ಅಮೆರಿಕದಲ್ಲಿ ಭಾರತೀಯ ಟ್ರಕ್ ಚಾಲಕನ ಅಪಘಾತದ ನಂತರ, ವಿದೇಶಿ ಟ್ರಕ್ ಚಾಲಕರಿಗೆ ವೀಸಾ ನಿಷೇಧ ಹೇರಲಾಗಿದೆ. ಈ ಘಟನೆ ರಾಜಕೀಯ ಮೇಲಾಟಕ್ಕೂ ಕಾರಣವಾಗಿದ್ದು, ಟ್ರಂಪ್ ಆಡಳಿತ ಮತ್ತು ಕ್ಯಾಲಿಫೋರ್ನಿಯಾ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ.

ಅಮೆರಿಕಾದಲ್ಲಿ ಭಾರತೀಯ ಟ್ರಕ್ ಚಾಲಕ ಚಾಲನೆ ಮಾಡುತ್ತಿದ್ದ ಟ್ರಕ್ಕೊಂದು ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ ನಂತರ ಅಮೆರಿಕಾ ವಿದೇಶಿ ಟ್ರಕ್ ಚಾಲಕರಿಗೆ ವೀಸಾ ನೀಡುವುದನ್ನು ತಡೆ ಹಿಡಿದಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೆಲೆಯಲ್ಲಿ ನಡೆದ ಮಾರಕ ಅಪಘಾತದ ಘಟನೆ ವರದಿಯಾದ ಕೂಡಲೇ ಅಮೆರಿಕಾ ತಕ್ಷಣದಿಂದ ಜಾರಿಗೆ ಬರುವಂತೆ ವಿದೇಶಿ ಟ್ರಕ್ ಚಾಲಕರಿಗೆ ವೀಸಾ ನೀಡುವುದನ್ನು ತಡೆ ಹಿಡಿದಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನಾವು ವಾಣಿಜ್ಯ ಟ್ರಕ್ ಚಾಲಕರಿಗೆ ಕಾರ್ಮಿಕರ ವೀಸಾಗಳ ಎಲ್ಲಾ ವಿತರಣೆಯನ್ನು ತಡೆ ಹಿಡಿದಿದ್ದೇವೆ ಎಂದು ರೂಬಿಯೊ ಎಕ್ಸ್‌ನಲ್ಲಿ ಬರೆದಿದ್ದಾರೆ.

ಮೂವರ ಸಾವಿಗೆ ಕಾರಣವಾದ ಭಾರತೀಯ ಚಾಲಕ:

ಅಮೆರಿಕದ ರಸ್ತೆಗಳಲ್ಲಿ ದೊಡ್ಡ ಟ್ರ್ಯಾಕ್ಟರ್ ಟ್ರೇಲರ್ ಟ್ರಕ್‌ಗಳನ್ನು ನಿರ್ವಹಿಸುವ ವಿದೇಶಿ ಚಾಲಕರ ಸಂಖ್ಯೆ ಹೆಚ್ಚುತ್ತಿದೆ. ಇದು ಅಮೆರಿಕನ್ನರ ಜೀವಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಮತ್ತು ಅಮೆರಿಕನ್ ಮೂಲದ ಟ್ರಕ್ ಚಾಲಕರ ಉದ್ಯೋಗವನ್ನು ಕಸಿಯುತ್ತಿದೆ ಎಂದು ಅವರು ಬರೆದಿದ್ದಾರೆ. ಫ್ಲೋರಿಡಾದ ಹೆದ್ದಾರಿಯಲ್ಲಿ ಭಾರತೀಯ ಟ್ರಕ್ ಚಾಲಕನೋರ್ವ ಅಕ್ರಮವಾಗಿ ಯು-ಟರ್ನ್ ಮಾಡಿದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರುಬಿಯೊ ಈ ಕ್ರಮ ಕೈಗೊಂಡಿದ್ದಾರೆ. ಫೆಡರಲ್ ಅಧಿಕಾರಿಗಳ ಪ್ರಕಾರ, ಅಪಘಾತ್ಕೆ ಕಾರಣನಾದ ಭಾತೀಯ ಮೂಲದ ಹರ್ಜಿಂದರ್ ಸಿಂಗ್, ಮೆಕ್ಸಿಕೋದಿಂದ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾನೆ ಮತ್ತು ಅಪಘಾತದ ನಂತರ ನಡೆಸಿದ ಇಂಗ್ಲಿಷ್ ಪರೀಕ್ಷೆಯಲ್ಲಿ ಆತ ಅನುತ್ತೀರ್ಣನಾಗಿದ್ದಾನೆ.

ಅಮೆರಿಕಾದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಯ್ತು ಈ ಅಪಘಾತ

ಈ ಪ್ರಕರಣವು ವ್ಯಾಪಕವಾಗಿ ಮಾಧ್ಯಮಗಳ ಗಮನ ಸೆಳೆದಿತ್ತು, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲಿರುವ ಫ್ಲೋರಿಡಾದ ಅಧಿಕಾರಿಗಳು ಈ ವಿಷಯವನ್ನು ಪ್ರಮುಖ ವಿಚಾರವಾಗಿ ಧ್ವನಿ ಎತ್ತಿದ್ದಾರೆ ಅಲ್ಲದೇ ಗುರುವಾರ ವಲಸೆ ಏಜೆಂಟ್‌ಗಳ ಜೊತೆಗೆ ಈ ಚಾಲಕ ಹರ್ಜೀಂದರ್ ಸಿಂಗ್‌ನನ್ನು ವೈಯಕ್ತಿಕವಾಗಿ ಹಸ್ತಾಂತರಿಸಲು ಲೆಫ್ಟಿನೆಂಟ್ ಗವರ್ನರ್ ಕ್ಯಾಲಿಫೋರ್ನಿಯಾಗೆ ಹೋಗಿದ್ದಾರೆ. ಚಾಲಕ ಹರ್ಜೀಂದರ್‌ ಸಿಂಗ್ ತಮ್ಮ ವಾಣಿಜ್ಯ ಪರವಾನಗಿಯನ್ನು ಪಡೆದು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷವು ನಡೆಸುತ್ತಿರುವ ಮತ್ತು ಟ್ರಂಪ್ ಅವರ ವಲಸೆ ದಮನ ಕ್ರಮಗಳನ್ನು ವಿರೋಧಿಸುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರಿಂದ ಈ ಅಪಘಾತ ಪ್ರಕರಣವೂ ಈಗ ಅಮೆರಿಕಾದಲ್ಲಿ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ.

