ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನುಜುವೇಲ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಚೀನಾ ಮತ್ತು ರಷ್ಯಾ ಆಕ್ರಮಣಕಾರಿ ನಿಲುವು ತೆಗೆದುಕೊಂಡವು. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ, ಅತಿದೊಡ್ಡ ಸುದ್ದಿ ಬೆಳಕಿಗೆ ಬಂದಿದೆ. 

ನವದೆಹಲಿ (ಜ.10): ಹೊಸ ವರ್ಷದ ಸಂಭ್ರಮದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಮೇಲೆ ದಾಳಿ ಮಾಡಿ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದರು. ನಿಕೋಲಸರ್‌ ಮಡುರೊ ಅವರನ್ನು ಬಂಧಿಸಿ ಅಮೆರಿಕಕ್ಕೆ ಹೊತ್ತೊಯ್ದ ಟ್ರಂಪ್‌ ಅವರ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸಿದ್ದಾರೆ. ಈ ನಡುವೆ, ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಮಾಡಿದ ನಂತರ, ಚೀನಾ ಮತ್ತು ರಷ್ಯಾ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿವೆ.

ಚೀನಾ ಅಮೆರಿಕವು ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ ಮತ್ತು ಇದು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಗಳ ಉಲ್ಲಂಘನೆ ಎಂದಿದೆ. ಇನ್ನು ವೆನೆಜುವೆಲಾ ಮೇಲಿನ ದಾಳಿಯ ನಂತರ, ಡೊನಾಲ್ಡ್ ಟ್ರಂಪ್ ಈಗ ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಗ್ರೀನ್‌ಲ್ಯಾಂಡ್‌ ಪ್ರದೇಶ ಅಮೆರಿಕದ ಭಾಗವಾಗಬೇಕು ಎಂದು ಅವರು ಬಯಸಿದ್ದಾರೆ. ಅದಕ್ಕಾಗಿ ಗ್ರೀನ್‌ಲ್ಯಾಂಡ್‌ ಜನರಿಗೆ ಲಂಚ ಹಾಗೂ ಶಿಕ್ಷೆ ಸೇರಿದಂತೆ ಎಲ್ಲಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಆದರೆ, ಡೊನಾಲ್ಡ್‌ ಟ್ರಂಪ್‌ ಇದರಲ್ಲಿ ಯಾವುದೇ ಯಶಸ್ಸು ಪಡೆಯುತ್ತಿಲ್ಲ.

ಆದರೆ, ಗ್ರೀನ್‌ಲ್ಯಾಂಡ್‌ಅನ್ನು ಅತಿಕ್ರಮಿಸುವ ಅಮೆರಿಕದ ಆಸೆಗೆ ದೊಡ್ಡ ಹೊಡೆತ ಬಿದ್ದಿದೆ. ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅವರ ಕನಸು ಭಗ್ನಗೊಂಡಿದೆ. ಟ್ರಂಪ್ ಅವರ ನೀತಿಯ ವಿರುದ್ಧ ಗ್ರೀನ್‌ಲ್ಯಾಂಡ್ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳು ಒಗ್ಗೂಡಿ ಹೇಳಿಕೆ ನೀಡಿವೆ. ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ಅಮೆರಿಕವಾಗಲಿ, ಡೆನ್ಮಾರ್ಕ್‌ ಆಗಲಿ ನಿರ್ಧಾರ ಮಾಡುವಂತಿಲ್ಲ. ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನ ಇಲ್ಲಿನ ಜನರೇ ನಿರಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಹಾಜರಿದ್ದ ಎಲ್ಲಾ ನಾಯಕರು, ನಾವು ಅಮೆರಿಕಕ್ಕೂ ಸೇರಲು ಬಯಸೋದಿಲ್ಲ, ಡೆನ್ಮಾರ್ಕ್‌ ಸೇರಲು ಕೂಡ ಬಯಸೋದಿಲ್ಲ ಎಂದು ಒಗ್ಗಟ್ಟಿನಿಂದ ಹೇಳಿದ್ದಾರೆ. ನಮ್ಮ ಮುಂದಿರುವ ಭವಿಷ್ಯ ಗ್ರೀನ್‌ಲ್ಯಾಂಡ್‌ ಮಾತ್ರ. ನಾವು ಗ್ರೀನ್‌ಲ್ಯಾಂಡ್‌ ಆಗಿಯೇ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಗ್ರೀನ್‌ಲ್ಯಾಂಡ್‌ಅನ್ನು ಹಗುರವಾಗಿ ಪರಿಗಣಿಸಬೇಡಿ: ಟ್ರಂಪ್‌ಗೆ ಎಚ್ಚರಿಕೆ

ಇಷ್ಟೇ ಅಲ್ಲ, ಗ್ರೀನ್‌ಲ್ಯಾಂಡ್‌ನ ಎಲ್ಲಾ ಪಕ್ಷಗಳ ನಾಯಕರು ಕೂಡ ಟ್ರಂಪ್‌ಗೆ ಗ್ರೀನ್‌ಲ್ಯಾಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದ್ದಾರೆ. ಗ್ರೀನ್‌ಲ್ಯಾಂಡ್‌ನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಾವು ನಿರ್ಧರಿಸುತ್ತೇವೆ, ಬೇರೆ ಯಾವುದೇ ವಿದೇಶಗಳು ಬಂದು ನಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಗ್ರೀನ್‌ಲ್ಯಾಂಡ್ ಹೇಳಿದೆ. ಇದರ ನಡುವೆ, ಕೆಲವು ದಿನಗಳ ಹಿಂದೆ, ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಜನರಿಗೆ ಹಣ ನೀಡಿ ಖರದಿ ಮಾಡೋದಾಗಿ ತಿಳಿಸಿದ್ದರು. ಆದರೆ ಅಲ್ಲಿನ ನಾಗರಿಕರು ಟ್ರಂಪ್ ಅವರ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ, ಆದ್ದರಿಂದ ಅಮೆರಿಕ ವೆನೆಜುವೆಲಾ ಮೇಲೆ ದಾಳಿ ಮಾಡಿದ ರೀತಿಯಲ್ಲಿ ಟ್ರಂಪ್ ಗ್ರೀನ್‌ಲ್ಯಾಂಡ್ ಮೇಲೆ ದಾಳಿ ಮಾಡುತ್ತಾರೆಯೇ ಎನ್ನುವ ಕುತೂಹಲ ಇದೆ. ಟ್ರಂಪ್‌ ಕೂಡ ಸುಲಭದ ಮಾರ್ಗವಾಗಲಿ, ಕಷ್ಟದ ಮಾರ್ಗವಾಗಲಿ ಗ್ರೀನ್‌ಲ್ಯಾಂಡ್‌ಅನ್ನು ನಮ್ಮ ಭಾಗ ಮಾಡಿಕೊಂಡೇ ಸಿದ್ದ ಎಂದು ಹೇಳಿದ್ದಾರೆ.