* ಉಗ್ರರಿಂದ ದೇಶ ರಕ್ಷಿಸಲು ಆಫ್ಘನ್‌ ಸೇನೆ ಶಕ್ತ* ಆಫ್ಘನ್‌ನಲ್ಲಿ ತಾಲಿಬಾನ್‌ ನಡೆ ಮೇಲೆ ನಿಗಾ: ಅಮೆರಿಕ* ಸೇನೆಗೆ ಅಗತ್ಯ ನೆರವು ನೀಡುತ್ತೇವೆ: ಸೇನಾ ವಕ್ತಾರ

ವಾಷಿಂಗ್ಟನ್‌(ಜು.13): ಆಷ್ಘಾನಿಸ್ತಾನದ ಅತಿದೊಡ್ಡ ನಗರಗಳಲ್ಲಿ ಒಂದಾಗಿರುವ ಕಂದಹಾರ್‌ ಅನ್ನು ತಾಲಿಬಾನ್‌ ಭಯೋತ್ಪಾದಕರು ವಶಕ್ಕೆ ಪಡೆದಿರುವ ಬೆನ್ನಲ್ಲೇ, ಅಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕ ಸರ್ಕಾರ ಹೇಳಿದೆ.

ಅಲ್ಲದೆ ಕಾಬೂಲ್‌ನಲ್ಲಿರುವ ತಮ್ಮ ಪಾಲುದಾರರು ಮತ್ತು ಆಷ್ಘಾನಿಸ್ತಾನ ರಾಷ್ಟ್ರಕ್ಕೆ ತಮ್ಮ ದೇಶದ ಸಾರ್ವಭೌಮತ್ವದ ರಕ್ಷಣೆಯನ್ನು ಉತ್ತೇಜಿಸುವುದಾಗಿ ಅಮೆರಿಕದ ಸೇನಾ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಕಿರ್ಬಿ ಅವರು, ‘ಆಷ್ಘಾನಿಸ್ತಾನದಲ್ಲಿ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಿದ ತಾಲಿಬಾನಿಗಳು ಮೆರೆಯುತ್ತಿರುವ ಅಟ್ಟಹಾಸವನ್ನು ಗಮನಿಸುತ್ತಿದ್ದೇವೆ. ಉಗ್ರರಿಂದ ತಮ್ಮ ದೇಶದ ರಕ್ಷಣೆ ಮಾಡಿಕೊಳ್ಳುವಷ್ಟುಆಷ್ಘಾನಿಸ್ತಾನ ಭದ್ರತಾ ಪಡೆ ಸಮರ್ಥವಾಗಿದೆ. ಇದಕ್ಕಾಗಿ ಅದಕ್ಕೆ ಅಗತ್ಯವಿರುವ ನೆರವನ್ನು ಅಮೆರಿಕ ನೀಡಲಿದೆ’ ಎಂದಿದ್ದಾರೆ.

‘ನಮ್ಮ ಸೇನಾ ಪಡೆಯ ಶೇ.90ಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿ ಆಷ್ಘಾನಿಸ್ತಾನದಿಂದ ತೆರವು ಮಾಡಿದ್ದಾರೆ. ಆದರೆ ಆಷ್ಘಾನಿಸ್ತಾನ ಮತ್ತು ಆ ರಾಷ್ಟ್ರಕ್ಕೆ ಹಣಕಾಸು, ಮಿಲಿಟರಿ ನೆರವು ಸೇರಿದಂತೆ ಎಲ್ಲಾ ನೆರವು ನೀಡಲಾಗುತ್ತದೆ’ ಎಂದು ಕಿರ್ಬಿ ಹೇಳಿದ್ದಾರೆ.