*ಯುದ್ಧದ 16ನೇ ದಿನ ರಷ್ಯಾದಿಂದ ಭಾರಿ ದಾಳಿ: ಸಮರ ತೀವ್ರಗೊಳ್ಳುವ ಸಾಧ್ಯತೆ*ಕೀವ್ ನಗರದ ಸುತ್ತ ರಷ್ಯಾದ ಭಾರಿ ಸೇನೆ ಜಮಾವಣೆ: ಇನ್ನೂ 5 ಕಿ.ಮೀ. ಒಳಕ್ಕೆ
ಮರಿಯುಪೋಲ್/ಕೀವ್ (ಮಾ. 12): ಉಕ್ರೇನ್ ವಿರುದ್ಧದ ಯುದ್ಧದ 16ನೇ ದಿನವಾದ ಶುಕ್ರವಾರ ರಷ್ಯಾ ತನ್ನ ವರಸೆಯನ್ನು ಇನ್ನಷ್ಟುತೀವ್ರಗೊಳಿಸಿದ್ದು, ದಾಳಿಯ ವ್ಯಾಪ್ತಿಯನ್ನೂ ಇನ್ನಷ್ಟುಪ್ರದೇಶಗಳಿಗೆ ವಿಸ್ತರಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್‌ನ ಬಾಗಿಲಿಗೆ ಬಂದು ನಿಂತಿದ್ದು, ಕೀವ್ ವಶ ಸನ್ನಿಹಿತವಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಬಂದರು ನಗರಿ ಮರಿಯುಪೋಲ್ ಹಾಗೂ ಇತರ ನಗರಗಳ ಮೇಲೂ ಭಾರೀ ವಾಯುದಾಳಿ ನಡೆಸಿದೆ.
ರಷ್ಯಾ ಸೇನೆ ಉಕ್ರೇನಿ ವಾಯುನೆಲೆ ಮೇಲೆ ದಾಳಿ ನಡೆಸಿದ್ದು, ಒಬ್ಬ ಯೋಧನನ್ನು ಕೊಂದುಹಾಕಿದೆ. ಇದೇ ವೇಳೆ, ಇವಾನೋ ಫ್ರಾಂಕಿಸ್ವಿಕ್ ಎಂಬ ವಿಮಾನ ನಿಲ್ದಾಣದ ಸನಿಹ ವಾಯುದಾಳಿ ನಡೆದಿದ್ದು, ಜನರು ರಕ್ಷಣೆಗಾಗಿ ಬಂಕರ್ ಸೇರಿಕೊಂಡಿದ್ದಾರೆ. ಶುಕ್ರವಾರದ ಚಿತ್ರಣ ಗಮನಿಸಿದರೆ ಇಡೀ ಉಕ್ರೇನನ್ನು ರಷ್ಯಾ ತನ್ನ ವಶ ಮಾಡಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗಿದೆ.
ಆದರೆ ರಷ್ಯಾ ವಿರುದ್ಧ ಪಾಶ್ಚಾತ್ಯ ಹಾಗೂ ಇತರ ದೇಶಗಳ ಆಕ್ರೋಶ ಹೆಚ್ಚಿದ್ದು, ಅಮೆರಿಕ ಸೇರಿ ಹಲವು ದೇಶಗಳು ಇನ್ನಷ್ಟುನಿರ್ಬಂಧ ಹೇರಲು ತೀರ್ಮಾನಿಸಿವೆ. ರಷ್ಯಾಗೆ ನೀಡಿದ ‘ನೆಚ್ಚಿನ ದೇಶ’ ಸ್ಥಾನಮಾನವನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬುಧವಾರ ಹಾಗೂ ಗುರುವಾರ ಉಕ್ರೇನ್‌ನ 3 ಆಸ್ಪತ್ರೆಗಳ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ‘ಯುದ್ಧಾಪರಾಧ’ ಎಂದು ದೇಶಗಳು ಬಣ್ಣಿಸಿವೆ.
ಇದನ್ನೂ ಓದಿ:Russia Ukraine War: ರಷ್ಯಾ ದಾಳಿಗೆ ಖಾರ್ಕೀವ್ ನಗರವೇ ಧ್ವಂಸ: ಉಕ್ರೇನ್ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?
