Asianet Suvarna News Asianet Suvarna News

ಗಡಿಯಲ್ಲಿ ನಿಮ್ಮ ತಂಟೆಗಳನ್ನು ಬಿಡಿ, ಚೀನಾಕ್ಕೆ ಅಮೆರಿಕದ ವಾರ್ನಿಂಗ್‌!

ಅರುಣಾಚಲ ಪ್ರದೇಶದ ಎಲ್‌ಎಸಿ ಬಳಿ ಚೀನಾ ಮತ್ತು ಭಾರತೀಯ ಸೈನಿಕರ ನಡುವಿನ ಘರ್ಷಣೆಯ ಬಗ್ಗೆ ಅಮೆರಿಕ ತನ್ನ ಪ್ರತಿಕ್ರಿಯೆ ನೀಡಿದೆ. ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಣೆ ಮಾಡುವ ಬದ್ಧತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಪ್ಯಾಟ್‌ ರೈಡರ್‌ ಹೇಳಿದ್ದಾರೆ. ಡಿಸೆಂಬರ್‌ 9 ರಂದು ಚೀನಾ ಪಡೆಗಳು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತದ ಒಳಗೆ ನುಸುಳುವ ಪ್ರಯತ್ನ ಮಾಡಿದ್ದವು. ಆ ಬಳಿಕ ಉಭಯ ದೇಶಗಳ ನಡುವಿನ ಗಡಿ ಪರಿಸ್ಥಿತಿ ಉದ್ವಿಗ್ನವಾಗಿದೆ.

USA gave a strong message to China on clash with Indian Army in Tawang came openly with India san
Author
First Published Dec 14, 2022, 11:57 AM IST

ನವದೆಹಲಿ (ಡಿ.14): ಅರುಣಾಚಲದ ಎಲ್‌ಎಸಿ ಬಳಿಯ ತವಾಂಗ್‌ನಲ್ಲಿ ನಡೆದ ಘರ್ಷಣೆಯಲ್ಲಿ ಭಾರತ ಹಾಗೂ ಚೀನಾ ರಾಷ್ಟ್ರಗಳ ನಡುವಿನ ಸೈನಿಕರ ಘರ್ಷಣೆಯಲ್ಲಿ ಅಮೆರಿಕ ಭಾರತವನ್ನು ಬೆಂಬಲಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ, ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ದೇಶಗಳನ್ನು ಚೀನಾ ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದೆ ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಿಸುವ ಬದ್ಧತೆಯಲ್ಲಿ ನಾವೆಂದೂ ಹಿಂದೆ ಸರಿಯುವುದಿಲ್ಲ. ಈ ವಿಚಾರದಲ್ಲಿ ದೃಢವಾಗಿ ನಿಲ್ಲುತ್ತೇವೆ ಎಂದು  ಪೆಂಟಗನ್ ಪ್ರೆಸ್ ಕಾರ್ಯದರ್ಶಿ ಪ್ಯಾಟ್ ರೈಡರ್ ಹೇಳಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆ, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪೆಂಟಗನ್ ಹೇಳಿದೆ. ಎಲ್‌ಎಸಿ ಬಳಿ ಚೀನಾದಿಂದ ಮಿಲಿಟರಿ ಮೂಲಸೌಕರ್ಯಗಳ ಮಿಲಿಟರಿಕರಣ ಮತ್ತು ನಿರ್ಮಾಣವನ್ನು ಅಮೆರಿಕ ಟೀಕಿಸಿದೆ. "ನಮ್ಮ ಮಿತ್ರರಾಷ್ಟ್ರಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿರುತ್ತೇವೆ" ಎಂದು ಪೆಂಟಗನ್‌ ಪತ್ರಿಕಾ ಕಾರ್ಯದರ್ಶಿ ಪ್ಯಾಟ್ ರೈಡರ್ ಹೇಳಿದ್ದು, ನೇರವಾಗಿ ಚೀನಾ ಮೇಲಿನ ಟೀಕೆ ಎಂದು ಬಿಂಬಿಸಲಾಗಿದೆ.ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮಾಡುತ್ತಿರುವ ಪ್ರಯತ್ನವನ್ನು ನಾವು ಎಂದಿಗೂ ಬೆಂಬಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಚೀನಾದ ಸೇನಾಪಡೆಗಳು ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಎಲ್‌ಎಸಿ ಬಳಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ಮಾಡಿದ್ದವು. ಆದರೆ ನಮ್ಮ ಸೈನಿಕರು ಚೀನಾದ ಸೈನಿಕರನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿದರು. ಭಾರತದ ಸೈನಿಕರು ಚೀನಾದ ಸೇನಾಪಡೆಗಳ ಯೋಜನೆಯನ್ನು ವಿಫಲಗೊಳಿಸಿದರು. ಇದರಿಂದಾಗಿ ಚೀನಾ ಸೈನಿಕರು ಗಡಿಯಲ್ಲಿ ಹಿಂದೆ ಸರಿದಿದ್ದರು ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಸದನದಲ್ಲಿ ಹೇಳಿದ್ದರು. ಚಕಮಕಿಯ ವೇಳೆ ಎರಡೂ ಕಡೆಯಿಂದ ಘರ್ಷಣೆ ನಡೆದಿದೆ. ಈ ಚಕಮಕಿಯಲ್ಲಿ ಭಾರತದ ಯಾವುದೇ ಸೈನಿಕರು ಸಾವು ಕಂಡಿಲಲ್ಲ. ಮತ್ತು ಯಾರೂ ಕೂಡ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಹೇಳಿದ್ದರು.

