ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಈಜಿಪ್ಟ್ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ಮೂಲಕ ಮೋದಿ 13 ಅಂತಾರಾಷ್ಟ್ರೀಯ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾದರೆ ಮೋದಿ ಮುಕುಟ ಸೇರಿದ 13 ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿವರ ಇಲ್ಲಿದೆ.

ನವದೆಹಲಿ(ಜೂ.25): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಈಜಿಪ್ಟ್ ಪ್ರವಾಸ ಇಂದು ಕೊನೆಗಳೊಳ್ಳಲಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ ಮಾಡಿದ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಪ್ರಧಾನಿ ಮೋದಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ಲಾ ಫತಾಹ್ ಅಲ್ ಸಿಸಿ, ತಮ್ಮ ದೇಶದ ಅತ್ಯುನ್ನತ ನಾಗರೀಕ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇದು ಮೋದಿ ಸ್ವೀಕರಿಸಿದ 13ನೇ ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾಗಿದೆ. ಸೌದಿ ಅರೇಬಿಯಾ, ಅಮರಿಕ ಸೇರಿದಂತೆ ಹಲವು ರಾಷ್ಟ್ರಗಳು ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರೀಕರ ಪ್ರಶಸ್ತಿ ನೀಡಿ ಗೌರವಿಸಿದೆ.

2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇದೀಗ 9 ವರ್ಷದಲ್ಲಿ ಮೋದಿ 13 ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. 

ಈಜಿಪ್ಟ್‌ ಅತ್ಯುನ್ನತ ರಾಜ್ಯ ಗೌರವ 'ಆರ್ಡರ್ ಆಫ್ ದಿ ನೈಲ್' ಸ್ವೀಕರಿಸಿದ ಮೋದಿ: ಐತಿಹಾಸಿಕ ಮಸೀದಿಗೆ ಭೇಟಿ

ಇತ್ತೀಚೆಗೆ ಪ್ರಧಾನಿ ಮೋದಿ ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪೆಸಿಫಿಕ್ ದ್ವೀಪ ರಾಷ್ಟ್ರಗ ಏಕತೆ ಹಾಗೂ ಜಾಗತಿಕವಾಗಿ ದಕ್ಷಿಣ ದ್ವೀಪ ರಾಷ್ಟ್ರಗಳ ಒಕ್ಕೂಟ ಮುನ್ನಡೆಸಿದ ಕಾರಣಕ್ಕೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗುಹು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದು ಪಪುವಾ ನ್ಯೂಗಿನಿಯಾ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ. 2023ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

2023ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿಯ ವಿಶ್ವನಾಯಕತ್ವವನ್ನು ಗುರುತಿಸಿ ಫಿಜಿ ದೇಶ ತಮ್ಮ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ಫಿಚಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಪುಪುವಾ ನ್ಯೂಗಿನಿಯಾ ದೇಶ ಭೇಟಿ ವೇಳೆ ಪಲೌವು ದೇಶ ಎಬಾಕಲ್ ಅವಾರ್ಡ್ ಬೈ ರಿಪಬ್ಲಿಕ್ ಆಫ್ ಪಲೌವು ಪ್ರಶಸ್ತಿ ನೀಡಿ ಗೌರವಿಸಿತ್ತು.

2021ರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್ ಪ್ರಧಾನಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದು ಭೂತನ್ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ.

ಅಮೆರಿಕ 2020ರಲ್ಲಿ ಲೀಜನ್ ಆಫ್ ಮೆರಿಟ್ ಪ್ರಶಸ್ತಿ ನೀಡಿ ಗೌರವಿಸಿದೆ.ಇದು ಅತ್ಯುತ್ತಮ ಸೇವೆ, ಸಾಧನೆ ಹಾಗೂ ಅಸಾಧಾರಣ ಕಾರ್ಯಕ್ಷಮತೆಗೆ ನೀಡುವ ಯುನೈಟೆಡ್ ಸ್ಟೇಟ್ಸ್ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ.

PM Modi US Visit: ಭಾರತದ ಪ್ರಧಾನಿಗೆ 'ನಮೋ' ಎಂದ ಅಮೆರಿಕದ ರಾಜಕಾರಣಿಗಳು

2019ರಲ್ಲಿ ಪ್ರಧಾನಿ ಮೋದಿ ಗಲ್ಫ್ ದೇಶ ಬಹ್ರೇನ್ ಉನ್ನತ ಗೌರವ ನೀಡಿತು. ಬಹ್ರೇನ್‌ನ ಕಿಂಗ್ ಹಮದ್ ಆರ್ಡರ್ ಆಫ್ ದಿ ರೈನೈಸಾನ್ಸ್ ಪ್ರಶಸ್ತಿ ನೀಡಿ ಗೌರವಿಸಿತ್ತು.

2019ರಲ್ಲಿ ಮಾಲ್ದೀವ್ಸ್ ಪ್ರಧಾನಿ ಮೋದಿಗೆ ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ ರೂಲ್ ಆಫ್ ನಿಶಾನ್ ಇಝುದ್ದೀನ್ ಪ್ರಶಸ್ತಿ ನೀಡಿ ಗೌರವಿಸಿದೆ.

2019ರಲ್ಲಿ ರಷ್ಯಾ ಆರ್ಡರ್ ಆಫ್ ಸೇಂಟ್ ಆ್ಯಂಡ್ರೂ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿ ಪ್ರಧಾನಿ ಮೋದಿಗೆ ಗೌರವ ಸೂಚಿಸಿತು.

2019ರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ನೀಡಿದೆ.

2018ರಲ್ಲಿ ಪ್ಯಾಲೆಸ್ಟೈನ್ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಪ್ ಪ್ಯಾಲಸ್ಟೈನ್ ಅವಾರ್ಡ್ ನೀಡಿ ಗೌರವಿಸಿತ್ತು.

2016ರಲ್ಲಿಆಫ್ಘಾನಿಸ್ತಾನದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿರುವ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ ನೀಡಿ ಗೌರವಿಸಿದೆ. 

2016ರಲ್ಲಿ ಸೌದಿ ಅರೆಬಿಯಾದ ಅತ್ಯುನ್ನತ ಗೌರವ ಕೂಡ ಪ್ರಧಾನಿ ಮೋದಿಗೆ ಸಂದಿದೆ. ಆರ್ಡರ್ ಆಫ್ ಅಬ್ದಲಜೀಜ್ ಅಲ್ ಸೌದ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ಸೌದಿ ಅರೆರಿಯಾ ಮುಸ್ಲಿಮೇತರ ಗಣ್ಯರಿಗೆ ನೀಡುವ ಪ್ರಶಸ್ತಿಯಾಗಿದೆ.