ಲಂಡನ್(ಡಿ.24)‌: ಹೊಸ ಮಾದರಿಯ ಕೊರೋನಾ ವೈರಸ್‌ ಪತ್ತೆಯಾಗುವ ಮೂಲಕ ಇಡೀ ವಿಶ್ವದಲ್ಲಿ ಹೊಸ ಆತಂಕ ಹುಟ್ಟುಹಾಕಿದ್ದ ಬ್ರಿಟನ್‌ ಇದೀಗ ಸ್ವತಃ ತಾನೇ ಮತ್ತೊಂದು ಕೊರೋನಾ ವೈರಸ್‌ ದಾಳಿಗೆ ತುತ್ತಾಗಿದೆ.

"

ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಕೊರೋನಾದ ರೂಪಾಂತರಗೊಂಡ ಹೊಸ ಮಾದರಿಯೊಂದು ಇದೀಗ ಬ್ರಿಟನ್‌ನ ವಿವಿಧ ಭಾಗಗಳಲ್ಲೂ ಪತ್ತೆಯಾಗಿದೆ. ಇದು ಕೂಡಾ ತೀವ್ರ ಸ್ವರೂಪದಲ್ಲಿ ಹಬ್ಬುವ ತೀಕ್ಷ$್ಣತೆ ಹೊಂದಿರುವ ಕಾರಣ, ಬ್ರಿಟನ್‌ನಲ್ಲಿ ಭಾರೀ ಆತಂಕ ವ್ಯಕ್ತವಾಗಿದೆ.

ಅಲ್ಲದೆ ಈಗಾಗಲೇ ಪತ್ತೆಯಾಗಿರುವ ಸೋಂಕಿನ ಜೊತೆಗೆ ಪತ್ತೆಯಾದ ಹೊಸ ಸೋಂಕು ಸೇರಿಕೊಂಡು ದೇಶದಲ್ಲಿ ಕೊರೋನಾ 2ನೇ ಅಲೆಯನ್ನು ಇನ್ನಷ್ಟುಭೀಕರಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಕಳೆದ 3-4 ದಿನಗಳಿಂದ ಜಾರಿಗೊಳಿಸಿದ್ದ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌, ಇದುವರೆಗಿನ ತಪಾಸಣೆ ಅನ್ವಯ ಇಬ್ಬರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಸೋಂಕಿನ ಮಾದರಿ ಪತ್ತೆಯಾಗಿದೆ. ಇದು ಬ್ರಿಟನ್‌ನಲ್ಲಿ ಪತ್ತೆಯಾದ ವೈರಸ್‌ ಹೊಂದಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ರೂಪಾಂತರಗೊಂಡಿರುವ ಕಾರಣ, ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಎಲ್ಲಾ ರೀತಿಯ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಬ್ರಿಟನ್‌ನಲ್ಲಿ ಬುಧವಾರ ದಾಖಲೆಯ 39237 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 744 ಜನರು ಸಾವನ್ನಪ್ಪಿದ್ದಾರೆ.