* ಪಶ್ಚಿಮ ರಾಷ್ಟ್ರಗಳಲ್ಲಿ ಕೋವಿಡ್‌ ಹೊಸ ಅಲೆ!*ಅಮೆರಿಕ, ಯುರೋಪ್‌ನಲ್ಲಿ 2 ತಿಂಗಳ ಬಳಿಕ ಸೋಂಕು ಒಂದೇ ವಾರದಲ್ಲಿ ಶೇ.4 ಏರಿಕೆ* ಸಾಂಕ್ರಾಮಿಕ ಮುಗಿದಿಲ್ಲ: ಡಬ್ಲ್ಯುಎಚ್‌ಒ* ಭಾರತಕ್ಕೂ 3ನೇ ಅಲೆಯ ಎಚ್ಚರಿಕೆ 

ನವದೆಹಲಿ(ನ. 01) ಅಮೆರಿಕ, ಬ್ರಿಟನ್‌, ರಷ್ಯಾ, ಉಕ್ರೇನ್‌, ಟರ್ಕಿ, ಜರ್ಮನಿ, ಬ್ರೆಜಿಲ್‌ ಸೇರಿದಂತೆ ಹಲವು ದೇಶಗಳಲ್ಲಿ ಕಳೆದ 2 ತಿಂಗಳ ಬಳಿಕ ಮತ್ತೆ ಹೊಸ ಕೊರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಭಾರತ ಸೇರಿದಂತೆ ಇತರೆ ದೇಶಗಳಿಗೆ 3ನೇ ಅಲೆಯ ಎಚ್ಚರಿಕೆಯ ಕರೆಗಂಟೆಯಾಗಿ ಕೇಳಿಸಿದೆ.

ಭಾರತದಲ್ಲಿ ಕಳೆದ 126 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಹೊಸ ಸೋಂಕು ಮತ್ತು ಸಾವು ಎರಡೂ ನಿಯಂತ್ರಣದಲ್ಲಿದೆ ಎಂದು ಕಂಡುಬರುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅ.28ರಂದು ಬಿಡುಗಡೆ ಮಾಡಿದ ತನ್ನ ವಾರದ ಕೋವಿಡ್‌ ವರದಿಯಲ್ಲಿ, ‘ವಿಶ್ವದ ಎಲ್ಲಾ ದೇಶಗಳು ಇನ್ನೂ ಎರಡೂ ಲಸಿಕೆ ಪಡೆದವರೂ ಸೇರಿದಂತೆ ಎಲ್ಲರಿಗೂ ಹೊಸ ಕೊರೋನಾ ತಳಿಗಳು ಬಾಧಿಸುವ ಅಪಾಯ ಎದುರಿಸುತ್ತಿವೆ’ ಎಂದು ಎಚ್ಚರಿಕೆ ನೀಡಿದೆ. ಇದು ಭಾರತಕ್ಕೂ ಆತಂಕ ಮೂಡಿಸುವ ವಿಚಾರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧೋನಾಮ್‌ ಘೇಬ್ರಿಯಾಸಿಸ್‌, ‘ಕಳೆದ 2 ತಿಂಗಳಲ್ಲೇ ಮೊದಲ ಬಾರಿಗೆ ವಿಶ್ವದಾದ್ಯಂತ ಹೊಸ ಪ್ರಕರಣ ಮತ್ತು ಸಾವು ಎರಡರಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಕೋವಿಡ್‌ ಸಾಂಕ್ರಾಮಿಕದ ಅಪಾಯ ಇನ್ನೂ ಮುಗಿದಿಲ್ಲ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ದೇಶದಲ್ಲೂ ಕೋವಿಡ್‌ ನಿಯಂತ್ರಣವಾಗದ ಹೊರತಾಗಿಯೂ, ವೈರಸ್‌ ಹೊಸ ಹೊಸ ರೂಪ ತಾಳುತ್ತಲೇ ಇರುತ್ತದೆ ಮತ್ತು ಎಲ್ಲೆಡೆ ಹಬ್ಬುತ್ತಲೇ ಇರುತ್ತದೆ. ಶ್ರೀಮಂತ ದೇಶಗಳು ಸೇರಿದಂತೆ ಎಲ್ಲಾ ದೇಶಗಳು ಮತ್ತೆ ಕೋವಿಡ್‌ ಪಿಡುಗಿಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿವೆ. ಹೀಗಾಗಿ ದೇಶಗಳು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟುಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಬಹುತೇಕ ದೇಶಗಳು 3ನೇ ಅಲೆಯ ಅಪಾಯದಲ್ಲಿವೆ ಎಂದು ಅವರು ಎಚ್ಚರಿಸಿದ್ದಾರೆ.

ಮುಗಿಯದ ಕೊರೋನಾ ಕಾಟ, ರಷ್ಯದಲ್ಲಿ ವೇತನ ಸಹಿತ ರಜೆ

ಪ್ರಕರಣ ಶೇ.5ರಷ್ಟುಹೆಚ್ಚಳ: ಕಳೆದ ಕೆಲವು ವಾರಗಳಿಂದ ವಾರದ ಸರಾಸರಿ ಕೋವಿಡ್‌ ಪ್ರಕರಣ ಮತ್ತು ಸಾವು ಎರಡರಲ್ಲೂ ಏರಿಕೆ ದಾಖಲಾಗುತ್ತಿದೆ. ಪ್ರತಿ ವಾರ 30 ಲಕ್ಷ ಕೇಸು ಮತ್ತು ಅಂದಾಜು 50 ಸಾವಿರ ಸಾವು ದಾಖಲಾಗುತ್ತಿದೆ. ಇದು ಹಿಂದಿನ ವಾರಗಳಿಗಿಂತ ಕ್ರಮವಾಗಿ ಶೇ.4. ಮತ್ತು ಶೇ.5ರಷ್ಟುಹೆಚ್ಚು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಅ.28ರಂದು ಅಮೆರಿಕದಲ್ಲಿ 80000ಕ್ಕಿಂತ ಹೆಚ್ಚು ಕೇಸು, 1681 ಸಾವು, ಬ್ರಿಟನ್‌ನಲ್ಲಿ 41278 ಕೇಸು, 166 ಸಾವು, ರಷ್ಯಾದಲ್ಲಿ 39000ಕ್ಕಿಂತ ಹೆಚ್ಚಿನ ಕೇಸು, 1163 ಸಾವು ದಾಖಲಾಗಿದೆ. ಅದೇ ರೀತಿ ಉಕ್ರೇನ್‌ (26870 ಪ್ರಕರಣ), ಟರ್ಕಿ (25528), ಜರ್ಮನಿ (24668), ಬ್ರೆಜಿಲ್‌ (17184) ದೇಶಗಳಲ್ಲೂ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.

ಮತ್ತೊಂದೆಡೆ ಚೀನಾದಲ್ಲೂ ಡೆಲ್ಟಾಪ್ಲಸ್‌ ವೈರಸ್‌ ಹಾವಳಿ ಎಬ್ಬಿಸಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಸರ್ಕಾರ ಸಂಪೂರ್ಣ ಲಾಕ್ಡೌನ್‌ ಮಾಡಿದೆ. ಈ ಎಲ್ಲಾ ಅಂಶಗಳು ಭಾರತ ಸೇರಿದಂತೆ ಜನಸಂಖ್ಯೆ ಮತ್ತು ಜನಸಾಂದ್ರತೆ ಹೆಚ್ಚಿರುವ ದೇಶಗಳಲ್ಲಿ 3ನೇ ಅಲೆಯ ಭೀತಿಯನ್ನು ಹುಟ್ಟುಹಾಕಿದೆ.