ಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್‌ ಹೆಸರಿನ ಈ ಬಂದೂಕನ್ನು 1793-94ರ ಸಮಯದಲ್ಲಿ ಅಸಾದ್‌ ಮೊಹಮ್ಮದ್‌ ಖಾನ್‌ ಎಂಬುವರು ನಿರ್ಮಿಸಿ ಟಿಪ್ಪು ಸುಲ್ತಾನರಿಗೆ ಕೊಟ್ಟಿದ್ದರು. ಗನ್‌ ಮೇಲೆ ಖಾನ್‌ ಅವರ ಸಹಿಯೂ ಇದೆ.

ಲಂಡನ್‌ (ಮೇ 30, 2023): ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ್ದ 18ನೇ ಶತಮಾನದ ಸುಮಾರು 20 ಕೋಟಿ ರೂ. ಮೌಲ್ಯದ ಅಪರೂಪದ ಗನ್‌ ಅನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿರ್ಬಂಧಿಸಿ ಬ್ರಿಟಿಷ್‌ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಯಾವುದೇ ವಿದೇಶಿಯರು ಖರೀದಿಸಿದರೂ ತಮ್ಮ ದೇಶಕ್ಕೆ ಕೊಂಡೊಯ್ಯುವಂತಿಲ್ಲ, ಅಥವಾ ಸ್ವದೇಶಿಯರು ಖರೀದಿಸಿದರೆ ವಿದೇಶಕ್ಕೆ ಕಳುಹಿಸುವಂತಿಲ್ಲ. ಖರೀದಿದಾರರು ಗನ್‌ ಅನ್ನು ಅಧ್ಯಯನಕ್ಕಾಗಿ ಬ್ರಿಟನ್‌ನಲ್ಲಿಯೇ ಇರಿಸಬೇಕಾಗುತ್ತದೆ.

‘ಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್‌’ ಹೆಸರಿನ ಈ ಬಂದೂಕನ್ನು 1793-94ರ ಸಮಯದಲ್ಲಿ ಅಸಾದ್‌ ಮೊಹಮ್ಮದ್‌ ಖಾನ್‌ ಎಂಬುವರು ನಿರ್ಮಿಸಿ ಟಿಪ್ಪು ಸುಲ್ತಾನರಿಗೆ ಕೊಟ್ಟಿದ್ದರು. ಗನ್‌ ಮೇಲೆ ಖಾನ್‌ ಅವರ ಸಹಿಯೂ ಇದೆ. 1799ರಲ್ಲಿ ಟಿಪ್ಪುವಿನ ನಿಧನಾನಂತರ ಈ ಗನ್‌, ಟಿಪ್ಪು ವಿರುದ್ಧ ಹೋರಾಡಿಸ್ದ ಲಾರ್ಡ್‌ ಕಾರ್ನ್‌ವಾಲಿಸ್‌ ವಶಕ್ಕೆ ಹೋಗಿತ್ತು. ಅಂದಿನಿಂದ ಈ ಗನ್‌ ಬ್ರಿಟನ್‌ನಲ್ಲೇ ಇದ್ದು, ಸದ್ಯ ಬೋನ್‌ಹ್ಯಾಮ್ಸ್‌ ಹರಾಜು ಸಂಸ್ಥೆ ವಶದಲ್ಲಿದೆ. ಇತ್ತೀಚೆಗಷ್ಟೇ ಈ ಬೋನ್‌ಹ್ಯಾಮ್ಸ್‌ ಸಂಸ್ಥೆಯು ಟಿಪ್ಪು ಅವರ ಖಡ್ಗವೊಂದನ್ನು 140 ಕೋಟಿ ರೂ. ಗೆ ಹರಾಜು ಹಾಕಿತ್ತು.

ಇದನ್ನು ಓದಿ: ವಿಜಯ್‌ ಮಲ್ಯ 1.5 ಕೋಟಿಗೆ ಖರೀದಿಸಿದ್ದ ಟಿಪ್ಪು ಸುಲ್ತಾನ್‌ ಕತ್ತಿ ಈಗ ಲಂಡನ್ ಹರಾಜಲ್ಲಿ 140 ಕೋಟಿಗೆ ಮಾರಾಟ

ಈ ನಡುವೆ, ಈ ಕುರಿತಂತೆ ಆದೇಶ ಹೊರಡಿಸಿರುವ ಬ್ರಿಟನ್‌ ಕಲೆ ಹಾಗೂ ಪರಂಪರಾ ಸಚಿವಾಲಯ, ಇನ್ನು ಮುಂದೆ ‘ಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್‌’ ಹರಾಜಾದರೆ ಅದು ಬ್ರಿಟನ್‌ನಿಂದ ಹೊರಹೋಗಕೂಡದು. ಖರೀದಿದಾರರು ಅದನ್ನು ಖರೀದಿಸಿ ಸಾರ್ವಜನಿಕ ಅಧ್ಯಯನಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿದೆ.

ಗನ್‌ ಅತ್ಯಂತ ಸೌಂದರ್ಯಯುತವಾಗಿದ್ದು, ತಾಂತ್ರಿಕವಾಗಿಯೂ ಉತ್ತಮ ಗುಣಮಟ್ಟದ್ದು. ಒಂದೇ ಬ್ಯಾರಲ್‌ನಿಂದ ಮರುಲೋಡ್‌ ಮಾಡದೆ 2 ಗುಂಡುಗಳನ್ನು ಇದರಲ್ಲಿ ಹಾರಿಸಬಹುದು. ಟಿಪ್ಪು ಸುಲ್ತಾನ್‌ ಹಾಗೂ ಅವರ ಆವಾಸ ಸ್ಥಾನದ ಅಧ್ಯಯನದ ದೃಷ್ಟಿಯಿಂದ, ಬ್ರಿಟಿಷ್‌ ಇತಿಹಾಸ ಹಾಗೂ ಆಂಗ್ಲೋ-ಮೈಸೂರು ಯುದ್ಧದ ಅವಲೋಕನ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ತಜ್ಞರ ಸಮಿತಿಯೊಂದು ಬ್ರಿಟನ್‌ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಬ್ರಿಟಿಷ್‌ ಸರ್ಕಾರ ಮನ್ನಣೆ ನೀಡಿದೆ.

ಇದನ್ನೂ ಓದಿ: ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!