ಕೀವ್ ವಶ ಸನ್ನಿಹಿತ?: ರಾಜಧಾನಿ ಕೀವ್ ಅನ್ನು ಉಪಗ್ರಹ ಚಿತ್ರದಲ್ಲಿ ಗಮನಿಸಿದಾಗ ರಾಜಧಾನಿಯ ಸುತ್ತ ರಷ್ಯಾದ ಸೇನೆಯ ಭಾರಿ ಜಮಾವಣೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾ ಸೇನೆಯು ಕೀವ್ ಕಡೆಗೆ 5 ಕಿ.ಮೀ.ನಷ್ಟುಧಾವಿಸಿ ಬಂದಿದೆ. ಇದೇ ವೇಳೆ, ಉಕ್ರೇನ್‌ನ ಸೇನೆ ಸೇರಿಕೊಂಡಿರುವ ನಾಗರಿಕರು ಶಸ್ತ್ರ ಹಿಡಿದು ಕೀವ್ ರಕ್ಷಣೆಗೆ ಮುಂದಾಗಿದ್ದಾರೆ.
ಉಕ್ರೇನಿ ಪಡೆಗಳು ರಷ್ಯಾ ಪಡೆಗಳ ಮೇಲೆ ಪ್ರತಿದಾಳಿ ನಡೆಸಿವೆ ಎಂದು ವರದಿಯಾಗಿದ್ದರೂ ಖಚಿತಪಟ್ಟಿಲ್ಲ. ಹೀಗಾಗಿ ಸಮರ ಇನ್ನಷ್ಟುತೀವ್ರಗೊಳ್ಳುವ ಸೂಚನೆ ಲಭಿಸಿರುವ ಕಾರಣ ಯುದ್ಧಪೀಡಿತ ಊರುಗಳಲ್ಲಿ ಜನರ ತೆರವು ಕಾರಾರಯಚರಣೆಯನ್ನು ಉಕ್ರೇನ್ ತೀವ್ರಗೊಳಿಸಿದೆ.
ಶುಕ್ರವಾರ ರಷ್ಯಾ ಡಿ’ನಿಪ್ರೋ ಎಂಬ ಊರಿನ ಮೇಲೆ ದಾಳಿ ನಡೆಸಿದೆ. ಆದರೆ ಉಕ್ರೇನಿ ಸೇನೆಯು ಚೆರ್ನಿಹಿವ್ ನಗರವನ್ನು ರಷ್ಯಾದ ಹಿಡಿತದಿಂದ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಂಟೊನೋವ್ ಎಂಬ ನಗರದ ವಿಮಾನ ನಿಲ್ದಾಣದ ಬಳಿ ರಷ್ಯಾ ಸೇನೆಯ ಹೆಚ್ಚಿನ ಸಂಖ್ಯೆಯ ವಾಹನ ಜಮಾವಣೆಯಾಗಿವೆ. ಮಕ್ಸರ್ ಟೆಕ್ಲಾಲಜೀಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ಚಿತ್ರವೊಂದರಲ್ಲಿ, ರಷ್ಯಾ ಸೇನೆಯ ವಾಹನಗಳು ಉಕ್ರೇನ್‌ನ ಒಂದು ಭಾಗದಲ್ಲಿ 64 ಕಿ.ಮೀ.ನಷ್ಟುಸಾಲುಗಟ್ಟಿನಿಂತಿರುವುದು ಕಂಡುಬಂದಿದೆ.
ಇದನ್ನೂ ಓದಿ: Russia Ukraine Chemical War: ಉಕ್ರೇನ್ ಮೇಲೆ ವಿಷಾನಿಲ ದಾಳಿಗೆ ರಷ್ಯಾ ರಹಸ್ಯ ಯೋಜನೆ?
