ಮೆಕ್ಸಿಕೋ(ಜ.30): ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯಲ್ಲ, ದಿಗಂತದ ಯಾವುದೋ ಮೂಲೆಯಲ್ಲಿ ನಮ್ಮಂತಹ ಜೀವಿಗಳು ವಾಸಿಸುತ್ತಿವೆ ಎಂಬ ವಾದ ಹೊಸತೇನಲ್ಲ. ನಮ್ಮ ಭೂಮಿಗೆ ಈ ಪರಗ್ರಹ ಜೀವಿಗಳ ಏಲಿಯನ್ ಸ್ಪೇಸ್‌ಶಿಪ್ ಆಗಾಗ ಭೇಟಿ ನೀಡುತ್ತವೆ ಎಂಬ ವಾದವೂ ಚಾಲ್ತಿಯಲ್ಲಿದೆ.

ಅದರಂತೆ ಮಧ್ಯ ಮೆಕ್ಸಿಕೋದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಈ ವೇಳೆ ವಿಚಿತ್ರ ಬೆಳಕೊಂದು ವೇಗವಾಗಿ ಹಾದು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಚಿತ್ರ ಬೆಳಕನ್ನು ಕೆಲವರು ಯುಎಫ್‌ಓ(ಪರಗ್ರಹಿ ಯಾನ) ಎಂದು ಹೇಳಿದ್ದಾರೆ.

ಜ್ವಾಲಾಮುಖಿ ಸ್ಫೋಟಗೊಂಡ  ವಿದ್ಯಮಾನವನ್ನು ಮೆಕ್ಸಿಕೋದ ಸರ್ಕಾರಿ ಮಾಧ್ಯಮ ನೇರ ಪ್ರಸಾರ ಮಾಡುತ್ತಿದ್ದ ವೇಳೆ, ವಿಚಿತ್ರ ಬೆಳಕೊಂದು ವೇಗವಾಗಿ ಹಾದುಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಜ್ವಾಲಾಮುಖಿ ಸ್ಫೋಟಗೊಂಡ ಕೆಲವೇ ಕ್ಷಣಗಳಲ್ಲಿ ನಿಗೂಢ ಬಿಳಿ ಬಣ್ಣದ ಬೆಳಕೊಂದು ವೇಗವಾಗಿ ಪರ್ವತದ ಮೇಲಿಂದ ಹಾದು ಹೋಗಿದ್ದು, ಈ ಬೆಳಕು ಏಲಿಯನ್ ಸ್ಪೇಸ್‌ಶಿಪ್‌ನದ್ದು ಎಂದು ಕೆಲವರು ವಾದಿಸಿದ್ದಾರೆ.

10 ವರ್ಷದಲ್ಲಿ ಏಲಿಯನ್ ಜಗತ್ತಿನೊಂದಿಗೆ ಸಂಪರ್ಕ: ನಾಸಾ!

ಆದರೆ ಕೆಲವರು ಇದನ್ನು ಉಲ್ಕೆ ಎಂದು ಹೇಳಿದ್ದು, ಉರಿದು ಬೀಳುತ್ತಿದ್ದ ಉಲ್ಕೆ ಜ್ವಾಲಾಮುಖಿಯ ಸ್ಫೋಟದ ಬೆಳಕಿನಲ್ಲಿ ಮತ್ತಷ್ಟು ಪ್ರಕಾಶಮಾನವಾಗಿ ಕಂಡಿದೆ ಎಂದು ವಾದಿಸಿದ್ದಾರೆ.

ಸದ್ಯ ಈ ವಿಚಿತ್ರ ಬೆಳಕಿನ ವಸ್ತುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಯುಎಫ್‌ಓ ಕುರಿತಾದ ಗಾಳಿ ಸುದ್ದಿಗಳು ಹರಿದಾಡುತ್ತಿವೆ.