ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಕ್ರಮವನ್ನು ಅಮೆರಿಕಾ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಟೀಕಿಸಿದ್ದಾರೆ. ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಕೊನೆಗೆ ಅಮೆರಿಕಕ್ಕೆ ಕ್ಷಮೆಯಾಚಿಸಬೇಕಾಗುತ್ತದೆ ಎಂದಿದ್ದಾರೆ.
ನವದೆಹಲಿ (ಸೆ.5): ರಷ್ಯಾ ಹಾಗೂ ಚೀನಾದ ಎದುರು ನಾವು ಭಾರತವನ್ನು ಕಳೆದುಕೊಂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲಿಯೇ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಉದ್ಧಟತನದ ಮಾತನಾಡಿದ್ದು, ಭಾರತವು ಕೊನೆಗೆ ಅಮೆರಿಕಕ್ಕೆ ಕ್ಷಮೆಯಾಚನೆ ಮಾಡುವುದು ಖಂಡಿತ ಎಂದು ಹೇಳಿದ್ದಾರೆ. ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ, ಚೀನಾ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಇಂಧನವನ್ನು ಖರೀದಿಸುತ್ತಿರುವಾಗ, ಭಾರತವನ್ನು ಪ್ರತ್ಯೇಕಿಸಲಾಗುತ್ತಿದೆ ಎಂಬ ಟ್ರಂಪ್ ಅವರ ಹಿಂದಿನ ಹೇಳಿಕೆಗೆ ಅವರ ಪ್ರತಿಕ್ರಿಯೆ ಕೇಳಲಾಗಿತ್ತು.
ಭಾರತ ಮಾಡುತ್ತಿರುವುದು ತಪ್ಪು
ಇದಕ್ಕೆ ಉತ್ತರಿಸಿದ ಲುಟ್ನಿಕ್ "ಉಕ್ರೇನ್-ರಷ್ಯಾ ಸಂಘರ್ಷದ ಮೊದಲು, ಭಾರತೀಯರು ರಷ್ಯಾದಿಂದ 2% ಕ್ಕಿಂತ ಕಡಿಮೆ ತೈಲವನ್ನು ಖರೀದಿ ಮಾಡ್ತಿದ್ದರು ಮತ್ತು ಈಗ ಅವರು ತಮ್ಮ ತೈಲದ 40% ಅನ್ನು ರಷ್ಯಾದಿಂದ ಖರೀದಿಸುತ್ತಿದ್ದಾರೆ. ಭಾರತ ಮಾಡುತ್ತಿರೋದು ಏನೆಂದರೆ, ರಷ್ಯಾದ ನಿಷೇಧಿತ ತೈಲವನ್ನು ಅಗ್ಗದ ಬೆಲೆಎ ಖರೀದಿ ಮಾಡೋದು. ರಷ್ಯನ್ನರು ತಮ್ಮ ತೈಲವನ್ನು ಮಾರಾಟ ಮಾಡಲು ಜನರನ್ನು ಹುಡುಕುತ್ತಿದ್ದಾರೆ. ಅವರಿಗೆ ಭಾರತ ಸಿಕ್ಕಿದೆ ಅಷ್ಟೇ. ಅದರೊಂದಿಗೆ ಅಗ್ಗದ ತೈಲವನ್ನು ಖರೀದಿಸಿ ಹಣ ಗಳಿಸೋಣ ಅನ್ನೋದಷ್ಟೇ ಇದರ ಉದ್ದೇಶ.ಆದರೆ, ನಿಮಗೆ ಗೊತ್ತಿಲ್ಲದ ವಿಚಾರ ಏನೆಂದರೆ, ಇದು ತಪ್ಪು ಎನ್ನುವುದು' ಎಂದು ಹೇಳಿದ್ದಾರೆ.
ಇದು ಹಾಸ್ಯಾಸ್ಪದ ವರ್ತನೆ, ಭಾರತ ತಾನು ಯಾರ ಕಡೆ ಇದ್ದೇವೆ ಅನ್ನೋದನ್ನು ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.
