ಇರಾನ್ ಕಡೆಗೆ ದೊಡ್ಡ ಸೇನಾ ಪಡೆಗಳನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದ್ದು, ಅರಬ್ಬೀ ಸಮುದ್ರದಲ್ಲಿ ಶೀಘ್ರದಲ್ಲೇ ನೌಕಾ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಸೂಚಿಸಿವೆ.

-ಅಮೆರಿಕದ ಯುದ್ಧವಿಮಾನ ಇಳಿಯುತ್ತಿರುವ ಚಿತ್ರ ಪೋಸ್ಟ್‌

-ಪಶ್ಚಿಮ ಏಷ್ಯಾದಲ್ಲಿ ಕ್ಷಿಪಣಿ ವಿರೋಧಿ ವ್ಯವಸ್ಥೆ ನಿಯೋಜನೆ

ವಾಷಿಂಗ್ಟನ್: ‘ನಮ್ಮ ದೊಡ್ಡ ಪಡೆಗಳು ಇರಾನ್‌ ಕಡೆ ಹೋಗುತ್ತಿವೆ. ಇರಾನ್‌ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಇರಾನ್‌ಗೆ ಮತ್ತೆ ಎಚ್ಚರಿಕೆ ಒಡ್ಡಿದ್ದಾರೆ. ಇದೇ ವೇಳೆ, ‘ಬಹುಶಃ ನಾವು ಇವುಗಳನ್ನು ಬಳಸಬೇಕಾಗುವುದಿಲ್ಲ’ ಎಂದೂ ಹೇಳುವ ಮೂಲಕ ಪರೋಕ್ಷವಾಗಿ ಇರಾನ್‌ ಆಡಳಿತಕ್ಕೆ ಹೇಳಿದ ಮಾತು ಕೇಳುವಂತೆ ಸಂದೇಶ ರವಾನಿಸಿದ್ದಾರೆ.

ಸ್ವಿಜರ್ಲೆಂಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಇರಾನ್ ಅನ್ನು ಗಮನಿಸುತ್ತಿದ್ದೇವೆ. ಆ ದಿಕ್ಕಿನಲ್ಲಿ ನಮ್ಮ ಬಹಳಷ್ಟು ಹಡಗುಗಳು ಹೋಗುತ್ತಿವೆ. ಆ ಕಡೆ ನಮ್ಮ ದೊಡ್ಡ ಪಡೆಯೇ ಹೋಗುತ್ತಿದೆ. ಏನೂ ಆಗುವುದು ಬೇಡ ಎಂದು ನಾನು ಬಯಸುತ್ತೇನೆ. ಆದರೆ ನಾವು ಇರಾನ್ ಅನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದ್ದಾರೆ.

ಶೀಘ್ರ ದಾಳಿ ಸುಳಿವು:

ಮುಂಬರುವ ದಿನಗಳಲ್ಲಿ ಅರಬ್ಬೀ ಸಮುದ್ರ ಅಥವಾ ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ನೌಕಾ ದಾಳಿ ನಡೆಸಲಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಇಲಾಖೆ ತನ್ನ ಯುದ್ಧವಿಮಾನವೊಂದು ಅನಾಮಿಕ ಸ್ಥಳದಲ್ಲಿ ಇಳಿಯುತ್ತಿರುವ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಥಾಡ್‌ ಮತ್ತು ಪೇಟ್ರಿಯಾಟ್‌ನಂತಹ ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನೂ ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕ ನಿಯೋಜಿಸುತ್ತಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಇವು ಶೀಘ್ರದಲ್ಲೇ ಇರಾನ್‌ ಮೇಲೆ ಅಮೆರಿಕ ದಾಳಿ ಮಾಡುವ ಸೂಚನೆ ನೀಡಿವೆ.