ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ, 12 ಮಂದಿ ಸಾವಿಗೆ ಕಾರಣವಾಗಿರುವ ಬಾಂಬ ಸ್ಫೋಟದ ಕುರಿತು ಆರೋಪಗಳು ನಡೆಯುತ್ತಿದ್ದು, ಶಹೆಬಾಜ್ ಷರೀಪ್, ಭಾರತವೇ ಹೊಣೆ ಎಂದಿದ್ದಾರೆ.

ಇಸ್ಲಾಮಾಬಾದ್ (ನ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇಂದು (ನ.11) ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಈ ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ಅಸ್ಥಿರತೆ ಮೂಡಿಸಲು, ಅಭದ್ರತೆ ಸೃಷ್ಟಿಸಲು ಭಾರತ ಪ್ರಯತ್ನಿಸುತ್ತಿದೆ. ಇದರ ಪರಿಣಾಮ ಬಾಂಬ್ ಸ್ಫೋಟಗೊಂಡಿದೆ. ಆಫ್ಘಾನಿಸ್ತಾನವನ್ನು ಬಳಸಿಕೊಂಡು ಭಾರತ ಈ ಕೃತ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇಸ್ಲಾಮಾಬಾದ್ ಬಾಂಬ್ ಸ್ಫೋಟದ ಹೊಣೆಯನ್ನು ತೆಹ್ರಿಕ್ ಇ ತಾಲೀಬಾನ್ ಪಾಕಿಸ್ತಾನ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಟಿಟಿಪಿ ಹೊಣೆ ಹೊತ್ತ ಬೆನ್ನಲ್ಲೇ ಶೆಹಬಾಜ್ ಷರೀಪ್ ಈ ಆರೋಪ ಮಾಡಿದ್ದಾರೆ.

ಪಾಕಿಸ್ತಾನದ ಮೇಲೆ ತಾಲೀಬಾನ್ ಸತತ ದಾಳಿ

ಇಸ್ಲಾಮಾಬಾದ್‌ನಲ್ಲಿ ಬಾಂಬ್ ಸ್ಫೋಟದ ಹೊಣೆಯನ್ನು ಪಾಕಿಸ್ತಾನದಲ್ಲಿರುವ ತೆಹ್ರಿಕ್ ಇ ತಾಲೀಬಾನ್ ಹೊತ್ತುಕೊಂಡಿದೆ. ಆಫ್ಘಾನಿಸ್ತಾನದ ತಾಲೀಬಾನ್ ಹಾಗೂ ಪಾಕಿಸ್ತಾನದಲ್ಲಿರುವ ತಾಲೀಬಾನ್ ಸತತವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿದೆ. ಉಭಯ ದೇಶಗಳು ಸಣ್ಣ ಪ್ರಮಾಣದ ಯುದ್ಧವನ್ನೂ ಮುಗಿಸಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತದತ್ತ ಬೊಟ್ಟು ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಭಾರತದ ಹೆಸರು ಎಳೆದು ತಂದಿದೆ.

ವಾನಾ ದಾಳಿ ಹಿಂದೆ ತಾಲೀಬಾನ್ ಎಂದ ಷರೀಫ್

ಸೋಮವಾರ ಪಾಕಿಸ್ತಾನ ಆಫಘಾನಿಸ್ತಾನ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾದ ವಾನಾದಲ್ಲಿ ತೆಹ್ರಿಕ್ ಇ ತಾಲೀಬಾನ್ ಉಗ್ರ ಸಂಘಟನೆ ದಾಳಿ ಮಾಡಿತ್ತು. ಕೆಡೆಟ್ ಕಾಲೇಜು ವಾನಾದಲ್ಲಿ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ತೆಹ್ರಿಕ್ ಇ ತಾಲೀಬಾನ್ ಪಾಕಿಸ್ತಾನ ಸಂಘಟನೆಯನ್ನು ಪಾಕ್ ನಿಷೇಧಿಸಿದೆ. ಆದರೆ ಪಾಕಿಸ್ತಾನದಲ್ಲಿ ಈ ಸಂಘಟನೆ, ಆಪ್ಘಾನಿಸ್ತಾನದ ತಾಲೀಬಾನ್ ಹಾಗೂ ಭಾರತದ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ. ಇಸ್ಲಾಮಾಬಾದ್‌ನ ನ್ಯಾಯಾಂಗ ಕಾಂಪ್ಲೆಕ್ಸ್‌ನಲ್ಲಿ ಬಾಂಬ್ ದಾಳಿ ನಡೆದಿದೆ. ಈ ರೀತಿಯ ದಾಳಿಯನ್ನು ಪಾಕಿಸ್ತಾನ ಹಿಮ್ಮೆಟ್ಟಿಸಲಿದೆ. ಪಾಕಿಸ್ತಾನ ಒಗ್ಗಟ್ಟಾಗಿ ಹೋರಾಟ ಮಾಡಲಿದೆ. ಹೊರಗಿನ ಶತ್ರುಗಳಿಂದ ಪಾಕಿಸ್ತಾವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಭಾರತದ ನೆರವು ಇದಕ್ಕೆಲ್ಲ ಕಾರಣ ಎಂದು ಶೆಹಬಾಜ್ ಷರೀಪ್ ಹೇಳಿದ್ದಾರೆ.

ಶೆಹಬಾಜ್ ಷರೀಫ್ ಮಾಡಿರುವ ಆಧಾರ ರಹಿತ ಆರೋಪಗಳಿಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಭಾರತ ದೆಹಲಿ ಕಾರು ಸ್ಫೋಟ ಹಾಗೂ ದೇಶದಲ್ಲಿ ಕೈಗೊಳ್ಳಬೇಕಿರುವ ಭದ್ರತಾ ವ್ಯವಸ್ಥಗೆಳ ಕುರಿತು ಸತತ ಸಭೆ ಮಾಡುತ್ತಿದೆ. ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಪಾಕಿಸ್ತಾನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಕೈವಾಡಗಳು ಮೇಲ್ನೋಟಕ್ಕೆ ಕಾಣುತ್ತಿದೆ. ವೈದ್ಯರ ಸೋಗಿನಲ್ಲಿ ಉಗ್ರರಾಗಿ ಕಾರ್ಯನಿರ್ವಹಿಸುತ್ತಿರುವ ಕೆಲ ಉಗ್ರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎನ್ಐಎ ಪ್ರಕರಣದ ತನಿಖೆ ನಡಸೆುತ್ತಿದೆ. ಹಲವರ ವಿಚಾರಣೆಗೆ ಒಳಪಡಿಸಿದೆ.