ಅಮೆರಿಕ ವಿಶ್ವದ ದೊಡ್ಡ ಗ್ರಾಹಕ ದೇಶ
ಇದೇ ವೇಳೆ ವಿಶ್ವದ ಪ್ರಮುಖ ಗ್ರಾಹಕನಾಗಿ ಅಮೆರಿಕದ ಪಾತ್ರವನ್ನು ಲುಟ್ನಿಕ್ ಒತ್ತಿ ಹೇಳಿದರು: "ತಮಾಷೆಯೆಂದರೆ... ಚೀನಿಯರು ನಮಗೆ ಮಾರಾಟ ಮಾಡುತ್ತಾರೆ. ಭಾರತೀಯರು ಕೂಡ ನಮಗೆ ಮಾರಾಟ ಮಾಡುತ್ತಾರೆ. ಅವರು ಪರಸ್ಪರ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ನಾವು ವಿಶ್ವದ ಗ್ರಾಹಕರು. ನಮ್ಮ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯು ವಿಶ್ವದ ಗ್ರಾಹಕ ಎಂಬುದನ್ನು ಜನರು ನೆನಪಿನಲ್ಲಿಡಬೇಕು' ಎಂದಿದ್ದಾರೆ.
ಲುಟ್ನಿಕ್ ಪ್ರಕಾರ, "ಗ್ರಾಹಕರು ಯಾವಾಗಲೂ ಸರಿ ಎಂದು ನಮಗೆಲ್ಲರಿಗೂ ತಿಳಿದಿರುವುದರಿಂದ" ಭಾರತವು ಅಂತಿಮವಾಗಿ ಯುಎಸ್ ಮಾರುಕಟ್ಟೆಗೆ ಮರಳಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟ್ರಂಪ್ ಸುಂಕ ಹೋರಾಟ
ಇದರ ನಡುವೆ, ಟ್ರಂಪ್ ಆಡಳಿತವು ಸುಂಕಗಳ ಮೇಲಿನ ಹೋರಾಟವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿದೆ. ಬುಧವಾರ, ಸೆಪ್ಟೆಂಬರ್ 3 ರಂದು, ಫೆಡರಲ್ ಕಾನೂನಿನ ಅಡಿಯಲ್ಲಿ ವ್ಯಾಪಕ ಆಮದು ತೆರಿಗೆಗಳನ್ನು ವಿಧಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂದು ತ್ವರಿತವಾಗಿ ತೀರ್ಪು ನೀಡುವಂತೆ ಅದು ನ್ಯಾಯಮೂರ್ತಿಗಳನ್ನು ಕೇಳಿದೆ.
ಈ ಪ್ರಕರಣದಲ್ಲಿ ಅಮೆರಿಕ ತನ್ನ ನಿಯಂತ್ರಣ ಕಳೆದುಕೊಂಡಿದೆಯೇ ಎಂದು ಕೇಳಿದಾಗ, ವಿಶೇಷವಾಗಿ ಅಮೆರಿಕದ ಕಂಪನಿಗಳು ಚೀನಾದಿಂದ ಭಾರತಕ್ಕೆ ಉತ್ಪಾದನೆಯನ್ನು ಸ್ಥಳಾಂತರಿಸುತ್ತಿರುವುದರಿಂದ, ಲುಟ್ನಿಕ್ ಪ್ರತಿಕ್ರಿಯೆ ನೀಡಿದ್ದು "ಭಿನ್ನಾಭಿಪ್ರಾಯ 7 ರಿಂದ 4 ರಷ್ಟಿತ್ತು ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿ, ಮಾಜಿ ಮುಖ್ಯ ನ್ಯಾಯಮೂರ್ತಿ ಮತ್ತು ಮುಂಬರುವ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷ ಟ್ರಂಪ್ ಅವರ ಪರವಾಗಿ ನಿಂತರು. ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ನಿಲ್ಲುವುದನ್ನು ನೀವು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ನಾವು ನಿಯಂತ್ರಣ ಕಳೆದುಕೊಂಡಿದ್ದೇವೆ ಎಂದು ಭಾವಿಸುವುದಿಲ್ಲ' ಎಂದಿದ್ದಾರೆ.
