ರಿಯಾದ್(ಜ.12)‌: ಕಾರುಗಳೇ ಇಲ್ಲದ ನಗರವನ್ನು ಜಗತ್ತಿನಲ್ಲಿ ಇಂದು ಊಹಿಸಿಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಸೌದಿ ಅರೇಬಿಯಾ ಕಾರು, ರಸ್ತೆಗಳೇ ಇಲ್ಲದ ಹೊಸ ನಗರವೊಂದನ್ನು ಕಟ್ಟಲು ಹೊರಟಿದೆ!

ಅಚ್ಚರಿಯಾದರೂ ಇದು ನಿಜ. ಇಡೀ ವಿಶ್ವಕ್ಕೇ ತೈಲ ಸರಬರಾಜು ಮಾಡುವ ಮೂಲಕ ಜಗತ್ತಿನ ಅತ್ಯಂತ ಬೃಹತ್‌ ತೈಲ ಉತ್ಪಾದಕ ದೇಶ ಎನಿಸಿಕೊಂಡಿರುವ ಸೌದಿ ಅರೇಬಿಯಾ ಈಗ ಕಾರ್ಬನ್‌ ಹೊರಸೂಸುವಿಕೆಯನ್ನು ತಗ್ಗಿಸಲು ಕಾರು, ರಸ್ತೆಗಳೇ ಇಲ್ಲದ ಮಾಲಿನ್ಯ ಮುಕ್ತ ನಗರವೊಂದನ್ನು ನಿರ್ಮಾಣ ಮಾಡುವುದಾಗಿ ಪ್ರಕಟಿಸಿದೆ. ರಸ್ತೆಯ ಮೇಲೆ ಓಡಾಡುವ ವಾಹನದ ಬದಲು ಮೆಟ್ರೋ ರೈಲಿನಂಥ ವೇಗದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಿದೆ.

ಉದ್ದೇಶಿತ ನಗರ 170 ಕಿ.ಮೀ. ಉದ್ದವಿರಲಿದ್ದು, ಇದಕ್ಕೆ ‘ದ ಲೈನ್‌’ ಎಂದು ಕರೆಯಲಾಗುತ್ತದೆ. ಎಲ್ಲಿಗೆ ಬೇಕಾದರೂ ನಡೆದುಕೊಂಡು ಹೋಗುವ ಸೌಲಭ್ಯ ಇರುತ್ತದೆ. ರಸ್ತೆ, ಕಾರು ಇಲ್ಲದೆ ಪ್ರಕೃತಿಯ ಮಧ್ಯೆ ನಿರ್ಮಾಣ ಮಾಡಲಾಗುತ್ತದೆ. 2030ರ ವೇಳೆಗೆ ಈ ನಗರದಲ್ಲಿ 10 ಲಕ್ಷ ಮಂದಿ ವಾಸಿಸಲಿದ್ದು, 3.80 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಸೌದಿ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಘೋಷಿಸಿದ್ದಾರೆ.

ಪಾದಚಾರಿಗಳಿಗೆ ಒತ್ತು ನೀಡಲಾಗುವ ಈ ನಗರಿಯಲ್ಲಿ ಶಾಲೆ, ಆರೋಗ್ಯ ಕೇಂದ್ರ ಹಾಗೂ ಹಸಿರು ಪ್ರದೇಶ ಇರಲಿದೆ. ಶರವೇಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ನಗರದಿಂದ ಯಾವುದೇ ಮೂಲೆಯನ್ನು ತಲುಪಲು 20 ನಿಮಿಷಕ್ಕಿಂತ ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಶೇ.100ರಷ್ಟುಶುದ್ಧ ಇಂಧನವನ್ನು ಈ ನಗರದಲ್ಲಿ ಬಳಸಲಾಗುತ್ತದೆ. ಮಾಲಿನ್ಯ ಮುಕ್ತ, ಆರೋಗ್ಯಯುತ, ಸುಸ್ಥಿರ ವಾತಾವರಣವನ್ನು ನಿವಾಸಿಗಳಿಗೆ ಒದಗಿಸಲಾಗುತ್ತದೆ. ಈ ನಗರದಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹೊಸ ಮೂಲಸೌಕರ್ಯ ಯೋಜನೆಗೆ 7ರಿಂದ 14 ಲಕ್ಷ ಕೋಟಿ ರು.ವರೆಗೂ ವೆಚ್ಚವಾಗಬಹುದು. 35 ಲಕ್ಷ ಕೋಟಿ ರು. ವೆಚ್ಚದ ಯೋಜನೆಯಾಗಿರುವ ‘ನಿಯೋಮ್‌’ನ ಒಂದು ಭಾಗವಾಗಿ ‘ದ ಲೈನ್‌’ ಇರಲಿದೆ. ಮುಂದಿನ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಪ್ರಕಟಿಸಿದ್ದಾರೆ.

ಏನಿದು ನಿಯೋಮ್‌?:

ಸೌದಿ ಅರೇಬಿಯಾದ ವಾಯವ್ಯ ದಿಕ್ಕಿನ ಹಿಂದುಳಿದ ಪ್ರದೇಶದಲ್ಲಿನ 10 ಸಾವಿರ ಚದರ ಮೈಲು ವಿಸ್ತಾರದಲ್ಲಿ ಹೊಸ ನಿರ್ಮಾಣ ಕೈಗೆತ್ತಿಕೊಳ್ಳುವ ಯೋಜನೆಯೇ ನಿಯೋಮ್‌. ಹೊಸ ತಂತ್ರಜ್ಞಾನ ಹಾಗೂ ಉದ್ಯಮ ವ್ಯವಹಾರದ ನೆಲೆಯನ್ನಾಗಿ ಅದನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಸೌದಿ ಹೊಂದಿದ್ದು, 2017ರಲ್ಲೇ ಘೋಷಣೆ ಮಾಡಿದೆ. ಇದಕ್ಕೆ 35 ಲಕ್ಷ ಕೋಟಿ ರು. ಖರ್ಚಾಗುವ ಅಂದಾಜಿದೆ.

ನಗರ ಹೇಗಿರುತ್ತದೆ?

- ರಸ್ತೆಗಳಿರುವುದಿಲ್ಲ. ಬದಲಿಗೆ ಮೆಟ್ರೋದಂಥ ಶರವೇಗದ ಸಾರ್ವಜನಿಕ ಸಾರಿಗೆ ಇರುತ್ತದೆ.

- ಪಾದಚಾರಿಗಳಿಗೆ ಒತ್ತು ನೀಡಲಾಗುತ್ತದೆ. ಶುದ್ಧ ಇಂಧನ ಬಳಕೆಗೆ ಮಾತ್ರ ಅವಕಾಶ.

- ನಗರವನ್ನು ಮಲಿನ ಮಾಡುವ ಯಾವ ಅಂಶಗಳೂ ಇಲ್ಲಿರುವುದಿಲ್ಲ.

- 170 ಕಿ.ಮೀ. ಉದ್ದದ ಈ ನಗರದ ಹೆಸರು ‘ದ ಲೈನ್‌.’ ಇದು 35 ಲಕ್ಷ ಕೋಟಿ ರು. ವೆಚ್ಚದ ‘ನಿಯೋಮ್‌’ ಯೋಜನೆಯ ಒಂದು ಭಾಗ.