ಇಸ್ರೇಲ್-ಹಮಾಸ್ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ನಿರ್ಣಯ, ಭಾರತ ಸೇರಿದಂತೆ 45 ದೇಶಗಳ ನೋ ವೋಟ್!
ಇಸ್ರೇಲ್ ಸತತ ಮೂರನೇ ದಿನ ಗಾಜಾ ಪಟ್ಟಿಯ ಒಳಗೆ ನುಗ್ಗಿ ದಾಳಿಗಳನ್ನು ನಡೆಸಿದೆ. ಇದರ ನಡುವೆ ವಿಶ್ವಸಂಸ್ಥೆ ಯುದ್ಧವನ್ನು ನಿಲ್ಲಿಸುವ ನಿರ್ಣಯ ಮಂಡಿಸಿದೆ. ಆದರೆ, ಭಾರತ ಸೇರಿದಂತೆ 45 ದೇಶಗಳು ಈ ನಿರ್ಣಯದ ಕುರಿತಾಗಿ ಯಾವುದೇ ಮತದಾನ ಮಾಡಿಲ್ಲ.
ನ್ಯೂಯಾರ್ಕ್ (ಅ.28): ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಶುಕ್ರವಾರ ಸತತ ಮೂರನೇ ದಿನ, ಇಸ್ರೇಲಿ ಸೇನೆ (ಐಡಿಎಫ್) ಗಾಜಾ ಪಟ್ಟಿಯನ್ನು ಟ್ಯಾಂಕ್‌ಗಳೊಂದಿಗೆ ಪ್ರವೇಶಿಸಿತು ಮತ್ತು ಹಮಾಸ್ ಸ್ಥಾನಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ, ಈ ಅವಧಿಯಲ್ಲಿ ಇಸ್ರೇಲಿ ಸೈನಿಕರು ಹಮಾಸ್‌ನ ಹಲವು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಪ್ಯಾಲಿಸ್ತೇನಿಯನ್ ಮಾಧ್ಯಮಗಳು ವರದಿ ಮಾಡಿದೆ. ಇಸ್ರೇಲ್ ಪಡೆಗಳು ಗಾಜಾದ ಬೀಟ್ ಹನೌನ್ ಮತ್ತು ಬುರಿಜ್ ಪ್ರದೇಶಗಳ ಮೇಲೆ ದಾಳಿ ನಡೆಸಿವೆ ಎಂದು ಹಮಾಸ್ ಹೇಳಿದೆ. ಗಾಜಾದಲ್ಲಿ ನಾನು ಭೂಸೇನಾ ದಾಳಿಯನ್ನು ಇನ್ನಷ್ಟು ಹೆಚ್ಚಳ ಮಾಡುತ್ತಿದ್ದೇವೆ ಎಂದು ಐಡಿಎಫ್ ತಿಳಿಸಿದೆ. ವೈಮಾನಿಕ ದಾಳಿಯ ಸಮಯದಲ್ಲಿಯೂ ಸಹ, ಹಮಾಸ್‌ನ ಭೂಗತ ನೆಲೆಗಳನ್ನು ನಿರ್ದಿಷ್ಟವಾಗಿ ಗುರಿ ಪಡಿಸಿ ದಾಳಿ ಮಾಡಲಾಗುತ್ತಿದೆ. ದಾಳಿಯಿಂದಾಗಿ, ಗಾಜಾ ಪ್ರದೇಶದಲ್ಲಿ ಸಂವಹನ ಅಸ್ತವ್ಯಸ್ತವಾಗಿದೆ ಮತ್ತು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು 23 ಲಕ್ಷ ಜನರು ಜಗತ್ತಿನ ಸಂಪರ್ಕದಿಂದ ಕಡಿತಗೊಂಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಕದನವಿರಾಮದ ಪ್ರಸ್ತಾಪ ಅಂಗೀಕಾರ: ಇದಕ್ಕೂ ಮುನ್ನ, ಶುಕ್ರವಾರ ರಾತ್ರಿ 2 ಗಂಟೆಗೆ (ಭಾರತೀಯ ಕಾಲಮಾನ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಪ್ರಸ್ತಾವನೆಯ ಪರವಾಗಿ 120 ಮತಗಳು ಚಲಾವಣೆಗೊಂಡರೆ, 14 ದೇಶಗಳು ವಿರೋಧವಾಗಿ ಮತ ಚಲಾಯಿಸಿದವು. ಭಾರತ ಸೇರಿದಂತೆ 45 ದೇಶಗಳು ಮತದಾನ ಮಾಡಿಲ್ಲ. ಅಮೆರಿಕ ಮತ್ತು ಇಸ್ರೇಲ್ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದವು. ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ, 'ಹಮಾಸ್‌ಗೆ ಇಂತಹ ದುಷ್ಕೃತ್ಯಗಳನ್ನು ಮಾಡಲು ನಾವು ಅವಕಾಶ ಮಾಡಿಕೊಟ್ಟು ಸುಮ್ಮನೆ ಕೂರುವುದಿಲ್ಲ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಇಂತಹ ದೌರ್ಜನ್ಯಗಳು ಎಂದಿಗೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಹಕ್ಕು ಇದೆ. ಹಮಾಸ್ ಸಂಪೂರ್ಣವಾಗಿ ನಾಶವಾದಾಗ ಮಾತ್ರ ಇದು ಸಂಭವಿಸುತ್ತದೆ ಎಂದು ಹೇಳಿದ್ದಾರೆ.
