ಟೈಟಾನಿಕ್ ಅವಶೇಷ ನೋಡಲು ಹೊರಟ 5 ಪ್ರವಾಸಿಗರು ನಾಪತ್ತೆಯಾಗಿ ಮೂರು ದಿನಗಳೇ ಉರುಳಿದೆ. ಇಂದು ಸಂಜೆ 7.15 ನಿಮಿಷಕ್ಕೆ ಸಬ್‌ಮರೀನ್‌ನ ಆಮ್ಲಜನಕ ಸಂಪೂರ್ಣ ಖಾಲಿಯಾಗಲಿದೆ. ಆದರೆ ಸಬ್‌ಮರೀನ್ ಇನ್ನೂ ಪತ್ತೆಯಾಗಿಲ್ಲ. ಪ್ರವಾಸಿಗರ ರಕ್ಷಣಾ ಕಾರ್ಯ ಇದೀಗ ಮತ್ತಷ್ಟು ಕಗ್ಗಂಟಾಗಿದೆ.

ನವದೆಹಲಿ(ಜೂ.22): ಟೈಟಾನಿಕ್ ದುರಂತವನ್ನು ಕಣ್ಣಾರೆ ನೋಡಲು ಹೋದ ಪ್ರವಾಸಿಗರು ಇದೀಗ ತಾವೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮುದ್ರದಲ್ಲಿ ಮುಳುಗಿದ ಟೈಟಾನಿಕ್‌ ಹಡಗಿನ ಅವಶೇಷಗಳ ದರ್ಶನಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ಸಬ್‌ಮರೀನ್‌ ಒಂದು ಅಮೆರಿಕದ ಸಮುದ್ರದಲ್ಲಿ ನಾಪತ್ತೆಯಾಗಿ ಇಂದು ನಾಲ್ಕನೇ ದಿನ. ಇಂದು ಸಂಜೆ 7.15ಕ್ಕೆ ಸಬ್‌ಮರೀನ್‌ನಲ್ಲಿರುವ ಎಲ್ಲಾ ಆಮ್ಲಜನಕ ಸಂಪೂರ್ಣ ಖಾಲಿಯಾಗಲಿದೆ. ಪ್ರವಾಸಿಗರನ್ನು ಜೀವಂತವಾಗಿ ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನಾಪತ್ತೆಯಾಗಿರುವ ಸಬ್‌ಮರೀನ್‌ನಲ್ಲಿ ಪ್ರವಾಸಿಗರು ಜೀವಂತವಾಗಿದ್ದಾರೆ ಅನ್ನೋ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.

ಕೆಲವೆ ಗಂಟೆಗಳಲ್ಲಿ ನಾಪತ್ತೆಯಾಗಿರುವ ಸಬ್‌ಮರೀನ್ ಪತ್ತೆ ಹಚ್ಚಿ ಪ್ರವಾಸಿಗರನ್ನು ರಕ್ಷಿಸಬೇಕಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಸತತ ಕಾರ್ಯಾಚರಣೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇನ್ನುಳಿದಿರುವ ಕೆಲವೇ ಕೆಲವು ಕ್ಷಣಗಳಲ್ಲಿ ಪ್ರವಾಸಿಗರ ರಕ್ಷಣೆ ಅತ್ಯಂತ ಕಠಿಣ ಸವಾಲಾಗಿದೆ. 

ಸಮುದ್ರದಾಳದಿಂದ ಕೇಳಿಬಂದ ಸದ್ದು: ಟೈಟಾನಿಕ್ ಅವಶೇಷ ನೋಡಲು ಹೊರಟವರು ಜೀವಂತ ?