ವಿದೇಶಿ ಚಾಲಕರ ಗುರಿಯಾಗಿಸಿಕೊಂಡ ರಿಪಬ್ಲಿಕನ್ ಪಕ್ಷ

ಕ್ಯಾಲಿಫೋರ್ನಿಯಾದಲ್ಲಿ ಹರ್ಜೀಂದರ್‌ ಸಿಂಗ್‌ಗೆ ಚಾಲನಾ ಪರವಾನಗಿ ಸಿಕ್ಕಿದ್ದರಿಂದ ಅಲ್ಲಿನ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರ ಮೇಲೆ ಟ್ರಂಪ್ ಆಡಳಿತವೂ ಪ್ರಕರಣದ ಆರೋಪ ಹೊರಿಸಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗವರ್ನರ್ ನೂಸಮ್ ಅವರ ಕಚೇರಿ ಟ್ರಂಪ್ ನೇತೃತ್ವದ ಫೆಡರಲ್ ಸರ್ಕಾರ ಹರ್ಜೀಂದರ್‌ ಸಿಂಗ್ ಅವರಿಗೆ ಕೆಲಸದ ಪರವಾನಗಿ ನೀಡಿದೆ ಮತ್ತು ಕ್ಯಾಲಿಫೋರ್ನಿಯಾ ಅವರನ್ನು ಹಸ್ತಾಂತರಿಸುವಲ್ಲಿ ಸಹಕರಿಸಿದೆ ಎಂದು ಪ್ರತಿಕ್ರಿಯಿಸಿದೆ. ಅಪಘಾತಕ್ಕೂ ಮುಂಚೆಯೇ, ರಿಪಬ್ಲಿಕನ್ ಶಾಸಕರು ವಿದೇಶಿ ಟ್ರಕ್ ಚಾಲಕರನ್ನು ಗುರಿಯಾಗಿಸಿಕೊಂಡಿದ್ದು, ವಲಸಿಗರು ಭಾಗಿಯಾದ ಅಪಘಾತಗಳ ಬಗ್ಗೆ ಸಾಕ್ಷಿಗಳನ್ನು ಒದಗಿಸದೆಯೇ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಸೂಚಿಸುತ್ತಿದ್ದಾರೆ.

ಜೂನ್‌ನಲ್ಲಿ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ, ಟ್ರಕ್ ಚಾಲಕರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ನಿರ್ದೇಶನ ನೀಡಿದರು. ಅಮೆರಿಕಾದಲ್ಲಿ ಟ್ರಕ್ ಚಾಲಕರು ವಾಣಿಜ್ಯ ಪರವಾನಗಿಗಾಗಿ ಒಂದು ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ರಸ್ತೆ ಚಿಹ್ನೆಗಳಂತಹ ಮೂಲಭೂತ ವಿಷಯಗಳ ಕುರಿತು ಅವರು ಇಂಗ್ಲಿಷ್‌ನಲ್ಲಿ ಪ್ರವೀಣರಾಗಿದ್ದಾರೆಯೇ ಎಂಬ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ.

ಆದರೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೀನ್ ಡಫಿ ಅವರ 2016 ರ ಮಾರ್ಗದರ್ಶನವನ್ನು ರದ್ದುಗೊಳಿಸಿದ್ದರು, ಭಾಷಾ ಕೊರತೆಯಿಂದಾಗಿ ಟ್ರಕ್ ಚಾಲಕರನ್ನು ಕೆಲಸದಿಂದ ತೆಗೆದುಹಾಕಬೇಡಿ ಎಂದು ಅವರು ಅಧಿಕಾರಿಗಳಿಗೆ ಹೇಳಿದರು. ಆದರೆ ಫೆಡರಲ್ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಟ್ರಕ್ ಚಾಲಕರ ಬೇಡಿಕೆಯಿಂದಾಗಿ 2000 ಮತ್ತು 2021 ರ ನಡುವೆ ವಿದೇಶಿ ಮೂಲದ ಟ್ರಕ್ ಚಾಲಕರ ಸಂಖ್ಯೆ ದ್ವಿಗುಣಗೊಂಡಿದ್ದು, 720,000 ಕ್ಕೆ ತಲುಪಿದೆ. ವಿದೇಶದಲ್ಲಿ ಜನಿಸಿದ ಚಾಲಕರು ಈಗ ಉದ್ಯಮದ ಶೇಕಡಾ 18 ರಷ್ಟಿದ್ದಾರೆ. ವಿದೇಶಿ ಮೂಲದ ಚಾಲಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಲ್ಯಾಟಿನ್ ಅಮೆರಿಕದಿಂದ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪೂರ್ವ ಯುರೋಪಿಯನ್ ರಾಷ್ಟ್ರಗಳಿಂದ, ವಿಶೇಷವಾಗಿ ಉಕ್ರೇನ್‌ನಿಂದ ಗಣನೀಯ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಕೈಗಾರಿಕಾ ಗುಂಪುಗಳು ತಿಳಿಸಿವೆ.