ಕೋವಿಡ್‌ ಸಮಯದಲ್ಲಿ ಕೆಲಸ ಮಾಡಿದ್ದಕ್ಕೆ ಪ್ರವಾಸದ ಗಿಫ್ಟ್ ಉದ್ಯೋಗಿಗಳ ಪ್ರವಾಸಕ್ಕೆ ಕಂಪನಿ ವೆಚ್ಚ ಮಾಡುತ್ತಿದೆ ಒಂದು ಕೋಟಿ ಬ್ರಿಟನ್‌ನ ಯೋಕ್ ಎಂಬ ನೇಮಕಾತಿ ಸಂಸ್ಥೆಯ ಉದ್ಯೋಗಿಸ್ನೇಹ ನಡೆ

ಲಂಡನ್‌(ಫೆ.8): ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದಕ್ಕಾಗಿ ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಲು ಬ್ರಿಟನ್‌ನ ಸಂಸ್ತೆಯೊಂದು ತನ್ನ ಎಲ್ಲಾ ಉದ್ಯೋಗಿಗಳನ್ನು ರಜೆಯ ಮೇಲೆ ಪ್ರವಾಸಕ್ಕೆ ಕರೆದೊಯ್ಯಲು 1 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಯುಕೆಯ ಕಾರ್ಡಿಫ್(Cardiff) ನಲ್ಲಿರುವ ಉದ್ಯೋಗ ನೇಮಕಾತಿ ಸಂಸ್ಥೆಯಾದ ಯೋಕ್ ರಿಕ್ರುಟ್‌ಮೆಂಟ್ (Yolk Recruitment) ಕಳೆದ ಎರಡು ವರ್ಷಗಳಿಂದ ಕೋವಿಡ್‌ ಸಂಕ್ರಾಮಿಕ ವೇಳೆ ಕೆಲಸ ಮಾಡಿದ ತನ್ನಉದ್ಯೋಗಿಗಳಿಗೆ ಧನ್ಯವಾದ ಸಲ್ಲಿಸಲು ಏಪ್ರಿಲ್‌ನಲ್ಲಿ ಟೆನೆರೈಫ್‌ಗೆ (Tenerife) ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ತನ್ನ ಎಲ್ಲಾ 55 ಉದ್ಯೋಗಿಗಳನ್ನು ಕರೆದೊಯ್ಯುತ್ತಿದೆ. ಇದು ಕೇವಲ ತನ್ನ ಉನ್ನತ ಮಟ್ಟದ ಉದ್ಯೋಗಿಗಳನ್ನು ಮಾತ್ರವಲ್ಲದೇ ಕಂಪನಿಯ ಪ್ರತಿಯೊಬ್ಬರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದೆ.

ಯೋಕ್‌ ಫೋಕ್‌ ಟೆನೆರಿಫ್‌ಗೆ ಹಾರಲಿದೆ. ಅದೂ ಕೂಡ ಎಲ್ಲರೊಂದಿಗೆ. ಈ ಸೌಲಭ್ಯ ಕೇವಲ ಪ್ರಮುಖ ಉದ್ಯೋಗಿಗಳಿಗೆ ಮಾತ್ರವಲ್ಲ. ನಮ್ಮ 2021 ರ ಯಶಸ್ಸಿಗೆ ಸಹಕರಿಸಿದ ಎಲ್ಲ ಉದ್ಯೋಗಿಗಳನ್ನು ಸಂಸ್ಥೆ ಪ್ರವಾಸ ಕರೆದೊಯ್ಯಲಿದೆ ಎಂದು ಅದು ಲಿಂಕ್‌ಡಿನ್‌ನಲ್ಲಿ( LinkedIn) ಹೇಳಿಕೊಂಡಿದೆ. ಎಲ್ಲರೂ ಗೆಲ್ಲುವ ಸಂಸ್ಕೃತಿಯನ್ನು ನಿರ್ಮಿಸುವುದು ನಮ್ಮ ಉದ್ದೇಶ. ಇದರರ್ಥ ಯಾರನ್ನೂ ಹಿಂದೆ ಉಳಿಯಲು ಬಿಡದೇ ಎಲ್ಲರನ್ನು ಜೊತೆಗೆ ಕರೆದೊಯ್ಯಲು ಸಂಸ್ಥೆ ನಿರ್ಧರಿಸಿದೆ ಎಂದು ಕಂಪನಿ ಬರೆದುಕೊಂಡಿದೆ. ಈ ಪ್ರವಾಸದಲ್ಲಿ ಜನವರಿ ಮತ್ತು ಫೆಬ್ರವರಿಯ ಹೊಸದಾಗಿ ಸಂಸ್ಥೆಗೆ ನೇಮಕಗೊಂಡ ಉದ್ಯೋಗಿಗಳು ಸೇರಿದ್ದಾರೆ.

