ಇಸ್ಕಾನ್ ರಾಧಾ ಕೃಷ್ಣ ಉಟ್ಹಾ ಮಂದಿರದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 20 ಗಂಡುಗಳನ್ನು 100 ಅಡಿ ಅಂತರದಲ್ಲಿ ಹಾರಿಸಲಾಗಿದೆ. ದೇವರ ಕೃಪೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ನ್ಯೂಯಾರ್ಕ್ (ಜು.01) ಇಸ್ಕಾನ್ ಆಡಳಿತದ ರಾಧಾ ಕೃಷ್ಣ ಮಂದಿರದ ಮೇಲೆ ಬರೋಬ್ಬರಿ 20 ಗುಂಡು ಹಾರಿಸಿದ ಘಟನೆ ನಡೆದಿದೆ. ಅಮೆರಿಕದ ಉಟ್ಹಾ ಬಳಿಯ ಸ್ಪಾನಿಶ್ ಫೋರ್ಕ್ ಮುಖ್ಯರಸ್ತೆಯಲ್ಲಿರುವ ಶ್ರೀ ರಾಧಾ ಕೃಷ್ಣ ಮಂದಿರದ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. 100 ಅಡಿಗಳ ಅಂತರದಿಂದ 20 ಬಾರಿ ಗುಂಡು ಹಾರಿಸಲಾಗಿದೆ. ರಾಧ ಕೃಷ್ಣನ ಕೃಪೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಸಿಟಿವಿ ಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೇವಸ್ಧಾನದ ಹಲವು ಭಾಗಗಳಿಗೆ ಹಾನಿ

ಇಸ್ಕಾನ್ ದೇಗುಲಗಳ ಪೈಕಿ ಶ್ರೀ ರಾಧಾ ಕೃಷ್ಣ ಮಂದಿ ಅತ್ಯಂತ ಜನಪ್ರಿಯವಾಗಿದೆ. ವಿವಿದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಯಿಂದ ಅಮೆರಿಕದ ರಾಧಾ ಕೃಷ್ಣ ಮಂದಿರ ಭಾರಿ ಭಕ್ತರನ್ನು ಸೆಳೆಯುತ್ತದೆ. ಜೂನ್ ತಿಂಗಳಲ್ಲಿ ಈ ಘಟನೆ ನಡೆದಿದೆ. ಇದೀಗ ಪ್ರಕರಣದ ತನಿಖೆ ತೀವ್ರಗೊಂಡಿದೆ. ಗುಂಡಿನ ದಾಳಿಯಲ್ಲಿ ದೇವಸ್ಥಾನದ ಹಲವು ಭಾಗಗಳಿಗೆ ಹಾನಿಯಾಗಿದೆ. ದೇವಸ್ಥಾನದ ಗೋಪುರ, ಗೋಡೆ, ಗಾಜು ಸೇರಿದಂತೆ ಹಲವು ಭಾಗಗಳಲ್ಲಿ ಹಾನಿಯಾಗಿದೆ. ಸಾರ್ವಜನಿಕರು ಸೇರುವ ಪ್ರಾಂಗಣದಲ್ಲೂ ಹಾನಿಯಾಗಿದೆ. ಗುಂಡಿನ ದಾಳಿ ವೇಳೆ ಭಕ್ತರು ಇಲ್ಲದ ಕಾರಣ ಪ್ರಾಣ ಹಾನಿ ಆತಂಕ ದೂರವಾಗಿದೆ.

ಭಕ್ತರಲ್ಲಿ ಆತಂಕ ಸೃಷ್ಟಿಸುವ ಉದ್ದೇಶ

ದ್ವೇಷದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಭಕ್ತರಲ್ಲಿ ಆತಂಕ ಸೃಷ್ಟಿಸಲು ದುಷ್ಕರ್ಮಿಗಳು ಈ ದಾಳಿಗೆ ಪ್ಲಾನ್ ಮಾಡಿರುವ ಸಾಧ್ಯತೆ ಇದೆ. ರಾತ್ರಿ ವೇಳೆ ದುಷ್ಕರ್ಮಿಗಳು ವೇಗವಾಗಿ ಕಾರಿನಲ್ಲಿ ಆಗಮಿಸಿ ದೇವಸ್ಥಾನ ಸಮೀಪ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಎರಡು ದಿನ ರಾತ್ರಿ ಈ ರೀತಿಯ ಗುಂಡಿನ ದಾಳಿ ಆಗಿದೆ.

Scroll to load tweet…

ಮೊದಲ ದಿನ ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ದೇವಸ್ಥಾನದ ಆಡಳಿತ ಕಚೇರಿಯ ಪದಾಧಿಕಾರಿ ಎಚ್ಚೆತ್ತಿದ್ದಾರೆ. ರಾಧಾ ಕೃಷ್ಣ ದೇಗುಲದ ಪಕ್ಕದಲ್ಲೇ ಇರುವ ಕೃಷ್ಣ ರೇಡಿಯೋ ಸ್ಟೇಶನ್ ಕಟ್ಟಡ ಬಳಿ ಗುಂಡಿನ ದಾಳಿ ಸದ್ದು ಕೇಳಿಸಿದೆ. ಆದರೆ ಪಟಾಕಿ ಇರಬಹುದು, ಅಥವಾ ಹುಡುಗರು ಸಂಭ್ರಮಾಚರಣೆ ಇರುವ ಸಾಧ್ಯತೆ ಇದೆ ಎಂದು ಪದಾಧಿಕಾರಿ ಭಾವಿಸಿದ್ದಾರೆ. ಮರು ದಿನ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದಾಗ ಹಲವು ಭಾಗಗಳು ಗುಂಡಿನ ದಾಳಿಯಲ್ಲಿ ಹಾನಿಯಾಗಿರುವುದು ಪತ್ತೆಯಾಗಿದೆ.

ಸಿಬ್ಬಂದಿಗಳು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ಪತ್ತೆಯಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿದೆ. ಇಸ್ಕಾನ್ ದೇಗುಲವನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಶಾಂತಿಯುತವಾಗಿ ಧರ್ಮದ ಪಾಲನೆ ಮಾಡುತ್ತಿರುವ ಸಮುದಾಯದ ಮೇಲೆ ಈ ದಾಳಿಯಾಗಿದೆ ಎಂದು ಶ್ರೀ ರಾಧಾ ಕೃಷ್ಣ ದೇಗುಲ ಆಡಳಿತ ಮಂಡಳಿ ಹೇಳಿದೆ.