ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆಯುವ ಉದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದರೆ ‘ನ್ಯಾಟೋ’ದಿಂದಲೇ ಹೊರಬರುವುದಾಗಿ ಯುರೋಪಿಯನ್ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆಯುವ ಉದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿದರೆ ‘ನ್ಯಾಟೋ’ದಿಂದಲೇ ಹೊರಬರುವುದಾಗಿ ಯುರೋಪಿಯನ್ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ತೆರಿಗೆ ಹೇರುವ ಬೆದರಿಕೆ
ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ತನ್ನ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸದ ದೇಶಗಳ ಮೇಲೆ ತೆರಿಗೆ ಹೇರುವ ಬೆದರಿಕೆ ಹಾಕಿದ ಬೆನ್ನಲ್ಲೇ, ಟ್ರಂಪ್ ಅವರು ಈ ಎಚ್ಚರಿಕೆ ನೀಡಿದ್ದಾರೆ.
‘ಒಂದು ವೇಳೆ ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳಲು ನ್ಯಾಟೋದಿಂದ ಯಾವುದೇ ನೆರವು ಸಿಗದಿದ್ದರೆ ನೀವು ನ್ಯಾಟೋದಿಂದ ಹೊರಬರಲಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾವು ಪರಿಶೀಲಿಸುತ್ತೇವೆ. ನಮ್ಮ ರಾಷ್ಟ್ರೀಯ ಭದ್ರತೆಗಾಗಿ ಗ್ರೀನ್‌ಲ್ಯಾಂಡ್ ಅತ್ಯಗತ್ಯ. ನಮ್ಮ ಕೈಯಲ್ಲಿ ಗ್ರೀನ್ ಲ್ಯಾಂಡ್ ಇಲ್ಲದೇ ಹೋದರೆ ವಿಶೇಷವಾಗಿ ಗೋಲ್ಡನ್ ಡೋಮ್ (ಕ್ಷಿಪಣಿ ರಕ್ಷಣಾ ವ್ಯವಸ್ಥೆ) ಸೇರಿ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ಹೇಳಿದ್ದಾರೆ.
ಬಲವಂತವಾಗಿಯಾದರೂ ಸರಿ ನಾವು ಗ್ರೀನ್‌ಲ್ಯಾಂಡ್ ದೇಶವನ್ನು ವಶಪಡಿಸಿಕೊಂಡೇ ತೀರುತ್ತೇವೆ ಎಂದು ಹಲವು ದಿನಗಳಿಂದ ಪದೇ ಪದೇ ಟ್ರಂಪ್ ಹೇಳುತ್ತಲೇ ಇದ್ದಾರೆ. ಮತ್ತೊಂದೆಡೆ ಇದಕ್ಕೆ ನ್ಯಾಟೋ ದೇಶಗಳಾದ ಜರ್ಮನಿ, ಫ್ರಾನ್ಸ್, ಡೆನ್ಮಾರ್ಕ್ ಸೇರಿ ಹಲವು ದೇಶಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಜೊತೆಗೆ ಇತ್ತೀಚೆಗೆ ಹಲವು ದೇಶಗಳು ಗ್ರೀನ್‌ಲ್ಯಾಂಡ್‌ಗೆ ತಮ್ಮ ಸೇನೆಯನ್ನು ಕಳುಹಿಸುವ ಮೂಲಕ ಟ್ರಂಪ್‌ರ ನಿರ್ಧಾರಕ್ಕೆ ಸಡ್ಡು ಹೊಡೆದಿವೆ. ಅದರ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ನ್ಯಾಟೋ ಎಂದರೇನು?
ಇದೊಂದು ಮಿಲಿಟರಿ ಕೂಟ. 2ನೇ ಮಹಾಯುದ್ಧದ ಬಳಿಕ 1949ರಲ್ಲಿ ಯುರೋಪ್‌ನ 30 ಮತ್ತು ಉತ್ತರ ಅಮೆರಿಕದ 2 ದೇಶಗಳು ಸೇರಿಕೊಂಡು ಪರಸ್ಪರರ ರಕ್ಷಣೆಗೆ ರಚಿಸಿಕೊಂಡ ಸೇನಾ ಒಕ್ಕೂಟ. ಸದಸ್ಯ ದೇಶಗಳ ಮೇಲೆ ಬೇರೆ ಯಾವುದೇ ದೇಶ ದಾಳಿ ಮಾಡಿದರೆ ನ್ಯಾಟೋ ದೇಶಗಳು ಒಂದಾಗಿ ಆ ದೇಶದ ರಕ್ಷಣೆಗೆ ಬರುತ್ತವೆ. 2024ರಲ್ಲಿ ನ್ಯಾಟೋ ಪಡೆಗಳ ವಾರ್ಷಿಕ ವೆಚ್ಚ 45 ಲಕ್ಷ ಕೋಟಿ ರು.ನಷ್ಟಿತ್ತು. ಇದರಲ್ಲಿ ಮೂರನೇ ಎರಡು ಭಾಗದಷ್ಟು ವೆಚ್ಚವನ್ನು ಅಮೆರಿಕವೊಂದೇ ಭರಿಸುತ್ತದೆ. ಹೀಗಾಗಿ ಅಮೆರಿಕ ನ್ಯಾಟೋ ತೊರೆದರೆ, ಕೂಟಕ್ಕೆ ಭಾರೀ ಹೊರೆ ಬೀಳಲಿದೆ


