ವಾಷಿಂಗ್ಟನ್(ನ.05): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಗೆ ಭಾರೀ ಆಘಾತ ತಗುಲುವ ಸಾಧ್ಯತೆ ಕಂಡು ಬಂದಿದ್ದು, ಫಲಿತಾಂಶದಲ್ಲಿ ಬೈಡೆನ್ ಮ್ಯಾಜಿಕ್‌ ನಂಬರ್‌ ಸಮೀಪಿಸುತ್ತಿದ್ದಾರೆ. ಇನ್ನು ಈ ಚುನಾವಣೆಯಲ್ಲಿ ಮೋದಿ ಜೊತೆ ಪ್ರಚಾರ ನಡೆಸಿದ್ದ ಟ್ರಂಪ್ ಭಾರತೀಯ ಮೂಲದ ಮತದಾರರನ್ನೂ ಓಲೈಸಲು ವಿಫಲರಾಗಿದ್ದಾರೆ. ಹೌಡಿ ಮೋದಿ ಹಾಗೂ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿಯನ್ನುದ್ದೇಶಿಸಿ ಮಾತನಾಡಿದ ಬಳಿಕ ಭಾರತೀಯ ಸಮುದಾಯದ ಮತ ತಮ್ಮ ಪರ ಬರಬಹುದೆಂದು ನಂಬಿದ್ದರು, ಆದರೆ ಹೀಗಾಗಲಿಲ್ಲ.

ಸ್ವಿಂಗ್ ಸ್ಟೇಟ್‌ನಲ್ಲಿ ಏಷ್ಯಾ ಮೂಲದ ಅಮೆರಿಕನ್ ನಾಗರಿಕರು ಮಹತ್ವದ ಪಾತ್ರ ವಹಿಸುತ್ತಾರೆಂಬುವುದು ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಆದರೀಗ ಏಷ್ಯನ್ ಅಮೆರಿಕನ್ ಮತದಾರರ ಸಮೀಕ್ಷೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ನಾಗರಿಕರ ಹೆಚ್ಚಿನ ಮತಗಳು ಬೈಡೆನ್‌ಗೆ ಸಿಕ್ಕಿವೆ ಎಂದು ತಿಳಿದು ಬಂದಿದೆ.ಇನ್ನು ವಿಯೆಟ್ನಾಂ ಮೂಲದ ಅಮೆರಿಕನ್ ನಾಗರಿಕರು ಚೀನಾ ವಿರುದ್ಧ ಸಿಡಿದೆದ್ದಿದ್ದ ಡೊನಾಲ್ಡ್ ಟ್ರಂಪ್‌ ಬೆಂಬಲಿಸಿದ್ದಾರೆ. ಇವೆಲ್ಲಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಚೀನಾ ಮೂಲದ ಅಮೆರಿಕನ್ ನಾಗರಿಕರ ಅತೀ ಹೆಚ್ಚು ಮತ ಟ್ರಂಪ್ ಪರವಿದೆ. 

ಟ್ರಂಪ್‌ ಸಮರ್ಥಿಸಿದ ಚೀನಾ ಮೂಲದ ಅಮೆರಿಕನ್ನರು

ಚೀನಾ ನಾಗರಿಕರು ಚೀನಾದ ಕ್ರೂರ ಕಮ್ಯುನಿಸ್ಟ್ ಶಾಸನದ ವಿರುದ್ಧ ಧ್ವನಿ ಎತ್ತಿದ್ದ ಡೊನಾಲ್ಡ್ ಟ್ರಂಪ್‌ರನ್ನು ಸಮರ್ಥಿಸಿದ್ದಾರೆ. ಇನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯೊಂದಿಗೆ ಅನೇಕ ರಾಜ್ಯಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಐವರು ಮಹಿಳೆಯರು ಸೇರಿ ಹನ್ನೆರಡಕ್ಕೂ ಅಧಿಕ ಭಾರತೀಯ ಮೂಲದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.