ಅಮೆರಿಕ ಅಧ್ಯಕೀಯ ಚುನಾವಣೆ ರಿಪಬ್ಲಿಕನ್ನರಲ್ಲಿ ವಿವೇಕ್ 2ನೇ ಸ್ಥಾನಕ್ಕೆ ಟ್ರಂಪ್‌ಗೆ ಶಿಕ್ಷೆಯಾದರೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಗೆ ಅವಕಾಶ ಸಾಧ್ಯತೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಗಮನ ಸೆಳೆವ ಬೆಳವಣಿಗೆಯೊಂದು ನಡೆದಿದ್ದು, ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ 2ನೇ ಸ್ಥಾನಕ್ಕೇರಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದು, ಒಂದು ವೇಳೆ ಚುನಾವಣೆಗೂ ಮೊದಲು ಟ್ರಂಪ್ ಶಿಕ್ಷೆಗೆ ಒಳಗಾದರೆ ವಿವೇಕ್‌ಗೆ ಅವಕಾಶದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಬಹುತೇಕ ಅಮೆರಿಕನ್ನರಿಗೆ ಹೆಸರೇ ಗೊತ್ತಿಲ್ಲದಂತಹ ವ್ಯಕ್ತಿ ಇದ್ದಕ್ಕಿಂದ್ದಂತೆ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದಲ್ಲಿ ಶೇ.56ರಷ್ಟುಮತ ಗಳಿಸಿಕೊಂಡಿರುವ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಶೇ.10ರಷ್ಟುಮತಗಳನ್ನು ಪಡೆದುಕೊಂಡಿರುವ ವಿವೇಕ್ ರಾಮಸ್ವಾಮಿ ಮತ್ತು ಫ್ಲೋರಿಡಾದ ಗವರ್ನರ್ ರಾನ್ ಡೆಸ್ಯಾಂಟಿಸ್ 2ನೇ ಸ್ಥಾನದಲ್ಲಿದ್ದಾರೆ. ಜೂನ್‌ನಲ್ಲಿ ಶೇ.21ರಷ್ಟುಮತ ಪಡೆದುಕೊಂಡಿದ್ದ ಡೆಸ್ಯಾಂಟಿಸ್ ಮತ ಇದೀಗ ಕುಸಿತ ಕಂಡಿದೆ. ಹಾಗಾಗಿ ವಿವೇಕ್, ಟ್ರಂಪ್ ಬಳಿಕ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ವೇಳೆ ಶಿಕ್ಷೆಗೆ ಒಳಗಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡರೆ, ಆ ಅವಕಾಶ 2ನೇ ಸ್ಥಾನದಲ್ಲಿರುವ ವಿವೇಕ್‌ಗೆ ಲಭ್ಯವಾಗಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇತರ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಗಳ ವಿರುದ್ಧ ಪ್ರಾಥಮಿಕ ಚರ್ಚೆಗಳನ್ನು ಬಿಟ್ಟುಬಿಡುವುದಾಗಿ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ, ಹೊಸ ಸಮೀಕ್ಷೆಯನ್ನು ಉಲ್ಲೇಖಿಸಿ GOP ನಾಮನಿರ್ದೇಶನಕ್ಕೆ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮುನ್ನಡೆ ಸಾಧಿಸಿದ್ದಾರೆ.