Employees Leaving Tech Companies: ಟೆಕ್ ಕಂಪೆನಿಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಿಗಳ ರಾಜೀನಾಮೆ!

ನಾವು ಆಂತರಿಕವಾಗಿ ಮತ್ತು ಬಾಹ್ಯವಾಗಿ ನಾವು ಮಾಡುವ ಎಲ್ಲದರಲ್ಲೂ ಉತ್ತಮವಾಗಿರಲು ಪ್ರಯತ್ನಿಸುತ್ತೇವೆ ಎಂಬ ಕಾರಣದಿಂದ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಯೋಕ್ ನೇಮಕಾತಿ ಸಂಸ್ಥೆ ಹೇಳಿದೆ. ಬಿಬಿಸಿ ವರದಿಯ ಪ್ರಕಾರ ಈ ರಜಾದಿನದ ಪ್ರವಾಸಕ್ಕೆ 100,000 ಪೌಂಡ್‌ಗಳಿಗಿಂತ ಹೆಚ್ಚು (ಸುಮಾರು 1 ಕೋಟಿ ರೂ.) ವೆಚ್ಚವಾಗಲಿದೆ ಎಂದು ಕಂಪನಿಯು ಅಂದಾಜಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯೊಲ್ಕ್‌ನ ಮುಖ್ಯ ವಾಣಿಜ್ಯ ಅಧಿಕಾರಿ (Commercial Officer) ಪವನ್ ಅರೋರಾ ( Pavan Arora),'2020 ನಮ್ಮ ಇಡೀ ಉದ್ಯಮಕ್ಕೆ ನಿಜವಾಗಿಯೂ ಕಠಿಣ ಸಮಯವಾಗಿತ್ತು. ನಾವು ಉದ್ಯೋಗ ಮಾರುಕಟ್ಟೆಯನ್ನು ತಡೆಹಿಡಿಯುವ ಹಂತದಿಂದ ಈಗ ಅತೀಹೆಚ್ಚು ಚಾಲನೆಯ ಹಂತ ತಲುಪಿದ್ದೇವೆ. ನಮ್ಮ ಸಿಬ್ಬಂದಿಯೂ ಈ ಪ್ರಯಾಣದ ಭಾಗವಾಗಿದ್ದರು. ಆದ್ದರಿಂದ ನಾವು ಎಲ್ಲರ ಸುತ್ತಲೂ ನಮ್ಮ ತೋಳುಗಳನ್ನು ಹಾಕಲು ಬಯಸಿದ್ದೇವೆ (ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯಲು ಬಯಸುತ್ತೇವೆ) ಮತ್ತು ಕಳೆದ ಎರಡು ವರ್ಷಗಳಿಂದ ಧನ್ಯವಾದ ಹೇಳಲು ಬಯಸಿದ್ದೇವೆ ಎಂದರು.

ಉದ್ಯೋಗಿಗೆ ಬಾಸ್‌ ಕಳುಹಿಸಿದ ಮೇಲ್‌ ಇಂಟರ್‌ನೆಟ್‌ನಲ್ಲಿ ವೈರಲ್‌... ಅಂಥದ್ದೇನಿದ್ಯೋ?

ಸಂಸ್ಥೆಯ ಲಿಂಕ್ಡ್‌ಇನ್ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಕಂಪನಿಯನ್ನು ಅದರ ಉತ್ತಮ ಕಾರ್ಯಕ್ಕಾಗಿ ಹೊಗಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ನಷ್ಟದ ನೆಪ ಹೇಳಿ ಮನೆಗೆ ಕಳುಹಿಸಿದ್ದರು, ಜೊತೆಗೆ ವೇತನದಲ್ಲೂ ಕಡಿತ ಮಾಡಿದ್ದರು. ನೂರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಹೀಗಿರುವಾಗ ಸಂಸ್ಥೆಯೊಂದು ಕೋವಿಡ್‌ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಕೆಲಸ ಮಾಡಿದ್ದಕ್ಕಾಗಿ ಶ್ಲಾಘನೆ ಜೊತೆ ಪ್ರವಾಸದ ಆಫರ್ ನೀಡುತ್ತಿರುವುದನ್ನು ಮೆಚ್ಚಲೇಬೇಕು.