೀಡುಬಿಟ್ಟಿರುವ ಚಿತ್ರಗಳು ಹಾಗೂ ವಿಡಿಯೋಗಳು ಈಗಾಗಲೇ ಹೊರಬಂದಿವೆ.
ಅದರೆ, ಈಗ ಬಂದಿರುವ ಚಿತ್ರ ಸಹಿತ ಮಾಹಿತಿಯ ಪ್ರಕಾರ ಇಸ್ರೇಲ್ ಗಾಜಾಗೆ ನುಗ್ಗುವುದು ಶತಃ ಸಿದ್ಧ. ಇದಕ್ಕಾಗಿ ಅಮೆರಿಕ ಕೂಡ ಬೆಂಬಲ ನೀಡಿದೆ. ಅಮೆರಿಕ ತನ್ನ ಯುದ್ಧಸಾಮಗ್ರಿಗಳಲ್ಲಿ ಶಸ್ತ್ರಸಜ್ಜಿತ ಜೀಪ್‌ಗಳನ್ನು ಕಳಿಸಿಕೊಟ್ಟಿದೆ. ಇದರ ಫೋಟೋಗಳನ್ನು ಮೊಸಾದ್ ಸಟಾರಿಕಲ್ ಟ್ವಿಟರ್ ಹ್ಯಾಂಡಲ್ ಪ್ರಕಟ ಮಾಡಿದೆ. ಸಾಮಾನ್ಯವಾಗಿ ಇಂಥ ಆರ್ಮರ್ಡ್ ಜೀಪ್‌ಗಳನ್ನು ನೀಡುವುದು ಭೂಸೇನಾ ಕಾರ್ಯಗಳಿಗಾಗಿ ಮಾತ್ರ. ಗಡಿ ನುಗ್ಗುವಂಥ ಸಂದರ್ಭದಲ್ಲಿ ಎದುರಾಳಿ ಪಡೆಯಿಂದ ಯಾವುದೇ ಹಾನಿಯಾಗಬಾರದು ಎನ್ನುವ ಕಾರಣಕ್ಕೆ ಭೂಸೇನೆ ಇಂಥ ಜೀಪ್‌ಗಳನ್ನು ಬಳಕೆ ಮಾಡುತ್ತದೆ. ಈ ನಡುವೆ, ಯುದ್ಧದ ಸಮಯದಲ್ಲಿ ಈಗಾಗಲೇ ಹಾಳಾಗಿರುವ ಶಸ್ತ್ರಸಜ್ಜಿತ ಜೀಪ್‌ಗಳನ್ನು ಬದಲಾಯಿಸುವ ಸಲುವಾಗಿ ಅಮೆರಿಕ ಈ ಜೀಪ್‌ಗಳನ್ನು ಕಳಿಸಿಕೊಟ್ಟಿದೆ ಎಂದು ಇಸ್ರೇಲ್ ಸೇನಾ ಮೂಲಗಳು ಹೇಳಿದ್ದರೂ, ಇದರ ಹಿಂದಿನ ಉದ್ದೇಶ ಗಾಜಾ ಗಡಿಯನ್ನು ಪ್ರವೇಶಿಸುವುದೇ ಆಗಿದೆ.
