ಬೋಸ್ಟನ್‌(ಜ.11): ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ಪ್ರಚೋದನೆ ನೀಡಿದ ಕಾರಣಕ್ಕೆ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ನಿಂದ ಶಾಶ್ವತವಾಗಿ ನಿಷೇಧಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮದೇ ಆದ ಸಾಮಾಜಿಕ ಜಾಲತಾಣವೊಂದನ್ನು ಹೊರತರಲು ಮುಂದಾಗಿದ್ದಾರೆ.

ಟ್ವೀಟರ್‌ನಿಂದ ನಿಷೇಧಕ್ಕೆ ಒಳಗಾದ ಬಳಿಕ ಟ್ರಂಪ್‌ ಅವರಿಗೆ ಜನರನ್ನು ಅದರಲ್ಲೂ ವಿಶೇಷವಾಗಿ ತಮ್ಮ ಬೆಂಬಲಿಗರನ್ನು ತಲುಪಲು ಯಾವುದೇ ಪ್ರಮುಖ ಮಾರ್ಗವಿಲ್ಲ. ಹೀಗಾಗಿ ಅವರು ಹೊಸ ಜಾಲತಾಣ ಬಿಡುಗಡೆಗೆ ಯೋಚಿಸುತ್ತಿದ್ದಾರೆ. ಆದರೆ ಅದು ರಾತ್ರೋರಾತ್ರಿ ಆಗುವಂತಹ ಬೆಳವಣಿಗೆಯಲ್ಲ ಎಂದು ಟ್ರಂಪ್‌ ಆಪ್ತರು ತಿಳಿಸಿದ್ದಾರೆ.

ಈ ನಡುವೆ ಅಮೆರಿಕದಲ್ಲಿ ಬಲಪಂಥೀಯರು ಬಳಸುವ ಪಾರ್ಲರ್‌ ಎಂಬ ಸಾಮಾಜಿಕ ಜಾಲತಾಣ ಉಪಯೋಗಿಸಲು ಟ್ರಂಪ್‌ ಮುಂದಾಗಿದ್ದರು. ಆದರೆ ಪ್ರಚೋದನಾಕಾರಿ ಪೋಸ್ಟ್‌ ಸಂಬಂಧ ಆ ಜಾಲತಾಣವನ್ನು ಗೂಗಲ್‌ ಹಾಗೂ ಆ್ಯಪಲ್‌ ಕಂಪನಿಗಳು ತಮ್ಮ ಆ್ಯಪ್‌ ಸ್ಟೋರ್‌ಗಳಿಂದ ತೆಗೆದು ಹಾಕಿವೆ.

ಈಗಾಗಲೇ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸಂಸ್ಥೆಗಳು ಟ್ರಂಪ್‌ ಅಧಿಕಾರದಿಂದ ಕೆಳಗಿಳಿಯುವ ದಿನವಾದ ಜ.20ರವರೆಗೂ ಅವರ ಖಾತೆಗಳಿಗೆ ನಿರ್ಬಂಧ ಹೇರಿವೆ. ಹೀಗಾಗಿ ಸಂವಹನಕ್ಕೆ ಗಂಭೀರ ಸಮಸ್ಯೆಯನ್ನು ಟ್ರಂಪ್‌ ಎದುರಿಸುತ್ತಿದ್ದಾರೆ.