ಪೊವೆಲ್‌[ಫೆ.28]: ಇನ್‌ ವಿಟ್ರೋ ಫರ್ಟಿಲೈಸೇಷನ್‌ (ಐವಿಎಫ್‌) ಮತ್ತು ಭ್ರೂಣ ವರ್ಗ ಮಾದರಿ ಮೂಲಕ ಅಮೆರಿಕದಲ್ಲಿ ಎರಡು ಚಿರತೆ ಮರಿಗಳ ಜನನವಾಗಿದ್ದು, ಇದು ಈ ತಂತ್ರಜ್ಞಾನದ ಮೂಲಕ ಜನಿಸಿದ ವಿಶ್ವದ ಮೊದಲ ಚಿರತೆ ಮರಿಗಳು ಎಂಬ ದಾಖಲೆಗೆ ಪಾತ್ರವಾಗಿವೆ. ಇಲ್ಲಿನ ಓಹಿಯೋ ಮೃಗಾಲಯದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯ ಜನನವಾಗಿದೆ.

ಫಲವತ್ತತೆ ಇಲ್ಲದ 6 ವರ್ಷದ ಕಿಬ್ಬಿ ಎಂಬ ಚಿರತೆಯ ಅಂಡಾಣುಗಳನ್ನು ಸಂಗ್ರಹಿಸಿ ಕೊಲಂಬಸ್‌ ಮೃಗಾಲಯದಲ್ಲಿ ಲ್ಯಾಬ್‌ನಲ್ಲಿ ಕೃತಕ ಗರ್ಭಧಾರಣೆ ಮೂಲಕ ಫಲವತ್ತತೆ ಮಾಡಲಾಗಿತ್ತು. ಬಳಿಕ ಅದನ್ನು ಮೂರು ವರ್ಷದ ಇಝ್ಝಿ ಎಂಬ ಚಿರತೆಯ ಗರ್ಭಕೋಶದಲ್ಲಿ ಇರಿಸಲಾಗಿತ್ತು. ಬಳಿಕ ಭ್ರೂಣ ಬೆಳವಣಿಗೆ ಕಂಡಿದ್ದು, ಇಝ್ಝಿ ಎರಡು ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ ಎಂದು ಒಹಿಯೋ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಐವಿಎಫ್‌ ತಂತ್ರಜ್ಞಾನ:

ವೈಜ್ಞಾನಿಕವಾಗಿ ಮಗು ಪಡೆಯುವ ವಿಧಾನ ಇದಾಗಿದ್ದು, ಮಹಿಳೆಯಿಂದ ಅಂಡಾಣುವನ್ನು ಸಂಗ್ರಹಿಸಿ, ಅದನ್ನು ಪ್ರಯೋಗಾಲಯದಲ್ಲಿ ಪುರುಷರ ವೀರ್ಯದೊಂದಿಗೆ ಸಂಯೋಜಿಸಲಾಗುತ್ತದೆ. ಫಲವತ್ತತೆಯಾದರೆ ಅದನ್ನು ಬಳಿಕ ಇನ್ನೊಂದು ಮಹಿಳೆಯ ಅಂಡಾಶಯದಲ್ಲಿ ಇರಿಸಲಾಗುತ್ತದೆ. ಈ ವಿಧಾನದ ಸಂತಾನೋತ್ಪತಿಯನ್ನು ಐವಿಎಫ್‌ ಎನ್ನಲಾಗುತ್ತದೆ.