'ಇಸ್ರೇಲ್ ರಕ್ಷಣಾ ಸಚಿವಾಲಯವು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ನಿಂದ ಸರಕು ವಿಮಾನವನ್ನು ಸ್ವೀಕರಿಸಿತು, ಇಸ್ರೇಲ್ ರಕ್ಷಣಾ ಪಡೆಗಳು (IDF) ಬಳಸಲು ಗೊತ್ತುಪಡಿಸಿದ ಶಸ್ತ್ರಸಜ್ಜಿತ ವಾಹನಗಳ ಆರಂಭಿಕ ಸಾಗಣೆ ಇದಾಗಿದೆ. ಯುದ್ಧದ ಸಮಯದಲ್ಲಿ ಹಾನಿಗೊಳಗಾದ ವಾಹನಗಳನ್ನು ಐಡಿಎಫ್ ಬದಲಾಯಿಸಲಿದೆ' ಎಂದು ಇಸ್ರೇಲ್ ರಕ್ಷಣಾ ಇಲಾಖೆ ಟ್ವೀಟ್ ಮಾಡಿದೆ. ಹಮಾಸ್ ವಿರುದ್ಧದ ಯುದ್ಧದ ನಡುವೆ ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ ಒಂದು ದಿನಗಳ ಒಳಗಾಗಿ ಇಸ್ರೇಲ್‌ಗೆ ಈ ರೀತಿಯ ಯುದ್ಧ ಸಾಮಗ್ರಿಗಳು ಬಂದಿರುವುದು ವಿಶೇಷವಾಗಿದೆ.
ಮಣಿಪುರಕ್ಕೆ ಹೋಗದ ನೀವು ಇಸ್ರೇಲ್‌ಗೆ ಹೋಗಿದ್ದೇಕೆ? ಟ್ರೋಲ್‌ಗೆ ಅಜಿತ್ ಹನಮಕ್ಕನವರ್ ಉತ್ತರ
ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ:ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್‌ನಿಂದ ವಾಪಾಸ್ ಹೋದ ಬೆನ್ನಲ್ಲಿಯೇ, ಹಿಜ್ಬುಲ್ಲಾ ಯುಎಸ್ ಮಿಲಿಟರಿ ನೆಲೆಯ ಮೇಲೆ ರಾಕೆಟ್ ಹಾರಿಸಿದೆ. ಮಾಧ್ಯಮ ವರದಿಯ ಮಾಹಿತಿಯ ಪ್ರಕಾರ ಬಿಡೆನ್ ವಾಪಸಾದ ಬಳಿಕ ಸಿರಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ದಾಳಿ ನಡೆಸಲಾಗಿದೆ. ಇರಾಕ್‌ನಲ್ಲಿಯೂ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಮಿತ್ರ ಸೇನೆಯ ಕೆಲವು ಸೈನಿಕರು ಇಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇರಾಕ್‌ನಲ್ಲಿನ ಅಮೆರಿಕ ಸೇನಾ ಶಿಬಿರಗಳ ಮೇಲೆ 24 ಗಂಟೆಗಳಲ್ಲಿ ಎರಡು ಡ್ರೋನ್ ದಾಳಿಗಳನ್ನು ನಡೆಸಲಾಗಿದೆ. ಪಶ್ಚಿಮ ಮತ್ತು ಉತ್ತರ ಇರಾಕ್‌ನ ಸೇನಾ ಶಿಬಿರಗಳ ಮೇಲಿನ ಈ ದಾಳಿಯಲ್ಲಿ ಮಿತ್ರ ಸೇನೆಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ. ಆದರೆ, ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದು ವರ್ಷದಲ್ಲಿ ಇರಾನ್ ಬೆಂಬಲಿತ ಗುಂಪುಗಳು ಇರಾಕ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲು. ಆದಾಗ್ಯೂ, ಮೂರು ಡ್ರೋನ್ ದಾಳಿಗಳು ನಡೆದಿವೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಇರಾಕ್ ಮತ್ತು ಕುರ್ದಿಸ್ತಾನ್ ಪ್ರದೇಶದ ಪಶ್ಚಿಮದಲ್ಲಿರುವ ಅಲ್-ಹರಿರ್ ಏರ್ ಬೇಸ್ ಮೇಲೆ ದಾಳಿ ನಡೆಸಲಾಗಿದೆ.
ಗಾಜಾಗೆ ವಿಶ್ವಾದ್ಯಂತ ಬೆಂಬಲ, ಆದರೆ ಗಾಜಾ ನಿರಾಶ್ರಿತರು ಅರಬ್ ರಾಷ್ಟ್ರಗಳಿಗೂ ಬೇಡ!