* ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ*  ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚನೆ* ಉಗ್ರರ ಬಗ್ಗೆ ಪಾಕ್‌ ಡಬ್ಬಲ್‌ ಆ್ಯಕ್ಟಿಂಗ್‌: ಅಮೆರಿಕ ಗರಂ!

ವಾಷಿಂಗ್ಟನ್‌(ಸೆ.15): ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದೆ. ಹೀಗಾಗಿ ಆ ರಾಷ್ಟ್ರದ ಜೊತೆಗಿನ ಸಂಬಂಧವನ್ನು ನಾವು ಮರು ಪರಿಶೀಲನೆ ಮಾಡಲಿದ್ದೇವೆ ಎಂದು ಅಮೆರಿಕದ ಜೋ ಬೈಡೆನ್‌ ಆಡಳಿತ ಹೇಳಿದೆ.

ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ಗೆ, ಸದಸ್ಯರು ಸರಣಿ ಪ್ರಶ್ನೆಗಳನ್ನು ಎಸೆದರು. ನ್ಯಾಟೋ ಹೊರತು ಪಡಿಸಿ ಪಾಕಿಸ್ತಾನವನ್ನು ಪ್ರಮುಖ ಮಿತ್ರ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದೆ. ಆದರೆ ಕಳೆದ 2 ದಶಕಗಳಿಂದಲೂ ತಾಲಿಬಾನ್‌ ಉಗ್ರರು ಅದರಲ್ಲೂ ವಿಶೇಷವಾಗಿ ಹಕ್ಕಾನಿ ಸಂಘಟನೆ ಜೊತೆ ಪಾಕ್‌ ಸರ್ಕಾರ ಹತ್ತಿರದ ನಂಟು ಹೊಂದಿದೆ. ಪಾಕ್‌ ಸರ್ಕಾರದ ಇಂಥ ಹಲವು ಹಿತಾಸಕ್ತಿಗಳು ಅಮೆರಿಕದ ಪಾಲಿಗೆ ಮಾರಕವಲ್ಲವೇ ಎಂದು ಬ್ಲಿಂಕನ್‌ ಅವರನ್ನು ಸದಸ್ಯರು ಪ್ರಶ್ನಿಸಿದರು. ಈ ವೇಳೆ ಬ್ಲಿಂಕನ್‌ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ನಡೆಯನ್ನು ನಮ್ಮ ಆಡಳಿತ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಸದಸ್ಯರು, ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೋಯೇತರ ಅತ್ಯಾಪ್ತ ದೇಶ ಮನ್ನಣೆ ತೆಗೆಯುವುದು, ಆಫ್ಘನ್‌ ವಲಯದಲ್ಲಿ ಪಾಕ್‌ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪಾಕಿಸ್ತಾನದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು ಸಲಹೆ ನೀಡಿದ್ದಾರೆ.