ಲಂಡನ್‌(ನ.02): ಕೊರೋನಾ 2ನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದ ಬೆನ್ನಲ್ಲೇ ಬ್ರಿಟನ್‌ ಸರ್ಕಾರ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡಿದೆ. ನ.5ರ ಗುರುವಾರದಿಂದ ಜಾರಿಗೆ ಬರಲಿರುವ ನಾಲ್ಕು ವಾರಗಳ ಲಾಕ್‌ಡೌನ್‌ ಡಿ.2ರವರೆಗೂ ಜಾರಿಯಲ್ಲಿರುತ್ತದೆ. ಕೊರೋನಾ ನಿಗ್ರಹಕ್ಕೆ 2ನೇ ಬಾರಿ ಲಾಕ್‌ಡೌನ್‌ ಮೊರೆ ಹೋದ ಯುರೋಪಿನ 2ನೇ ದೇಶ ಬ್ರಿಟನ್‌ ಆಗಿದೆ. ಈಗಾಗಲೇ ಫ್ರಾನ್ಸ್‌, ಜರ್ಮನಿಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ.

ಬ್ರಿಟನ್‌ನಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಸೋಂಕಿತರು ಕಂಡುಬರುತ್ತಿದ್ದಾರೆ. ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ ಮೃತರ ಸಂಖ್ಯೆ 80 ಸಾವಿರದ ಗಡಿ ದಾಟಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆತುರಾತುರವಾಗಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ ಬೋರಿಸ್‌ ಜಾನ್ಸನ್‌, 4 ವಾರಗಳ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ.

ಶಿಕ್ಷಣ, ಉದ್ಯೋಗ, ವ್ಯಾಯಾಮ, ಅವಶ್ಯ ವಸ್ತು ಹಾಗೂ ಔಷಧಗಳ ಖರೀದಿ ಅಥವಾ ಅನಾರೋಗ್ಯಪೀಡಿತರ ಆರೈಕೆಗಾಗಿ ಮಾತ್ರ ಲಾಕ್‌ಡೌನ್‌ ವೇಳೆ ಜನರಿಂದ ಮನೆಯಿಂದ ಹೊರಬರಬಹುದು. ಅವಶ್ಯ ವಸ್ತು ಮಳಿಗೆಗಳು, ಶಾಲಾ- ಕಾಲೇಜುಗಳು ತೆರೆದಿರುತ್ತವೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಬಂದ್‌ ಆಗಲಿದ್ದು, ಪಾರ್ಸೆಲ್‌ ಪಡೆಯಲು ಅವಕಾಶ ಇರುತ್ತದೆ. ಅತ್ಯವಶ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂದ್‌ ಆಗಿರುತ್ತವೆ ಎಂದು ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ತಾತ್ಕಾಲಿಕವಾಗಿ ಉದ್ಯೋಗ ಕಳೆದುಕೊಂಡವರಿಗೆ ಅವರ ವೇತನದ ಶೇ.80ರಷ್ಟುಹಣವನ್ನು ನೀಡಲು ಕೊರೋನಾ ವೈರಸ್‌ ಸಂಬಳ ಸಬ್ಸಿಡಿ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತದೆ ಎಂದಿದ್ದಾರೆ.

ಕೊರೋನಾ ಮೊದಲ ಅಲೆ ಕಂಡುಬಂದಾಗ ಮಾ.23ರಿಂದ ಜು.4ರವರೆಗೆ ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಕೊರೋನಾ ಕಾಣಿಸಿಕೊಂಡ 28 ದಿನದೊಳಗೆ ಸಾವಿಗೀಡಾದವರ ಸಂಖ್ಯೆ ಬ್ರಿಟನ್‌ನಲ್ಲಿ 46555 ಇದೆ. ಕೋವಿಡ್‌ ಮರಣ ಪ್ರಮಾಣ ಪತ್ರಗಳ ಸಂಖ್ಯೆ 58925ರಷ್ಟಿದೆ. ಕೊರೋನಾದಿಂದ ಅತಿ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್‌, ಭಾರತ, ಮೆಕ್ಸಿಕೋ ಬಳಿಕ ಬ್ರಿಟನ್‌ 5ನೇ ಸ್ಥಾನದಲ್ಲಿದೆ.

ಜನರ ಎಚ್ಚರದಿಂದಿರಿ.. ಭಾರತದಲ್ಲಿ ಮತ್ತೆ ಲಾಕ್‌ಡೌನ್‌ ತಪ್ಪಿಸಿ

ಕೊರೋನಾ 2ನೇ ಅಲೆಗೆ ಯೂರೋಪ್‌ ತತ್ತರಿಸಿ ಮತ್ತೆ ಲಾಕ್‌ಡೌನ್‌ ಮೊರೆ ಹೋಗಿದೆ. ಭಾರತದಲ್ಲೂ ಜನರು ಎಚ್ಚರದಿಂದ ಇರಬೇಕು ಎಂದು ಕನ್ನಡಪ್ರಭ ಸರಣಿ ಸುದ್ದಿಗಳನ್ನು ಪ್ರಕಟಿಸಿ ಆಗಾಗ್ಗೆ ಎಚ್ಚರಿಸುತ್ತಿದೆ. ಹಬ್ಬದ ಸಮಯವಾದ್ದರಿಂದ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಮೈಮರೆಯದೆ ಮತ್ತೆ ಲಾಕ್‌ಡೌನ್‌ ತಪ್ಪಿಸಿ.

ಕನ್ನಡಪ್ರಭ ಕಳಕಳಿ