ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧ ಹಳಸಲು ಟ್ರಂಪ್ ಅವರ ನೊಬೆಲ್‌ ಶಾಂತಿ ಪ್ರಶಸ್ತಿಯ ಆಸೆಯೇ ಕಾರಣ ಎಂಬ ಅಂಶ ಬಹಿರಂಗವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧ ಹಳಸಲು ಟ್ರಂಪ್ ಅವರ ನೊಬೆಲ್‌ ಶಾಂತಿ ಪ್ರಶಸ್ತಿಯ ಆಸೆಯೇ ಕಾರಣ ಎಂಬ ಅಂಶ ಬಹಿರಂಗವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

‘ಕೆನಡಾದಲ್ಲಿ ನಡೆದ ಜಿ7 ಶೃಂಗದ ಬಳಿಕ ಮೋದಿ ಹಾಗೂ ಟ್ರಂಪ್‌ ನಡುವೆ ಜೂ.17ರಂದು ಫೋನ್‌ ಸಂಭಾಷಣೆ ನಡೆದಿತ್ತು. ಆಗ ‘ಭಾರತ-ಪಾಕ್‌ ಯುದ್ಧ ನಿಲ್ಲಿಸಲು ನಾನು ಕಾರಣ’ ಎಂದು ಟ್ರಂಪ್‌ ಹೇಳಿದರು ಹಾಗೂ ಪಾಕಿಸ್ತಾನ ಈ ಬಗ್ಗೆ ತಮ್ಮನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮಾಂಕನ ಮಾಡಿದೆ ಎಂದರು. ಇದಕ್ಕೆ ಮೋದಿ ಒಪ್ಪಲಿಲ್ಲ. ‘ಕದನವಿರಾಮ ದ್ವಿಪಕ್ಷೀಯ ಒಪ್ಪಂದ’ ಎಂದು ಹೇಳಿದರು ಹಾಗೂ ಪಾಕ್‌ನಂತೆ ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಹಿಂಜರಿದರು. ಇದು ಉಭಯ ನಾಯಕರ ಸಂಬಂಧ ಹಳಸಲು ನಾಂದಿ ಹಾಡಿತು’ ಎಂದು ವರದಿ ಹೇಳಿದೆ.

ಇದೇ ವೇಳೆ, ‘ಟ್ರಂಪ್‌ ಅವರು, ‘ಕೆನಡಾದಿಂದ ಭಾರತಕ್ಕೆ ಮರಳುವಾಗ ಅಮೆರಿಕಕ್ಕೆ ಬಂದು ಹೋಗಿ’ ಎಂದರು. ಇದಕ್ಕೆ ಮೋದಿ ಒಪ್ಪಲಿಲ್ಲ. ಏಕೆಂದರೆ ಆ ವೇಳೆ ಪಾಕ್‌ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಶ್ವೇತಭವನಕ್ಕೆ ಬಂದಿದ್ದರು. ಟ್ರಂಪ್‌ ಅವರು ಮೋದಿ-ಮುನೀರ್‌ರನ್ನು ಅಕ್ಕಪಕ್ಕ ನಿಲ್ಲಿಸಿ ಫೋಟೋ ತೆಗೆಸಿಕೊಂಡು ಶಾಂತಿ ಸಂಧಾನಕಾರ ಎಂದು ಬಿಂಬಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಎಂಬ ಆತಂಕ ಭಾರತಕ್ಕಿತ್ತು. ಹೀಗಾಗೇ ಮೋದಿ ಅಮೆರಿಕಕ್ಕೆ ಹೋಗಲಿಲ್ಲ’ ಎಂದು ವರದಿ ವಿವರಿಸಿದೆ.

ಆದರೆ ಈ ಬಗ್ಗೆ ಭಾರತ-ಅಮೆರಿಕ ಸರ್ಕಾರಗಳು ಯಾವುದೇ ಹೇಳಿಕೆ ನೀಡಿಲ್ಲ.

ನವೆಂಬರ್‌ಗೆ ಟ್ರಂಪ್‌ ಭಾರತಕ್ಕಿಲ್ಲ:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೂ.17ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದಾಗ ನವೆಂಬರ್‌ನಲ್ಲಿ ಕ್ವಾಡ್‌ ಶೃಂಗಕ್ಕಾಗಿ ಭಾರತಕ್ಕೆ ಬರುವೆ ಎಂದಿದ್ದರು. ಆದರೆ ಸಂಬಂಧ ಹಳಸಿದ ಕಾರಣ ಭಾರತ ಭೇಟಿ ಕೈಬಿಟ್ಟಿದ್ದಾರೆ ಎಂದು ನ್ಯೈಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.