ನವದೆಹಲಿ[ನ.17]: 9ರ ಪ್ರಾಯದ ಪೋರನೊಬ್ಬ ಎಂಜಿನಿಯರಿಂಗ್‌ ಪದವಿ ಪಡೆಯಲಿದ್ದಾನೆ..! ಇದು ನಂಬಲು ಕೊಂಚ ಕಷ್ಟವಾದರೂ ದಿಟವೇ. ಅರ್ಧ ಬೆಲ್ಜಿಯಂ ಮತ್ತು ಅರ್ಧ ಡಚ್‌ ಮೂಲದವನಾದ ಲಾರೆಂಟ್‌ ಸಿಮನ್ಸ್‌ ಎಂಬ 9 ವರ್ಷದ ಹುಡುಗನೇ ಎಂಜಿನಿಯರಿಂಗ್‌ ಪದವಿ ಪಡೆಯುವ ಸಿದ್ಧತೆಯಲ್ಲಿದ್ದಾನೆ.

ಈ ಪುಟ್ಟಪ್ರತಿಭೆ ನೆದರ್‌ಲ್ಯಾಂಡ್‌ನ ಐಡ್ಹೋವನ್‌ ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ(ಟಿಯುಇ) ಇದೇ ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆಯಲಿದ್ದಾನೆ.

ಲಾರೆಂಟ್‌ 145 ಐಕ್ಯೂ(ಬುದ್ಧಿಮತ್ತೆ ಪ್ರಮಾಣ) ಹೊಂದಿದ್ದಾನೆ. ಈತ ತನ್ನ ಪ್ರೌಢಶಾಲಾ ಅಧ್ಯಯನವನ್ನು 8ನೇ ವಯಸ್ಸಿನಲ್ಲಿ 18 ತಿಂಗಳಲ್ಲಿ ಪೂರೈಸಿದ್ದಾನಂತೆ. ಇದೀಗ ಪ್ರಸಕ್ತ ಸಾಲಿನ ಪದವಿ ಕೋರ್ಸ್‌ಗೆ ಸೇರುವ ಮೂಲಕ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ವಿದ್ಯಾರ್ಥಿ ಎಂದು ದಾಖಲಾಗಿದ್ದಾನೆ.

ಈ ಕಿರಿಯ ಪ್ರತಿಭೆಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಸೇರಿಸಿಕೊಳ್ಳಲು ಪ್ರಪಂಚದ ಹಲವು ಖ್ಯಾತನಾಮ ವಿವಿಗಳು ಹಿಂದೆ ಬಿದ್ದಿವೆಯಂತೆ. ಒಂದು ವೇಳೆ ಲಾರೆಂಟ್‌ ಸಿಮನ್ಸ್‌ ಎಂಜಿನಿಯರಿಂಗ್‌ ಪದವಿ ಸಾಧನೆ ಮಾಡಿದಲ್ಲಿ ವಿಶ್ವದ ಅತಿ ಕಿರಿಯ ಪದವೀಧರ ಎಂಬ ಖ್ಯಾತಿ ಹೊಂದಲಿದ್ದಾನೆ. ಈ ಹಿಂದೆ ಮೈಕಲ್‌ ಎಂಬ ಪೋರ ಅಲಬಾನಾ ವಿಶ್ವವಿದ್ಯಾಲಯದಿಂದ ತನ್ನ 10ನೇ ವಯಸ್ಸಿನಲ್ಲಿ ಪದವಿ ಪಡೆದ ದಾಖಲೆ ಹೊಂದಿದ್ದಾನೆ.