ವಾಷಿಂಗ್ಟನ್(ಅ.25)‌: ಅಧ್ಯಕ್ಷೀಯ ಚುನಾವಣೆಗೆ ಕೇವಲ 10 ದಿನ ಬಾಕಿಯಿರುವಾಗ ಅಮೆರಿಕದಲ್ಲಿ ಅತಿಹೆಚ್ಚು ಏಕದಿನದ ಕೊರೋನಾ ಸೋಂಕು ವರದಿಯಾಗಿದೆ. ಶುಕ್ರವಾರ ಒಂದೇ ದಿನ ಅಮೆರಿಕದಲ್ಲಿ 84,218 ಜನರಿಗೆ ಕೊರೋನಾ ತಗಲಿದ್ದು, ಇದು ಅಮೆರಿಕದಲ್ಲಿ ಇದುವರೆಗೆ ವರದಿಯಾದ ಏಕದಿನದ ಅತ್ಯಂತ ಹೆಚ್ಚು ಸೋಂಕಾಗಿದೆ.

ಓಹಿಯೋ, ಮಿಶಿಗನ್‌, ನಾತ್‌ರ್‍ ಕೆರೋಲಿನಾ, ಪೆನ್ಸಿಲ್ವೇನಿಯಾ ಹಾಗೂ ವಿಸ್ಕಾನ್ಸಿನ್‌ನಲ್ಲಿ ಹೆಚ್ಚೆಚ್ಚು ಸೋಂಕು ಹರಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ದಿನಕ್ಕೆ ಸರಾಸರಿ 60,000 ಸೋಂಕು ವರದಿಯಾಗುತ್ತಿತ್ತು. ಗುರುವಾರ ಇದು 76 ಸಾವಿರಕ್ಕೆ ಏರಿಕೆಯಾಗಿತ್ತು. ಶುಕ್ರವಾರ ದಿಢೀರ್‌ 84 ಸಾವಿರಕ್ಕೆ ಏರಿಕೆಯಾಗಿದೆ. ಜುಲೈ ಮಧ್ಯದಲ್ಲಿ ದಿನಕ್ಕೆ 77 ಸಾವಿರದಷ್ಟುಏಕದಿನದ ಸೋಂಕು ವರದಿಯಾಗುತ್ತಿದ್ದಾಗ ನಿತ್ಯ ಸುಮಾರು 1200 ಜನರು ಸಾವನ್ನಪ್ಪುತ್ತಿದ್ದರು. ಈಗ ನಿತ್ಯ ಸುಮಾರು 800 ಜನರು ಸಾವನ್ನಪ್ಪುತ್ತಿದ್ದಾರೆ.

ಸೋಂಕು ಮತ್ತೆ ಹೆಚ್ಚಾಗಲು ತಜ್ಞರು ನಿಖರ ಕಾರಣ ಹೇಳದಿದ್ದರೂ ಚುನಾವಣೆಯ ಪ್ರಚಾರ, ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಮೊದಲಿನಂತೆ ಹೋಗಲು ಆರಂಭಿಸಿರುವುದು ಕಾರಣ ಎಂದು ಹೇಳಲಾಗುತ್ತಿದೆ. ಅಮೆರಿಕದಲ್ಲಿ ಜಗತ್ತಿನಲ್ಲೇ ಹೆಚ್ಚು, ಅಂದರೆ 85 ಲಕ್ಷ ಜನರಿಗೆ ಕೊರೋನಾ ತಗಲಿದೆ. ಇಲ್ಲಿಯವರೆಗೆ ಜಗತ್ತಿನಲ್ಲೇ ಹೆಚ್ಚು 2,24,000 ಸಾವು ಕೂಡ ಅಮೆರಿಕದಲ್ಲೇ ಸಂಭವಿಸಿದೆ.