* ದಾಖಲೆ ಸೋರಿಕೆ ಭೀತಿ​ಯಿಂದ ಈ ಕ್ರಮ* ಅಫ್ಘಾನ್‌ನಲ್ಲಿದ್ದ ಅಮೆರಿಕ ಗುಪ್ತಚರ ಸಂಸ್ಥೆ ಕಚೇರಿ ನೆಲ​ಸ​ಮ

ಕಾಬೂಲ್‌(ಆ.29): ಅರಾಜಕತೆ ಸೃಷ್ಟಿಯಾಗಿರುವ ಅಷ್ಘಾನಿಸ್ತಾನವನ್ನು ಆ.31ರ ಒಳಗಾಗಿ ಅಮೆರಿಕ ಸೈನ್ಯವು ತೊರೆಯಲಿದೆ. ಈ ಹಿನ್ನೆಲೆಯಲ್ಲಿ ಅಷ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿದ್ದ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ(ಸಿಐಎ)ಯ ನೆಲೆಯನ್ನು ಅಮೆರಿಕ ಪಡೆಗಳು ಧ್ವಂಸ ಮಾಡಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಮೆರಿಕ ಮತ್ತು ಅಷ್ಘಾನಿಸ್ತಾನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಅಮೆರಿಕದ ಯುದ್ಧೋಪಕರಣ ಮತ್ತು ಶಸ್ತ್ರಾಸ್ತ್ರಗಳು ತಾಲಿಬಾನಿಗಳ ಕೈ ವಶವಾಗಬಾರದು ಎಂಬ ಕಾರಣಕ್ಕಾಗಿ ಕಾಬೂಲ್‌ ಹೊರವಲಯದಲ್ಲಿದ್ದ ಗುಪ್ತಚರದ ಈ ನೆಲೆಯನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ಸಿಐಎ ನಿರಾಕರಿಸಿದೆ.

ಅಮೆರಿಕದ ಈಗಲ್‌ ನೆಲೆ ಎಂಬ ಇದೇ ನೆಲೆಯಲ್ಲಿ ಅಷ್ಘಾನಿಸ್ತಾನದ ಭಯೋತ್ಪಾದಕ ನಿಗ್ರಹ ಪಡೆಗಳು ಮತ್ತು ಗುಪ್ತಚರ ಏಜೆನ್ಸಿಗಳಿಗೆ ತರಬೇತಿ ನೀಡಲಾಗಿತ್ತು.