ಸಬ್‌ಮರೀನ್‌ ಪತ್ತೆಗಾಗಿ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್‌ನ ತಜ್ಞರ ತಂಡ ಸತತ 4ನೇ ದಿನವೂ ಹುಡುಕಾಟ ಮುಂದುವರೆದಿದೆ. ಈ ನಡುವೆ ಹುಡುಕಾಟದಲ್ಲಿ ತೊಡಗಿರುವ ತಂಡವೊಂದು ಸಮುದ್ರದಾಳದಿಂದ ಪ್ರತಿ 30 ನಿಮಿಷಕ್ಕೆ ‘ಬಡಿತದ ಶಬ್ದ’ವ​ನ್ನು ಪತ್ತೆ ಮಾಡಿದೆ. ಹೀಗಾಗಿ ಸಬ್‌ಮರೀನ್‌ನಲ್ಲಿದ್ದ ಐವರು ಬದುಕುಳಿದಿರುವ ಸಣ್ಣದೊಂದು ಆಶಾಭಾವನೆ ವ್ಯಕ್ತವಾಗಿದೆ. ಆದರೆ ಈ ಶಬ್ದ ಹೊರತುಪಡಿಸಿ ಇನ್ಯಾವುದೇ ಮಾಹಿತಿ ಹಾಗೂ ಸುಳಿವು ಪತ್ತೆಯಾಗಿಲ್ಲ.

ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಆದರೆ ಈಗಾಗಲೇ ಶೋಧಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಜೆ 7.15ಕ್ಕೆ ಸಬ್‌ಮರೀನ್‌ನಲ್ಲಿನ ಎಲ್ಲಾ ಆಮ್ಮಜನಕ ಖಾಲಿಯಾಗಲಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಬ್‌ಮರೀನ್ ಪತ್ತೆಯಾಗದೇ ಹೋದಲ್ಲಿ ಪ್ರವಾಸಿಗರು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಅಮೆರಿಕ, ಸ್ಪೇನ್‌, ಕೆನಡಾದ ಸಬ್‌ಮರೀನ್‌, ವಿಮಾನಗಳನ್ನು ಬಳಸಿಕೊಂಡು ಭಾರೀ ಪ್ರಮಾಣದಲ್ಲಿ ಹುಡುಕಾಟ ಮುಂದುವರೆಸಲಾಗಿದೆ.

ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?

ಟ್ರಕ್‌ ಗಾತ್ರದ ಈ ಸಬ್‌ಮರೀನ್‌ 5 ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರವಾಸಿಗರನ್ನು 8 ದಿನಗಳ ಕಾಲ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಇದರಲ್ಲಿ 3800 ಮೀಟರ್‌ ಆಳದಲ್ಲಿನ ಟೈಟಾನಿಕ್‌ ಹಡಗಿನ ಅವಶೇಷ ವೀಕ್ಷಣೆ ಕೂಡಾ ಸೇರಿರುತ್ತದೆ. ಇಂಥ ಪ್ರವಾಸಕ್ಕೆ ಪ್ರತಿಯೊಬ್ಬರಿಗೂ 2 ಕೋಟಿ ರು. ಶುಲ್ಕ ವಿಧಿಸಲಾಗುತ್ತದೆ. ಜೂ.18ರಂದು ಸಬ್‌ಮರೀನ್‌ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು.

ಈ ಕುರಿತು ಹೇಳಿಕೆ ನೀಡಿರುವ ಪ್ರವಾಸ ಆಯೋಜಿಸುವ ಓಷನ್‌ಗೇಟ್‌ ಸಂಸ್ಥೆಯ ಅಧಿಕಾರಿಗಳು, ಏಕಾಏಕಿ ನಾಪತ್ತೆಯಾದ ‘ಟೈಟನ್‌ ಸಬಮರ್ಸಿಬಲ್‌’ ಪತ್ತೆಗಾಗಿ ಎರಡು ವಿಮಾನ, ಒಂದು ಸಬ್‌ಮರೀನ್‌ ಮತ್ತು ಸೋನಾರ್‌ ಬಯೋಸ್‌ ಅನ್ನು ಬಳಸಿಕೊಳ್ಳಲಾಗಿದೆ. ಸಬ್‌ಮರೀನ್‌ನಲ್ಲಿದ್ದ ಐವರ ರಕ್ಷಣೆ ನಮ್ಮ ಆದ್ಯತೆ ಎಂದು ತಿಳಿಸಿದೆ.