ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆಗೆ ಮುಂದಾದ ವಿಜ್ಞಾನಿಗಳು!
ಯುವಕರಿಗೆ ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆ!| - ಜನವರಿಯಲ್ಲಿ ಪ್ರಯೋಗಕ್ಕೆ ಬ್ರಿಟನ್ ಸಜ್ಜು| ತಜ್ಞರ ತೀವ್ರ ಆಕ್ಷೇಪ
ಲಂಡನ್(ಅ.22): ಕೊರೋನಾ ಸೋಂಕು ಗುಣಪಡಿಸುವುದಕ್ಕೆ ಸೂಕ್ತ ಲಸಿಕೆ ಸಿದ್ಧಪಡಿಸಲು ಜಗತ್ತಿನಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ರೇಸ್‌ನಲ್ಲಿ ಇರುವಾಗಲೇ, ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳ ತಂಡ ಆರೋಗ್ಯವಂತ ವ್ಯಕ್ತಿಗಳಿಗೆ ಉದ್ದೇಶಪೂರ್ವಕವಾಗಿಯೇ ಕೊರೋನಾ ಸೋಂಕು ಹಬ್ಬಿಸಿ ಲಸಿಕೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾಗಿದೆ. ಆರೋಗ್ಯವಂತರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಮಾಡಿದರೆ ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಅರಿಯಲು ಈ ರೀತಿಯ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ.
ಕಾಲರಾ, ಮಲೇರಿಯಾದಂಥ ರೋಗಗಳ ಲಸಿಕೆ ಪರೀಕ್ಷೆ ವೇಳೆ ಇಂಥ ಪ್ರಯೋಗ ಸಾಮಾನ್ಯವಾದರೂ, ಕೊರೋನಾವನ್ನು ಶೇ.100ರಷ್ಟುಗುಣಪಡಿಸಬಲ್ಲ ಔಷಧ ಇನ್ನೂ ಅಭಿವೃದ್ಧಿಯೇ ಆಗದಿರುವಾಗ ಇಂಥ ಪ್ರಯೋಗ ನೈತಿಕವಾಗಿ ಎಷ್ಟುಸರಿ ಎಂಬ ಪ್ರಶ್ನೆಗಳು ಹಲವು ವಲಯದಿಂದ ಕೇಳಿಬಂದಿದೆ. ಆದರೆ ಬ್ರಿಟನ್ ಸರ್ಕಾರ ಮಾತ್ರ ಯೋಜನೆಗೆ ತಾತ್ವಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದು ಸಾಕಷ್ಟುಆರ್ಥಿಕ ನೆರವನ್ನೂ ಘೋಷಿಸಿದೆ.
ಇದು ಹ್ಯೂಮನ್ ಟ್ರಯಲ್ ಚಾಲೆಂಜ್:
ಟೈಫಾಯ್ಡ್, ಕಾಲರಾ ಹಾಗೂ ಇನ್ನಿತರೆ ರೋಗಗಳಿಗೆ ‘ಹ್ಯೂಮನ್ ಚಾಲೆಂಜ್ ಟ್ರಯಲ್’ ಎಂದು ಕರೆಯಲಾಗುವ ಈ ಪ್ರಯೋಗವನ್ನು ದಶಕಗಳ ಹಿಂದೆ ವಿಜ್ಞಾನಿಗಳು ಮಾಡಿ ಯಶಸ್ವಿಯಾಗಿದ್ದಾರೆ. ಮಲೇರಿಯಾ ರೋಗದ ಔಷಧ ಪ್ರಯೋಗ ವೇಳೆ ಸ್ವಯಂ ಸೇವಕರ ತೋಳಿಗೆ ಒಂದು ಬಾಕ್ಸ್‌ನಷ್ಟುಸೊಳ್ಳೆಗಳನ್ನು ಬಿಟ್ಟು ಕಚ್ಚಿಸಿ, ಸೋಂಕು ಹಬ್ಬಿಸುವ ಕಸರತ್ತನ್ನು ನಡೆಸಿದ್ದರು. ಆ ಪ್ರಯೋಗದ ವೇಳೆ ಸೋಂಕಿತರನ್ನು ಗುಣಮುಖರನ್ನಾಗಿಸಲಾಗಿತ್ತು. ಆದರೆ, ಕೊರೋನಾಗೆ ನಿಶ್ಚಿತ ಎಂಬ ಚಿಕಿತ್ಸೆ ಇಲ್ಲ. ಹೀಗಾಗಿ ಈ ಪ್ರಯೋಗ ಅನೈತಿಕ ಎಂದು ಬಣ್ಣಿಸಲಾಗುತ್ತಿದೆ.
ಹೇಗೆ ನಡೆಯುತ್ತೆ?:
ಬರುವ ಜನವರಿಯಲ್ಲಿ ಉತ್ತರ ಲಂಡನ್‌ನ ಆಸ್ಪತ್ರೆಯೊಂದರ ಐಸೋಲೇಷನ್ ಘಟಕದಲ್ಲಿ 18ರಿಂದ 30ರ ವಯೋಮಾನದ 90 ಆರೋಗ್ಯವಂತ ವ್ಯಕ್ತಿಗಳಿಗೆ ಮೂಗಿನ ಮೂಲಕ ಸಣ್ಣ ಪ್ರಮಾಣದಲ್ಲಿ ಕೊರೋನಾ ಸೋಂಕು ಹಬ್ಬಿಸಲಾಗುತ್ತದೆ. ಸೋಂಕು ತಗುಲದೇ ಹೋದಲ್ಲಿ ಡೋಸ್ ಹೆಚ್ಚಿಸಲಾಗುತ್ತದೆ. ಬಳಿಕ ಸೋಂಕಿತರಿಗೆ ಕೊರೋನಾ ಲಸಿಕೆಯನ್ನು ಅವರು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಅರಿಯಲಾಗುತ್ತದೆ.
ಈ ಪ್ರಯೋಗಕ್ಕೆ ಬ್ರಿಟನ್ ಔಷಧ ನಿಯಂತ್ರಣ ಸಂಸ್ಥೆಯ ಅನುಮತಿ ಇನ್ನೂ ಸಿಕ್ಕಿಲ್ಲ. ಆದರೆ ಬ್ರಿಟನ್ ಸರ್ಕಾರ 324 ಕೋಟಿ ರು. ನೆರವು ಘೋಷಿಸಿದೆ.