ಸೋಲೊಪ್ಪುವಂತೆ ಟ್ರಂಪ್ ಮನವೊಲಿಕೆಗೆ ಅಳಿಯ ಯತ್ನ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡಿರುವ ಟ್ರಂಪ್| ಜೆರೇಡ್ ಕುಶ್ನೆರ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನವೊಲಿಸಲು ಯತ್ನ
ವಾಷಿಂಗ್ಟನ್(ನ.09): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಅವರಿಗೆ ತೀವ್ರ ಪೈಪೋಟಿ ನೀಡಿ ಪರಾಭವಗೊಂಡಿರುವ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ಅಳಿಯ ಮತ್ತು ಹಿರಿಯ ಸಲಹೆಗಾರ ಜೆರೇಡ್ ಕುಶ್ನೆರ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನವೊಲಿಸಲು ಯತ್ನಿಸಿರುವುದಾಗಿ ಸುದ್ದಿಸಂಸ್ಥೆಗಳು ಭಾನುವಾರ ವರದಿ ಮಾಡಿವೆ.
ಈ ಮಧ್ಯೆ ‘ಅಮೆರಿಕನ್ನರಿಗೆ ಅರ್ಹ ಮತ್ತು ಪ್ರಾಮಾಣಿಕ ಮತ ಎಣಿಕೆ ಪಡೆಯುವವರೆಗೂ ನಾನು ವಿಶ್ರಮಿಸುವುದಿಲ್ಲ’ ಎಂದಿರುವ ಟ್ರಂಪ್, ಸೋಮವಾರದಿಂದ ಈ ಕುರಿತ ಕಾನೂನಾತ್ಮಕ ಹೋರಾಟ ಆರಂಭಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟ್ರಂಪ್‌ಗೆ 3ನೇ ಪತ್ನಿ ಶೀಘ್ರ ವಿಚ್ಛೇದನ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ಪತ್ನಿ ಮೆಲಾನಿಯಾ ಟ್ರಂಪ್ (50) ವಿಚ್ಛೇದನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧ್ಯಕ್ಷೀಯ ಅವಧಿ ಪೂರ್ಣಗೊಂಡು ಟ್ರಂಪ್ ಶ್ವೇತಭವನದಿಂದ ಹೊರಬರುತ್ತಿದ್ದಂತೆ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ಇಬ್ಬರು ಮಾಜಿ ಅಧಿಕಾರಿಗಳು ಹೇಳಿದ್ದಾರೆ.
ಈಗಲೂ ಶ್ವೇತಭವನದಲ್ಲಿ ಟ್ರಂಪ್ ಮತ್ತು ಮೆಲಾನಿಯಾ ಬೇರೆ ಬೇರೆ ಬೆಡ್‌ರೂಂ ಹೊಂದಿದ್ದಾರೆ. ಅವರ ನಡುವೆ ಹೆಸರಿಗಷ್ಟೇ ದಾಂಪತ್ಯವಿದೆ. ವಿಚ್ಛೇದನ ನೀಡಲು ಅಧಿಕಾರಾವಧಿ ಮುಗಿಯುವುದನ್ನೇ ‘ಪ್ರಥಮ ಮಹಿಳೆ’ ಕಾಯುತ್ತಿದ್ದಾರೆ ಎಂದು ಮೆಲಾನಿಯಾಗೆ ಹಿರಿಯ ಸಲಹೆಗಾರ್ತಿಯಾಗಿದ್ದ ಸ್ಟೆಫಾನಿ ವಕಾಫ್ ಹೇಳಿದ್ದಾರೆ. ಇನ್ನು, ಟ್ರಂಪ್‌ಗೆ ಸಹಾಯಕರಾಗಿದ್ದ ಒಮರೋಸಾ ಮ್ಯಾನಿಗಾಟ್ ನ್ಯೂಮನ್ ಕೂಡ ಮೆಲಾನಿಯಾ ವಿಚ್ಛೇದನ ನೀಡಲು ಒಂದೊಂದು ಕ್ಷಣವನ್ನೂ ಲೆಕ್ಕ ಹಾಕುತ್ತಿದ್ದಾರೆ ಎಂದಿದ್ದಾರೆ.