ಭಾರತವನ್ನು ಬೆಳವಣಿಗೆಗಾಗಿ ನಂಬಿಕಸ್ಥ ಪಾಲುದಾರನಂತೆ ಜಗತ್ತು ನೋಡುತ್ತಿದೆ. ವಿಶ್ವಾಸವೇ ಭಾರತದ ಶಕ್ತಿಶಾಲಿ ಕರೆನ್ಸಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 2 ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಅವರು ಭಾರತೀಯ ಸಂಜಾತರೊಂದಿಗಿನ ಸಂವಾದದ ವೇಳೆ ಹೀಗೆ ನುಡಿದಿದ್ದಾರೆ.

ಕೌಲಾಲಂಪುರ: ಭಾರತವನ್ನು ಬೆಳವಣಿಗೆಗಾಗಿ ನಂಬಿಕಸ್ಥ ಪಾಲುದಾರನಂತೆ ಜಗತ್ತು ನೋಡುತ್ತಿದೆ. ವಿಶ್ವಾಸವೇ ಭಾರತದ ಶಕ್ತಿಶಾಲಿ ಕರೆನ್ಸಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 2 ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಅವರು ಭಾರತೀಯ ಸಂಜಾತರೊಂದಿಗಿನ ಸಂವಾದದ ವೇಳೆ ಹೀಗೆ ನುಡಿದಿದ್ದಾರೆ.

Add Asianetnews Kannada as a Preferred SourcegooglePreferred

‘ಇಂದು ನಂಬಿಕೆಯೆಂಬುದು ನಮ್ಮ ದೇಶದ ಕರೆನ್ಸಿ ಆಗಿದೆ. ಇದಕ್ಕೆ ಇತ್ತೀಚೆಗೆ ಬ್ರಿಟನ್‌, ಅಮೆರಿಕ, ಐರೋಪ್ಯ ಒಕ್ಕೂಟ ಸೇರಿದಂತೆ ವಿವಿಧ ದೇಶಗಳೊಂದಿಗೆ ಏರ್ಪಟ್ಟ ವ್ಯಾಪಾರ ಒಪ್ಪಂದವೇ ಪುರಾವೆ’ ಎಂದು ಮೋದಿ ಹೇಳಿದರು. ಅಲ್ಲಿರುವ ತಮಿಳಿಗರನ್ನು ಉದ್ದೇಶಿಸಿ, ‘ಮಲೇಷ್ಯಾ ವಿಶ್ವದ ಎರಡನೇ ಅತಿದೊಡ್ಡ ಭಾರತೀಯ ಮೂಲದ ಸಮುದಾಯವನ್ನು ಹೊಂದಿದೆ. ಭಾರತೀಯರು ಉಭಯ ದೇಶಗಳ ನಡುವೆ ಸೇತುವೆಯಂತಿದ್ದಾರೆ. ಅದರಲ್ಲೂ ತಮಿಳುನಾಡು ಮೂಲದವರು ದಶಕಗಳಿಂದ ಇಲ್ಲಿ ನೆಲೆಸಿದ್ದಾರೆ. ಇತ್ತೀಚಿನ ಮನ್‌ ಕಿ ಬಾತ್‌ನಲ್ಲಿ, ಮಲೇಷ್ಯಾದ 500 ಶಾಲೆಗಳಲ್ಲಿ ಭಾರತೀಯ ಭಾಷೆಗಳನ್ನು ಕಲಿಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದೆ. ಇತಿಹಾಸದಿಂದ ಪ್ರೇರಿತರಾಗಿ ಮಲಾಯಾ ವಿವಿಯಲ್ಲಿ ತಿರುವಳ್ಳೂರು ಚೇರ್‌ ರಚಿಸಿರುವುದು ಹೆಮ್ಮೆಯ ವಿಷಯ. ಇದನ್ನು ಇನ್ನೂ ಬಲಪಡಿಸಲು ತಿರುವಳ್ಳೂರು ಕೇಂದ್ರವನ್ನು ಸ್ಥಾಪಿಸುತ್ತೇವೆ’ ಎಂದು ಮೋದಿ ಹೇಳಿದರು. ಇದೇ ವೇಳೆ, ‘ಮಲೇಷ್ಯಾದವರೊಂದಿಗೆ ಭಾರತಕ್ಕೆ ಬನ್ನಿ’ ಎಂದು ಆಹ್ವಾನಿಸಿದರು.

ಯುಪಿಐ ಮಲೇಷ್ಯಾ ಪ್ರವೇಶ:

‘ಭಾರತದ ಯಶಸ್ವಿ ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿರುವ ಯುಪಿಐ ಅತಿಶೀಘ್ರ ಮಲೇಷ್ಯಾ ಪ್ರವೇಶಿಸಲಿದೆ. ಇದು ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಆರ್ಥಿಕ ಏಕೀಕರಣವನ್ನು ವೇಗಗೊಳಿಸುವಲ್ಲಿ ಒಂದು ಮೈಲಿಗಲ್ಲು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಸ್ತುತ ಮಲೇಷ್ಯಾಗೆ ಹೋಗುವ ಭಾರತೀಯ ಪ್ರವಾಸಿಗಳು ಅಲ್ಲಿ ಯುಪಿಐ ಬಳಸುತ್ತಿದ್ದಾರೆ.

2 ದಿನ ಮಲೇಷ್ಯಾಗೆ:

ಆಗ್ನೇಯ ಏಷ್ಯಾ ದೇಶ ಮಲೇಷ್ಯಾದೊಂದಿಗೆ ಸಂಬಂಧ ವೃದ್ಧಿಗಾಗಿ ಮಾತುಕತೆಗಾಗಿ ಪ್ರಧಾನಿ ಮೋದಿ ಶನಿವಾರ ಕೌಲಾಲಂಪುರಕ್ಕೆ ಬಂದಿಳಿದರು. ಈ ವೇಳೆ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ, ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಒಂದೇ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ಭಾರತೀಯ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದ್ದು ವಿಶೇಷವಾಗಿತ್ತು.

ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಆಗಮಿಸಿರುವ ಮೋದಿ, ತಮ್ಮ 2 ದಿನಗಳ ಭೇಟಿ ವೇಳೆ ರಕ್ಷಣೆ, ಸಹಕಾರ, ಆರ್ಥಿಕ ಸಂಬಂಧ ವೃದ್ಧಿ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ವೇಳೆ ಉಭಯ ದೇಶಗಳು ಕೆಲ ಒಪ್ಪಂದಗಳಿಗೂ ಸಹಿ ಹಾಕುವ ನಿರೀಕ್ಷೆಯಿದೆ.

ಈ ಭೇಟಿಯ ನಡುವೆಯೇ ನಿಯೋಗ ಮಟ್ಟದ ಮಾತುಕತೆ ನಡೆದು, ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯ್ಕ್‌ನನ್ನು ಗಡೀಪಾರು ಮಾಡುವ ಬೇಡಿಕೆ ಇಡುವ ಸಾಧ್ಯತೆಯಿದೆ.