ಮರಿಯುಪೋಲ್ ಸ್ಥಿತಿ ಶೋಚನೀಯ: ದಕ್ಷಿಣದ ಮರಿಯುಪೋಲ್ ಹಾಗೂ ಇತರ ನಗರಗಳ ಮೇಲೆ ವಾಯುದಾಳಿ ಮುಂದುವರಿದಿದೆ. ಹೀಗಾಗಿ 4.30 ಲಕ್ಷ ಜನಸಂಖ್ಯೆಯ ಈ ಊರಿನ ಸ್ಥಿತಿ ಶೋಚನೀಯವಾಗಿದೆ. ಇಲ್ಲಿ ಸಿಲುಕಿರುವ ನಾಗರಿಕರಿಗೆ ಆಹಾರ, ಔಷಧ ಹಾಗೂ ಇತರ ವಸ್ತುಗಳನ್ನು ಕಳಿಸಲು ಸಿದ್ಧತೆ ನಡೆದಿದೆ. ಮರಿಯುಪೋಲ್‌ನಲ್ಲಿ ಕಳೆದ 10 ದಿನದ ದಾಳಿಯಲ್ಲಿ 1300 ಜನ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಉಪಪ್ರಧಾನಿ ಇರಾರಯನಾ ವೆರೆಶ್‌ಚುಕ್ ಹೇಳಿದ್ದಾರೆ.
ಮರಿಯುಪೋಲ್‌ನಲ್ಲಿ ಮರಗಟ್ಟುವ ಚಳಿ ಇದೆ. ವಿದ್ಯುತ್, ದೂರವಾಣಿ ವ್ಯವಸ್ಥೆ ಕೂಡ ಏರುಪೇರಾಗಿದೆ. ಭಾರೀ ಸಂಖ್ಯೆಯ ಜನ ಸಾವನ್ನಪ್ಪುತ್ತಿರುವ ಕಾರಣ ಶವಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಅಗತ್ಯ ವಸ್ತುಗಳು ಸಿಗದಂತಾಗಿ ಹಾಹಾಕಾರ ಉಂಟಾಗಿದೆ. ಅಲ್ಲಲ್ಲಿ ಜನರು ಕಾರಿನಿಂದ ಗ್ಯಾಸೋಲಿನ್ ಇಂಧನ ಕದಿಯುತ್ತಿರುವ ವರದಿಗಳು ಬಂದಿವೆ.
ವಿಷಾನಿಲ ದಾಳಿಗೆ ರಷ್ಯಾ ಯೋಜನೆ: ಉಕ್ರೇನ್: ತಮ್ಮ ದೇಶದ ಮೇಲೆ ರಷ್ಯಾ ವಿಷಾನಿಲ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ. ರಷ್ಯಾದ ಸೈನಿಕರ ಬಳಿ ದೊರೆತಿರುವ ವಿಷಾನಿಲ ದಾಳಿ ತಡೆಯಬಲ್ಲ ಮಾಸ್ಕ್‌ಗಳೇ ಇದಕ್ಕೆ ಸಾಕ್ಷಿ ಎಂದೂ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಉಕ್ರೇನ್ ಸರ್ಕಾರ, ‘ಪಾಶ್ಚಾತ್ಯ ದೇಶಗಳಿಗೆ ಇದು ಎಚ್ಚರಿಕೆಯ ಗಂಟೆ. ದಯವಿಟ್ಟು ರಷ್ಯಾದ ದಾಳಿಯನ್ನು ನಿಲ್ಲಿಸಿ’ ಎಂದು ಕೇಳಿಕೊಂಡಿದೆ.
ಉಕ್ರೇನಲ್ಲಿ ಜೈವಿಕ ಅಸ್ತ್ರ ತಯಾರಿಕೆ: ರಷ್ಯಾ ಕಿಡಿ: ಉಕ್ರೇನ್ ಗಡಿಯೊಳಗೆ ಅಮೆರಿಕ ಜೈವಿಕ ಅಸ್ತ್ರ ಮತ್ತು ರಾಸಾಯನಿಕ ಅಸ್ತ್ರಗಳನ್ನು ತಯಾರು ಮಾಡುವ ಕಾರ್ಖಾನೆಗಳನ್ನು ನಡೆಸುತ್ತಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ. ಈ ಕುರಿತಾಗಿ ವಿಶ್ವಸಂಸ್ಥೆ ತನಿಖೆ ನಡೆಸಬೇಕು. ಪಾಶ್ಚಾತ್ಯ ಮಾಧ್ಯಮಗಳು ಇದನ್ನು ಗಮನಿಸಬೇಕು ಎಂದೂ ಹೇಳಿದೆ. ಈ ಆರೋಪದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಸಭೆ ನಡೆಸಿದೆ.