ಘಟನೆಯ ವಿಚಾರವಾಗಿ ಶ್ವೇತಭವನ ಕೂಡ ಅಧಿಕೃತ ಹೇಳಿಕೆ ಪ್ರಕಟಿಸಿದೆ. ವೈಟ್‌ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕರೀನ್‌ ಜೀನ್‌ ಪಿಯರ್‌, ಅಮೆರಿಕ ಎಲ್‌ಎಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಅರುಣಾಚಲದಲ್ಲಿ ಗಡಿ ಚಕಮಕಿ ಕುರಿತು ಹೇಳಿಕೆ ನೀಡಿರುವ ಅಮೆರಿಕ, ಎರಡೂ ದೇಶಗಳ ಸೇನೆ ಸಕಾಲದಲ್ಲಿ ಹಿಮ್ಮೆಟ್ಟಿರುವುದು ಸಂತಸದ ಸಂಗತಿ ಎಂದು ಹೇಳಿದೆ.

ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!

ಭಾರತ ಮತ್ತು ಅಮೆರಿಕದ ಸೇನೆಗಳು ಇತ್ತೀಚೆಗೆ ಉತ್ತರಾಖಂಡನಲ್ಲಿ ಎಲ್‌ಎಸಿಯಿಂದ ಸುಮಾರು 100 ಕಿಮೀ ದೂರದಲ್ಲಿ ಜಂಟಿ ಮಿಲಿಟರಿ ವ್ಯಾಯಾಮ 'ಯುದ್ಧ ಅಭ್ಯಾಸ'ದ 18 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದವು. ಈ ಜಂಟಿ ಸಮರಾಭ್ಯಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೀನಾ, ಈ ಸೇನಾ ಸಮರಾಭ್ಯಾಸವು ನವದೆಹಲಿ ಮತ್ತು ಬೀಜಿಂಗ್ ನಡುವಿನ ಒಪ್ಪಂದಗಳ ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಚೀನಾದ ಪ್ರತಿಭಟನೆಯನ್ನು ತಿರಸ್ಕರಿಸಿದ್ದು, ಉಭಯ ದೇಶಗಳ ನಡುವಿನ ಮಿಲಿಟರಿ ವ್ಯಾಯಾಮದ ಬಗ್ಗೆ ಮೂರನೇ ದೇಶಕ್ಕೆ ಪ್ರತಿಕ್ರಿಯಿಸಲು ಅವಕಾಶವಿಲ್ಲ ಎಂದು ಹೇಳಿದೆ.

ಚೀನಾಗೆ ಠಕ್ಕರ್‌ ಕೊಡಲು ನಾಳೆಯಿಂದ 2 ದಿನ ಭಾರತೀಯ ವಾಯುಪಡೆ ಸಮರಾಭ್ಯಾಸ..!

ಭಾರತ ಮತ್ತು ಅಮೆರಿಕ ನಡುವಿನ ಸೇನಾ ಸಮರಾಭ್ಯಾಸಕ್ಕೂ 1993 ಮತ್ತು 1996ರ ಒಪ್ಪಂದಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತ ಯಾರೊಂದಿಗೆ ಸೇನಾ ಸಮರಾಭ್ಯಾಸ ನಡೆಸಬೇಕು ಎನ್ನುವ ತೀರ್ಮಾನ ಭಾರತದ್ದೇ ಆಗಿರುತ್ತದೆ ಎಂದು ಹೇಳಿದ್ದರು.

Follow Us:
Download App:
  • android
  • ios