ಯುದ್ಧ ಪ್ರಾರಂಭವಾದ ನಂತರ, ನೆತನ್ಯಾಹು ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, ನಾವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಸಂಕಷ್ಟದ ಸಮಯದಲ್ಲಿ ಭಾರತದ ಜನತೆ ಇಸ್ರೇಲ್ ಜೊತೆಗಿದ್ದಾರೆ. ವಿದೇಶಾಂಗ ವ್ಯವಹಾರಗಳ ತಜ್ಞ ಮತ್ತು ಓಆರ್‌ಎಫ್ ಸಂಶೋಧಕ ಕಬೀರ್ ತನೇಜಾ ಪ್ರಕಾರ, ಕಳೆದ 10 ವರ್ಷಗಳಲ್ಲಿ ಭಾರತ ಸರ್ಕಾರದ ರಾಜತಾಂತ್ರಿಕತೆಯು ಭಯೋತ್ಪಾದನೆಯ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಆ ರಾಜತಾಂತ್ರಿಕತೆಯ ಭಾಗವಾಗಿದೆ. ಇಂದಿರಾ ಅಥವಾ ಇತರ ಸರ್ಕಾರಗಳ ಅವಧಿಯಲ್ಲಿ ಭಾರತವು ಪ್ಯಾಲೆಸ್ತೀನ್ ಬಗ್ಗೆ ಅದೇ ನಿಲುವನ್ನು ಹೊಂದಿದೆ ಎಂದು ತನೇಜಾ ಹೇಳಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಎರಡು ದೇಶಗಳ ಪರಿಹಾರವನ್ನು ಬೆಂಬಲಿಸುತ್ತದೆ. ಯುದ್ಧದ ನಡುವೆಯೂ, ಪ್ಯಾಲೆಸ್ಟೀನಿಯಾದವರಿಗೆ ಸಹಾಯ ಮಾಡಲು ಭಾರತವು ಅಗತ್ಯ ವಸ್ತುಗಳನ್ನು ಕಳುಹಿಸಿತು. ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ದೂರವಿರಲು ಇದೇ ಕಾರಣವಾಗಿದೆ.
ಇಸ್ರೇಲ್ ಭಾರಿ ದಾಳಿ ಮಾಡಿದ್ರೂ ಹಮಾಸ್ ಸುರಂಗ ಸೇಫ್: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!
ಈ ನಡುವೆ ಮಿಲಿಟರಿಯನ್ನು ಉಲ್ಲೇಖಿಸಿ, ಇಸ್ರೇಲಿ ಮಾಧ್ಯಮ ಸಿಎಎನ್ ಹಮಾಸ್ ಸೆರೆಯಲ್ಲಿ 200 ಕ್ಕೂ ಹೆಚ್ಚು ಒತ್ತೆಯಾಳುಗಳಿವೆ ಎಂದು ಹೇಳಿದೆ. ಇವರಲ್ಲಿ 30 ಮಕ್ಕಳು ಸೇರಿದ್ದಾರೆ. 20 ಜನರ ವಯಸ್ಸು 60 ವರ್ಷಕ್ಕಿಂತ ಹೆಚ್ಚು. ಅಲ್ ಜಜೀರಾ ಪ್ರಕಾರ, 12 ವರ್ಷದ ಮಗು ಕೂಡ ಸೆರೆಯಲ್ಲಿದೆ ಎನ್ನಲಾಗಿದೆ.
ಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್, ಮೊಬೈಲ್ ಸ್ತಬ್ಧ