ಜೋ ಬೈಡನ್ ಗೆದ್ರೆ ಕಮಲಾ ಅಮೆರಿಕ ಉಪಾಧ್ಯಕ್ಷೆ..?
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ಚುರುಕು ಪಡೆಯುತ್ತಿದೆ. ಒಂದು ವೇಳೆ ಡೆಮಾಕ್ರೆಟಿಕ್ ಪಕ್ಷದಿಂದ ಜೋ ಬೈಡನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದರೆ ಭಾರತ ಮೂಲದ ಕಮಲ ಹ್ಯಾರಿಸ್ ಉಪಾಧ್ಯಕ್ಷೆಯಾಗಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಷಿಂಗ್ಟನ್(ಆ.02): ಭಾರತೀಯ ಮೂಲದ ಸಂಸದೆ ಕಮಲಾ ಹ್ಯಾರಿಸ್ ಈ ಬಾರಿ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ತಮ್ಮ ಆಯ್ಕೆ ಪ್ರಕಟಿಸುವ ಸಾಧ್ಯತೆಯಿದೆ.
ಇತ್ತೀಚೆಗಷ್ಟೇ ಪ್ರಚಾರ ಸಮಾರಂಭವೊಂದರ ವೇಳೆ ಬೈಡನ್ ಹಿಡಿದುಕೊಂಡಿದ್ದ ಚೀಟಿಯಲ್ಲಿ ಕೆಲ ಹೆಸರುಗಳಿದ್ದ ಫೋಟೋ ವೈರಲ್ ಆಗಿತ್ತು. ಅದರಲ್ಲಿ ಕಮಲಾ ಹ್ಯಾರಿಸ್ ಹೆಸರು ಮೊದಲಿಗೆ ಇತ್ತು. ಇದಕ್ಕೂ ಮೊದಲೇ ಬೈಡನ್ ತಮ್ಮ ಅವಧಿಯಲ್ಲಿ ಉಪಾಧ್ಯಕ್ಷ ಹುದ್ದೆಗೆ ಮಹಿಳೆಯೊಬ್ಬರನ್ನು ಅಭ್ಯರ್ಥಿ ಮಾಡುವುದಾಗಿ ಹೇಳಿದ್ದರು. ನಂತರ ಕ್ಯಾಲಿಫೋರ್ನಿಯಾದ ಸೆನೆಟ್ ಸದಸ್ಯೆಯಾಗಿರುವ ಕಮಲಾ ಹೆಸರು ಹೆಚ್ಚು ಚಾಲ್ತಿಗೆ ಬಂದಿತ್ತು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!
ಅಧ್ಯಕ್ಷೀಯ ಅಭ್ಯರ್ಥಿಯಾಗಿ ಬೈಡನ್ ಅವರನ್ನು ಘೋಷಿಸಲು ಡೆಮಾಕ್ರೆಟಿಕ್ ಪಕ್ಷದ ಸಭೆ ಆಗಸ್ಟ್ ಮೂರನೇ ವಾರ ನಡೆಯಲಿದ್ದು, ಅದಕ್ಕೂ ಒಂದು ವಾರ ಮೊದಲು ಅವರು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ. ಹಾಲಿ ಬೈಡನ್ ಅಧ್ಯಕ್ಷ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಅವರು ಆಯ್ಕೆಯಾದರೆ ಉಪಾಧ್ಯಕ್ಷರನ್ನು ನೇರವಾಗಿ ಆರಿಸಿಕೊಳ್ಳುತ್ತಾರೆ. ಹೀಗಾಗಿ ಬೈಡನ್ ಆಯ್ಕೆಯಾದರೆ ಕಮಲಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಕಮಲಾ ಹ್ಯಾರಿಸ್ ಅವರ ತಾಯಿ ತಮಿಳುನಾಡಿನಲ್ಲಿ ಜನಿಸಿ ಅಮೆರಿಕಕ್ಕೆ ವಲಸೆ ಹೋದ ವೈದ್ಯೆ. ಅವರು ಆಫ್ರಿಕಾ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು. ಅವರಿಗೆ ಜನಿಸಿದ ಕಮಲಾ ಅಮೆರಿಕದಲ್ಲೇ ಹುಟ್ಟಿಬೆಳೆದು ವಕೀಲೆಯಾಗಿ ಪ್ರಸಿದ್ಧಿ ಪಡೆದು, 2017ರಿಂದ ಸಂಸದೆಯಾಗಿದ್ದಾರೆ.